ನವದೆಹಲಿ: ರಾಷ್ಟ್ರ ರಾಜಧಾನಿಗೆ ದಟ್ಟ ಮಂಜಿನ ಹೊದಿಕೆ ಆವರಿಸಿದ್ದು, ವೀಕ್ಷಣಾ ಸಾಮರ್ಥ್ಯ ಕುಸಿದು 100ಕ್ಕೂ ಹೆಚ್ಚು ವಿಮಾನ ಹಾರಾಟ ಮತ್ತು ರೈಲು ಸೇವೆ ಸ್ಥಗಿತಗೊಂಡಿದೆ. ದೆಹಲಿಯಿಂದ ಹೊರಡಬೇಕಿದ್ದ ಸುಮಾರು 24 ರೈಲುಗಳು ಹವಾಮಾನ ಸಂಬಂಧಿತ ಪರಿಸ್ಥಿತಿಯಿಂದಾಗಿ ಸಂಚರಿಸಲು ಸಾಧ್ಯವಾಗಿಲ್ಲ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಡಿಐಎಎಲ್) ಪ್ರಕಟಣೆ ಹೊರಡಿಸಿ, "ಪ್ರತಿಕೂಲ ಹವಾಮಾನದಿಂದಾಗಿ ಕಡಿಮೆ ವೀಕ್ಷಣಾ ಸಾಮರ್ಥ್ಯದ ಪರಿಸ್ಥಿತಿ ಉಂಟಾಗಿದೆ. ವಿಮಾನದ ಟೇಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ಸಮಸ್ಯೆಯಾಗಿದೆ. ಪ್ರಯಾಣಿಕರು ಸಂಬಂಧಿಸಿದ ವಿಮಾನ ಸಂಸ್ಥೆಗಳಿಂದ ಮಾಹಿತಿ ಪಡೆಯಬೇಕು" ಎಂದು ಬೆಳಗ್ಗೆ 6.35ಕ್ಕೆ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ರೈಲು ಸೇವೆಯಲ್ಲೂ ವ್ಯತ್ಯಯವಾಗಿದೆ. ಅಯೋಧ್ಯೆ ಎಕ್ಸ್ಪ್ರೆಸ್ ನಾಲ್ಕು ಗಂಟೆ ತಂಡವಾದರೆ, ಗೊರಖ್‌ಧಾಮ್ ಎಕ್ಸ್ಪ್ರೆಕ್ಸ್ ಎರಡು ಮತ್ತು ಬಿಹಾರ್ ಕ್ರಾಂತಿ ಎಕ್ಸ್ಪ್ರೆಸ್ ಹಾಗೂ ಶ್ರಮ್ ಶಕ್ತಿ ಎಕ್ಸ್ಪ್ರೆಸ್ ಮೂರು ಗಂಟೆ ತಡವಾಗಿದೆ.
ದೆಹಲಿಯಲ್ಲಿ ಇಂದು ಮುಂಜಾನೆ 5.30ರ ಹೊತ್ತಿಗೆ 9.6 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಲಾಖೆಯ ಕಳೆದ 24 ಗಂಟೆಗಳ ದತ್ತಾಂಶದ ಪ್ರಕಾರ, ದೆಹಲಿಯಲ್ಲಿ ಜನವರಿ 8ರವರೆಗೆ ದಟ್ಟ ಮಂಜು ಮುಸುಕಿದ ವಾತಾವರಣವಿರಲಿದೆ. ಜನವರಿ 6ರಂದು ಹಗುರ ಮಳೆಯಾಗಲಿದೆ.
ಕುಸಿದ ಗಾಳಿಯ ಗುಣಮಟ್ಟ: ದಟ್ಟ ಮಂಜಿನ ನಡುವೆ ದೆಹಲಿ ವಾಯು ಗುಣಮಟ್ಟವೂ ಕುಸಿದಿದ್ದು, ಎಕ್ಯೂಐ 318 ದಾಖಲಾಗುವ ಮೂಲಕ ತೀವ್ರ ಕಳಪೆ ವರ್ಗದಲ್ಲಿದೆ. ಗರಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ ತಾಪಮಾನ 8 ಡಿಗ್ರಿಯಾಗಿದೆ.
ಇದನ್ನೂ ಓದಿ: ಕ್ವಾಜಾ ಮೊಯಿನುದ್ದಿನ್ ಚಿಷ್ಟಿ ಉರುಸ್: ಅಜ್ಮೀರ್ ಶರೀಫ್ ದರ್ಗಾಕ್ಕೆ ಚಾದರ್ ಕಳುಹಿಸಿದ ಪ್ರಧಾನಿ ಮೋದಿ