ನವದೆಹಲಿ: ಶ್ರೀರಾಮನ ದರ್ಶನಕ್ಕೆ 2031ರ ವೇಳೆಗೆ ಪ್ರತಿವರ್ಷ ಅಯೋಧ್ಯೆಗೆ 10.62 ಕೋಟಿ ಭಕ್ತಾದಿಗಳು ಭೇಟಿ ನೀಡುವ ನಿರೀಕ್ಷೆ ಇದ್ದು, ಜನರ ಅಲ್ಪಾವಧಿಯ ಮತ್ತು ದೀರ್ಘಾವಧಿಯ ವಸತಿ ಅಗತ್ಯತೆಗಳನ್ನು ಪೂರೈಸಲು ಅಯೋಧ್ಯೆಯಲ್ಲಿ 8500 ರಿಂದ 12,500 ಬ್ರಾಂಡೆಡ್ ಹೋಟೆಲ್ ರೂಂ ಗಳು ಬೇಕಾಗಲಿವೆ ಎಂದು ಹೋಟೆಲ್ ನಿರ್ವಹಣಾ ಸಂಸ್ಥೆಯ ವಿಶ್ಲೇಷಣಾ ವರದಿ ಹೇಳಿದೆ.
ಈ ಮೂಲಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆಗೆ ಬರುವ ದಿನಗಳಲ್ಲಿ ಹೋಟೆಲ್ಗಳ ಪ್ರಮುಖ ಮಾರುಕಟ್ಟೆಯಾಗಿ ಬೆಳವಣಿಗೆ ಹೊಂದಲಿದೆ. 2017 ಕ್ಕಿಂತ ಮುಂಚೆ ಏನೂ ಇಲ್ಲದ ಸ್ಥಿತಿಯಿಂದ ಅಯೋಧ್ಯೆ ಈಗ ಬೃಹತ್ ವ್ಯಾಪಾರಿ ಕೇಂದ್ರವಾಗಲಿದೆ ಎಂದು ಹೋಟೆಲಿವೇಟ್ (Hotelivate) ತಿಳಿಸಿದೆ.
ರಾಮ ಮಂದಿರ ಪ್ರತಿಷ್ಠಾಪನೆಗೆ ಮುನ್ನ ಬಜೆಟ್ ಮತ್ತು ಎಕಾನಮಿ ವಿಭಾಗದಲ್ಲಿ ಕೇವಲ ಎರಡು ಬ್ರಾಂಡೆಡ್ ಹೋಟೆಲ್ಗಳು ಆಯೋಧ್ಯೆಯಲ್ಲಿ ಆರಂಭವಾಗಿವೆ. ಈ ಮಧ್ಯೆ ಹೊಸ ಹೋಟೆಲ್ಗಳ ನಿರ್ಮಾಣಕ್ಕಾಗಿ ಹಲವಾರು ದೊಡ್ಡ ಕಂಪನಿಗಳು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ. ಆದರೆ ಈ ಹೊಸ ಹೋಟೆಲ್ಗಳು ನಿರ್ಮಾಣಗೊಂಡು ಜನರ ಸೇವೆಗೆ ಲಭ್ಯವಾಗಲು ಕನಿಷ್ಠ ಮೂರರಿಂದ ಐದು ವರ್ಷ ಬೇಕಾಗಲಿದೆ.
ಮಿಹಿರ್ ಚಾಲಿಜಾಜರ್ ಮತ್ತು ಹೋಟೆಲಿವೇಟ್ ಸಿಇಒ ಮಾನವ್ ತಡಾನಿ ಅವರು ತಯಾರಿಸಿರುವ ವರದಿಯ ಪ್ರಕಾರ- ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವ ಸರ್ಕಾರದ ಕಾರ್ಯತಂತ್ರದ ಯೋಜನೆಯು ದೇಶಾದ್ಯಂತ ಬೆಳೆಯುತ್ತಿರುವ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರವಾಸೋದ್ಯಮದ ಪ್ರವೃತ್ತಿಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದೆ.
