ಹೈದರಾಬಾದ್: ಕಿವುಡರು ಮತ್ತು ಕಿವುಡರ ಸಮುದಾಯದ ಸಾಧನೆಗಳತ್ತ ಸಾರ್ವಜನಿಕರು, ರಾಜಕಾರಣಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳ ಗಮನವನ್ನು ಸೆಳೆಯುವ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್ ಕೊನೆಯ ಭಾನುವಾರದಂದು ವಿಶ್ವ ಕಿವುಡರ ದಿನವನ್ನು ