ಪೋರಬಂದರ್ (ಗುಜರಾತ್):ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ)ದಿಂದ ದಂಡೆನೆಗೆ ಒಳಗಾಗಿರುವ ಆನ್‌ಲೈನ್ ಪಾವತಿ ಸಂಸ್ಥೆಯಾದ ಪೇಟಿಎಂ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ತನ್ನ ಸಂಸ್ಥೆಯ ಉದ್ಯೋಗಿಗೆ ವಂಚನೆ ಮಾಡಿದ ಆರೋಪ ಇದಾಗಿದ್ದು, ಸಂಸ್ಥೆಯ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.
ಆನ್‌ಲೈನ್ ಪಾವತಿ ಸಂಸ್ಥೆಯಾದ ಪೇಟಿಎಂ ಫೀಲ್ಡ್ ವರ್ಕ್ ಉದ್ಯೋಗಿಗಳಿಗೆ ಪ್ರಯಾಣ ಭತ್ಯೆ (ಟಿಎ) ಪಾವತಿಸುವುದನ್ನು ನಿಲ್ಲಿಸಿದೆ. ಉದ್ಯೋಗ ನೀಡುವ ವೇಳೆ ಪ್ರಯಾಣ ಭತ್ಯೆಯ ಭರವಸೆ ನೀಡಿದ್ದ ಕಂಪನಿ ಈಗ, ವಂಚಿಸಿದೆ ಎಂದು ಆರೋಪಿಸಿ ಪೋರಬಂದರ್‌ನಲ್ಲಿನ ಉದ್ಯೋಗಿಯೊಬ್ಬ ಕಂಪನಿಗೆ ಹಣ ಪಾವತಿಸುವಂತೆ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದಾನೆ.
ಮಾಹಿತಿಯ ಪ್ರಕಾರ, ಪೋರಬಂದರ್‌ನ ವಾಸಿಯಾಗಿರುವ ನಿಹಾರ್ ಮೊನಾನಿ ಎಂಬ ವ್ಯಕ್ತಿ ಪೇಟಿಎಂನ ಮಾಜಿ ಉದ್ಯೋಗಿಯಾಗಿದ್ದಾರೆ. 2023 ರಲ್ಲಿ ಅವರು 4 ತಿಂಗಳವರೆಗೆ ಸಂಸ್ಥೆಯಲ್ಲಿ ದುಡಿದಿದ್ದಾರೆ. ಕಂಪನಿಯೂ ಈ ವ್ಯಕ್ತಿಯನ್ನು ಆನ್‌ಲೈನ್ ಮೂಲಕ ನೇಮಕಾತಿ ಮಾಡಿಕೊಂಡಿದೆ. ಹೆದ್ದಾರಿಗಳಲ್ಲಿನ ಎಲ್ಲಾ ಟೋಲ್ಗಳಲ್ಲಿ ಫಾಸ್ಟ್ಟ್ಯಾಗ್ ಮಾರಾಟ ಮಾಡುವ ಕೆಲಸ ಇವರದ್ದಾಗಿತ್ತು. ಫೀಲ್ಡ್ ವರ್ಕ್ ಇದಾಗಿದ್ದರಿಂದ ಪ್ರಯಾಣ ಭತ್ಯೆ ನೀಡುವುದಾಗಿ ಸಂಸ್ಥೆ ಮೊದಲು ಭರವಸೆ ನೀಡಿತ್ತು ಎನ್ನಲಾಗಿದೆ.