ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸೂತಕದ ಛಾಯೆ ಆವರಿಸಿದೆ. ಮೈಕ್ರೋಫೈನಾನ್ಸ್ ಹಾವಳಿಯಿಂದ ಜನರು ಸಾಲದ ಸುಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಹಾಸನದ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಸುಮಾರು 25ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸರಿಸುಮಾರು 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದರೆ ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಅಡಗಿ ಕುಳಿತಿದ್ದ ರೌಡಿಗಳು ಹೊರಬಂದು ಅಟ್ಟಹಾಸ ಮರೆಯುತ್ತಿದ್ದಾರೆ. ಪರೋಕ್ಷವಾಗಿ ರೌಡಿಗಳಿಗೆ ಉದ್ಯೋಗ ಭಾಗ್ಯವನ್ನು ಕೊಟ್ಟಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬೀದರ್, ಮಂಗಳೂರು, ಹಾಸನ ಸೇರಿದಂತೆ ನಾನಾ ಭಾಗಗಳಲ್ಲಿ ಕೊಲೆ, ಸುಲಿಗೆ, ದರೋಡೆಗಳು ಹೆಚ್ಚಾಗುತ್ತಿವೆ. ಇವೆಲ್ಲವನ್ನೂ ನೋಡಿಕೊಂಡು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರ ಮೇಲೆ ಜನರಿಗೆ ಭಯ ಇಲ್ಲದಾಗಿದೆ. ಕೆಲವು ಪೊಲೀಸರು ವರ್ಗಾವಣೆ ಧಂದೆ ಮೂಲಕ ಬಂದಿರುವುದರಿಂದ ನಮಗ್ಯಾಕೆ ಅಂತ ಸುಮ್ಮನಾಗಿ ಕುಳಿತಿದ್ದಾರೆಂದು ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು.
ಸಿದ್ದರಾಮಯ್ಯನವರು ನವಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು. ತದನಂತರ ಡಿಕೆಶಿ ಅಥವಾ ಪರಮೇಶ್ವರ್ ಇಬ್ಬರಲ್ಲಿ ಯಾರು ಸಿಎಂ ಆಗುತ್ತಾರೋ ಗೊತ್ತಿಲ್ಲ. ಆದರೆ, ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಕೇರಳ ರಾಜ್ಯದ ರೀತಿ ನಮ್ಮ ರಾಜ್ಯವು ಪಾಪರ್ ಚೀಟಿ ತೆಗೆದುಕೊಳ್ಳುವ ಸಮಯ ಹತ್ತಿರವಾಗುತ್ತಿದೆ. ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರ ದಿವಾಳಿಯತ್ತ ಸಾಗಿರುವುದೇ ಸ್ಪಷ್ಟ ಕಾರಣ. ನಮ್ಮ ಸರ್ಕಾರದಲ್ಲಿ ನಿಗಮಗಳಿಗೆ ಸರಿಸುಮಾರು 2000 ಕೋಟಿ ಅಷ್ಟು ಹಣ ನೀಡಿದ್ದು, ಕಾಂಗ್ರೆಸ್ ಸರ್ಕಾರ ಕೇವಲ 600 ಕೋಟಿ ಮಾತ್ರ ಸಾಲ ನೀಡಿದೆ ಎಂದು ಕೆಲವು ಅಂಕಿ-ಅಂಶಗಳನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟರು.
ಮೈಕ್ರೋಫೈನಾನ್ಸ್ಗಳಲ್ಲಿ ಅತೀ ಹೆಚ್ಚು ಸಾಲ ಪಡೆಯುತ್ತಿರುವುದು ಹಿಂದುಳಿದ ಹಾಗೂ ದಲಿತ ಸಮುದಾಯದವರು. ಹೀಗಾಗಿ ಹೆಚ್ಚು ಬಡ್ಡಿ ಕಟ್ಟಲಾಗದೇ ಅವರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಅಭಿವೃದ್ಧಿ ನಿಗಮಗಳಿಗೆ ಕಾನೂನು ಬದ್ಧವಾಗಿ ಹಣ ಬಿಡುಗಡೆ ಮಾಡಿದರೆ ನಿಗಮಗಳು ತಮ್ಮ ತಮ್ಮ ಸಮಾಜಕ್ಕೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ಸಹಾಯದ ಜೊತೆಗೆ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸಾಲ ಸೌಲಭ್ಯ ನೀಡುತ್ತದೆ. ಹೀಗಾಗಿ, ಕೂಡಲೇ ಸರ್ಕಾರ ಕನಿಷ್ಠ 5000 ಕೋಟಿಯನ್ನ ಆದರೂ ಶೀಘ್ರ ಬಿಡುಗಡೆ ಮಾಡಿ, ಫೈನಾನ್ಸ್ ಹಾವಳಿಯನ್ನು ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಆರ್ ಅಶೋಕ್ ಸಲಹೆ ನೀಡಿದರು.
ಬಿಜೆಪಿಯ ಒಳಜಗಳದ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ಪಾರ್ಟಿಯ ಶಿಸ್ತಿನ ಸಿಪಾಯಿ. ಮನೆಯೊಳಗೆ ಏನು ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ. ಹೊರಗೆ ಏನು ಮಾತನಾಡಬೇಕು, ಅದನ್ನು ಮಾತನಾಡಿದ್ದೇನೆ. ಇತಿಹಾಸದಲ್ಲಿ ನಾನು ಪಾರ್ಟಿ ವಿಚಾರಗಳನ್ನು ಹೊರಗಡೆ ಮಾತನಾಡಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಂದಾಗ ಕರ್ನಾಟಕದ ಸ್ಥಿತಿಗತಿಗಳನ್ನು ವಿವರಿಸಿದ್ದೇನೆ. ನಾನು ಕೂಡ ದೆಹಲಿ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ. ಮುಂದಿನ 15-20 ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನ ಹೊರಬೀಳಲಿದೆ. ಬಿಜೆಪಿ ಬಿಟ್ಟು ಹೋದವರು ಉದ್ಧಾರವಾಗಿಲ್ಲ ಎಂಬುದನ್ನು ಉಲ್ಲೇಖಿಸಿ, ಬಿಜೆಪಿ ನನ್ನ ಶಕ್ತಿ, ಆಮೇಲೆ ಅಶೋಕ್. ಆಚೆ ಹೋದರೆ ನನ್ನ ಶಕ್ತಿ ಜೀರೋ ಎಂದು ಹೇಳಿದರು.
ಇದನ್ನೂ ಓದಿ: ''ರಾಜ್ಯಕ್ಕೆ ಸಿದ್ದರಾಮಯ್ಯನವರ ಆರನೇ ಭಾಗ್ಯ ಗೂಂಡಾಗಳ ಭಾಗ್ಯ'' - ವಿಪಕ್ಷ ನಾಯಕ ಆರ್ ಅಶೋಕ್ - MICROFINANCE TORTURE