ಪ್ರವಾಸೋದ್ಯಮ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ, 2022 ರಲ್ಲಿ ಧಾರ್ಮಿಕ ಮತ್ತು ಅಧ್ಯಾತ್ಮಿಕ ಕೇಂದ್ರಗಳು (ವಾರಣಾಸಿ, ರಿಷಿಕೇಶ್, ಕತ್ರಾ, ಹರಿದ್ವಾರ, ತಿರುಪತಿ ಮತ್ತು ದ್ವಾರಕಾ ಸೇರಿದಂತೆ) ಸುಮಾರು 1.3 ಲಕ್ಷ ಕೋಟಿ ರೂ.ಗಳ (16 ಬಿಲಿಯನ್ ಡಾಲರ್) ಆದಾಯ ಗಳಿಸಿವೆ ಮತ್ತು ಒಟ್ಟು 140 ಕೋಟಿ (1.4 ಬಿಲಿಯನ್) ಜನ ಈ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇದು ಸರಿಸುಮಾರು ಭಾರತದಲ್ಲಿ ವ್ಯಕ್ತಿಯೊಬ್ಬ ವರ್ಷಕ್ಕೆ ಒಂದು ಧಾರ್ಮಿಕ ಪ್ರವಾಸ ಕೈಗೊಳ್ಳುವುದಕ್ಕೆ ಸಮನಾಗುತ್ತದೆ.
"ಅಯೋಧ್ಯೆಯ ಪ್ರವಾಸೋದ್ಯಮವು 2017 ರಲ್ಲಿ ವಾರ್ಷಿಕ ದೀಪೋತ್ಸವ ಆಚರಣೆಯೊಂದಿಗೆ ಬೆಳವಣಿಗೆಯಾಗಲು ಪ್ರಾರಂಭವಾಯಿತು ಮತ್ತು 2019 ರಲ್ಲಿ ಸುಪ್ರೀಂ ಕೋರ್ಟ್ನ ರಾಮ ಮಂದಿರ ತೀರ್ಪಿನ ನಂತರ ವೇಗ ಪಡೆಯಿತು. 2023 ರಲ್ಲಿ, ಮೂರು ಕೋಟಿಗೂ ಹೆಚ್ಚು ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ಅಂದಾಜಿನ ಪ್ರಕಾರ 2031 ರ ವೇಳೆಗೆ ದಿನಕ್ಕೆ ಸುಮಾರು ಮೂರು ಲಕ್ಷ ಪ್ರವಾಸಿಗರು ಆಗಮಿಸಬಹುದು" ಎಂದು ವರದಿ ಹೇಳಿದೆ.
ರಾಡಿಸನ್ ಅಯೋಧ್ಯಾ ಇತ್ತೀಚೆಗೆ ಉದ್ಘಾಟಿಸಿದ ಪಾರ್ಕ್ ಇನ್ ಮತ್ತು ಕ್ಲಾರ್ಕ್ಸ್ ಇನ್ ಎಕ್ಸ್ ಪ್ರೆಸ್ ಈ ಸಮಯದಲ್ಲಿ ಅಯೋಧ್ಯೆಯಲ್ಲಿ ಲಭ್ಯವಿರುವ ಏಕೈಕ ಬ್ರಾಂಡೆಡ್ ಹೋಟೆಲ್ ಗಳಾಗಿವೆ. ಪ್ರಮುಖ ಹಾಸ್ಪಿಟ್ಯಾಲಿಟಿ ಬ್ರಾಂಡ್ಗಳಾದ ಐಎಚ್ಸಿಎಲ್ (ತಾಜ್ ಹೋಟೆಲ್ಸ್), ಮ್ಯಾರಿಯಟ್, ಕ್ಲಬ್ ಮಹೀಂದ್ರಾ, ವಿಂಧಮ್, ದಿ ಲೀಲಾ ಪ್ಯಾಲೇಸ್ ಮತ್ತು ಐಟಿಸಿ ಹೋಟೆಲ್ಗಳು ಅಯೋಧ್ಯೆಯಲ್ಲಿ ಹೋಟೆಲ್ ಆರಂಭಿಸಲು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ ಮತ್ತು ಇದರಲ್ಲಿ ಕೆಲ ಕಂಪನಿಗಳು ಈಗಾಗಲೇ ಹೋಟೆಲ್ ಆರಂಭಿಸಲು ತಮ್ಮ ಮೊದಲ ಒಪ್ಪಂದಕ್ಕೆ ಸಹಿ ಹಾಕಿವೆ.
ಇದನ್ನೂ ಓದಿ : ಬೇಡಿಕೆ ಕುಸಿತ: ಮಧ್ಯ ಪ್ರಾಚ್ಯ ಬಿಕ್ಕಟ್ಟಿನ ಹೊರತಾಗಿಯೂ ಏರದ ಕಚ್ಚಾತೈಲ ಬೆಲೆ