ರಾಜಣ್ಣ- ಸಿರಿಸಿಲ್ಲ (ತೆಲಂಗಾಣ): ಶಾಲೆಗಳಲ್ಲಿ ಬಾರಿಸುವ ಗಂಟೆಗಳು ವಿದ್ಯಾರ್ಥಿಗಳಿಗೆ ತರಗತಿ ಪ್ರಾರಂಭ ಮತ್ತು ಅಂತ್ಯದ ಕುರಿತು ಎಚ್ಚರಿಸುವ ಕರೆ ಗಂಟೆಗಳಾಗಿವೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಆದರೆ, ಇದೇ ಗಂಟೆಗಳ ಮೂಲಕ ಮಕ್ಕಳಿಗೆ ನೀರು ಕುಡಿಯಬೇಕು ಎಂದು ಎಚ್ಚರಿಸುವ ಪ್ರಯತ್ನವನ್ನು ಇದೀಗ ಅನೇಕ ಶಾಲೆಗಳು ಅಳವಡಿಸಿಕೊಳ್ಳುತ್ತಿವೆ.
ಪಾಠ - ಓದುಗಳಲ್ಲಿ ಮುಳುಗುವ ಮಕ್ಕಳು, ಶಿಕ್ಷಕರು ತಮ್ಮ ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯುವುದನ್ನು ಮರತೇ ಬಿಡ್ತಾರೆ. ದಿನವೊಂದಕ್ಕೆ ಅಗತ್ಯ ನೀರು ಕುಡಿಯದೇ ಹೋದಲ್ಲಿ ಅದು ಆರೋಗ್ಯದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ . ಈ ನಿಟ್ಟಿನಲ್ಲಿ ಮಕ್ಕಳು ಮತ್ತು ಶಿಕ್ಷಕರಿಗಾಗಿ ವಾಟರ್-ಬೆಲ್ ಬಾರಿಸುವ ಪದ್ಧತಿಗೆ ಕೇರಳ ಸರ್ಕಾರ ಮುನ್ನುಡಿ ಬರೆದಿತ್ತು.
ಕೇರಳದಲ್ಲಿ ಆರಂಭವಾದ ಪದ್ಧತಿ: ಎರಡು ವರ್ಷದ ಹಿಂದೆ ಕೇರಳದಲ್ಲಿ ಆರಂಭವಾದ ಈ ನೀರಿನ ಬೆಲ್ ವಿಚಾರ ಈಗ ತೆಲಂಗಾಣದಲ್ಲಿ ಸದ್ದು ಮಾಡುತ್ತಿದೆ. ಅಂದ ಹಾಗೆ ತೆಲಂಗಾಣ, ಒಡಿಶಾ ಮತ್ತು ಕರ್ನಾಟಕದ ಹಲವು ಶಾಲೆಗಳಲ್ಲಿ ಈ ವಿಧಾನವನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಈ ನೀರಿನ ಬೆಲ್ನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ನೀರು ಕುಡಿದು, ದೇಹ - ಮನಸ್ಸನ್ನು ತಾಜಾಗೊಳಿಸಿಕೊಳ್ಳುತ್ತಾರೆ. ಈ ಮೂಲಕ ಮತ್ತೆ ಉತ್ಸಾಹದಿಂದ ತರಗತಿಯಲ್ಲಿ ಭಾಗಿಯಾಗುವಂತೆ ಮಾಡುವುದು ಇದರ ಮೂಲ ಉದ್ದೇಶವಾಗಿದೆ.
ಈ ಕ್ರಮವನ್ನು ಇದೀಗ ರಾಜಣ್ಣ- ಸಿರಿಸಿಲ್ಲ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಜನವರಿ 30ರಿಂದ ಜಾರಿಗೆ ತರಲಾಗಿದೆ. ಶಾಲಾ ಪ್ರಾಂಶುಪಾಲರಾದ ಜೆ ಅನುರಾಧ ಅವರು ಇದನ್ನು ಜಾರಿಗೆ ತಂದಿದ್ದಾರೆ. ಒಮ್ಮೆ ಅವರು ನಿರ್ಜಲೀಕರಣಕ್ಕೆ ಒಳಗಾಗಿ, ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಇದರಿಂದ ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದರ ಮೌಲ್ಯ ಅರಿತ ಅವರು, ಈ ನೀರಿನ ಗಂಟೆ ಅಭ್ಯಾಸವನ್ನು ವಿದ್ಯಾರ್ಥಿಗಳಿಗೂ ಪ್ರಾರಂಭಿಸಿದ್ದಾರೆ. ಶಾಲೆಯಲ್ಲಿ ಬೆಳಗ್ಗೆ 10.45ಕ್ಕೆ ಹಾಗೂ ಮಧ್ಯಾಹ್ನ 2.45ಕ್ಕೆ ಈ ನೀರಿನ ಬೆಲ್ ಅಳವಡಿಸಲಾಗಿದೆ
ಬೇಸಿಗೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ನೀರು ಸೇವನೆ ಹೆಚ್ಚು ಅಗತ್ಯವಾಗಿದ್ದು, ಇದು ಉತ್ತಮ ಆರೋಗ್ಯಕ್ಕೆ ನಿರ್ಣಾಯಕವಾಗಿದೆ. ದೇಹಕ್ಕೆ ಅಗತ್ಯ ಪ್ರಮಾಣದ ನೀರು ಸೇವನೆ ಮಾಡುವುದರಿಂದ ಇದು ದೇಹದ ಕಲ್ಮಶವನ್ನು ತೊಡೆದು ಹಾಕಲು ಎಲೆಕ್ಟ್ರೊಲೈಟ್ಸ್ ಅನ್ನು ಸಮತೋಲನ ಮಾಡಿ, ಅಸಿಡಿಟಿ ತಡೆದು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ . ಈ ಗಂಟೆಯು ವಿದ್ಯಾರ್ಥಿಗಳಿಗೆ ಆರೋಗ್ಯ ಪ್ರಯೋಜನದ ಹೊರತಾಗಿ ಮಾನಸಿಕ ವಿಶ್ರಾಂತಿಗೂ ಸಣ್ಣ ವಿರಾಮ ನೀಡುತ್ತದೆ. ಈ ಆರೋಗ್ಯಕರ ಪದ್ಧತಿ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಒತ್ತಡದ ಕುರಿತು ಪೋಷಕರಲ್ಲಿ ಮನಬಿಚ್ಚಿ ಮಾತನಾಡಿ: ವಿದ್ಯಾರ್ಥಿಗಳಿಗೆ ದೀಪಿಕಾ ಪಡುಕೋಣೆ ಸಲಹೆ
ಇದನ್ನೂ ಓದಿ: ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಕಟ್ಟುನಿಟ್ಟಿನ ಸೂಚನೆ