ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿಂದು ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, "ಇಂದು ದೆಹಲಿ ಅಭಿವೃದ್ಧಿಗೆ ಅತ್ಯಂತ ಮಹತ್ವದ ದಿನ. ಈ ಯೋಜನೆಗಳು ಮುಂದಿನ ಪೀಳಿಗೆಯನ್ನು ಜ್ಞಾನ, ಅವಿಷ್ಕಾರ ಮತ್ತು ಅವಕಾಶಗಳ ಮೂಲಕ ಸಬಲಗೊಳಿಸಿ, ಪೋಷಿಸಲಿವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯನ್ನು ತೋರಿಸುತ್ತದೆ" ಎಂದು ತಿಳಿಸಿದ್ದಾರೆ.
"ಭಾರತದ ಪ್ರತಿಯೊಬ್ಬರಿಗೂ ಸೂಕ್ತ ಮನೆ ನೀಡುವ ಭರವಸೆಗೆ ನಾವು ಬದ್ಧ. ಇಂದು ಕೊಳೆಗೇರಿ ಪುನರ್ವಸತಿ ಯೋಜನೆ ಅಡಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ 1,675 ಫ್ಲಾಟ್‌ಗಳನ್ನು ಉದ್ಘಾಟಿಸಲಾಗುವುದು. ಈ ಮೂಲಕ ಜನರಿಗೆ ಉತ್ತಮ ಮತ್ತು ಆರೋಗ್ಯಯುತ ನಿವಾಸದ ಭರವಸೆ ನೀಡುತ್ತಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ ಸರ್ಕಾರಿ ಉದ್ಯೋಗಿಗಳಿಗೆ ಸರೋಜಿನಿ ನಗರ್‌ನಲ್ಲಿ ಹೊಸ ಟೈಪ್ 2 ಕ್ವಾರ್ಟ್ರಸ್ ಪ್ರಯೋಜನಕಾರಿಯಾಗಿದೆ" ಎಂದರು.
ಇದೇ ವೇಳೆ, ಪ್ರಧಾನಿ ಮೋದಿ ಶಿಕ್ಷಣ ವಲಯದಲ್ಲಿನ ಮೂಲಸೌಕರ್ಯ ಯೋಜನೆಗೆ ಕಾಲೇಜು ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಈ ಕಾಲೇಜಿಗೆ ವೀರ್ ಸಾವರ್ಕರ್ ಎಂದು ಹೆಸರಿಡಲಾಗುವುದು. ಇದು ವಿದ್ಯಾರ್ಥಿಗಳಿಗೆ ಉನ್ನತ ಕಲಿಕೆಯ ಪರಿಸರ ನೀಡುವ ಜೊತೆಗೆ ಶೈಕ್ಷಣಿಕ ಮೂಲಸೌಕರ್ಯವನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೆಹಲಿಯನ್ನು ಶಿಕ್ಷಣದ ಹಬ್ ಆಗಿ ಗುರುತಿಸುವ ಮೂಲಕ ಭಾರತದೆಲ್ಲೆಡೆ ಇಲ್ಲಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಸಹಾಯಕಾರಿಯಾಗಲಿದೆ.
ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಕಾವೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. 2013ರಿಂದ ಸರ್ಕಾರದಲ್ಲಿರುವ ಎಎಪಿಯ ಹಿಡಿತವನ್ನು ತಪ್ಪಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ: ಅಚ್ಚರಿ...! ಹೃದಯಾಘಾತವಾಗಿ ಮೃತಪಟ್ಟ ವ್ಯಕ್ತಿ ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ಬದುಕಿದ!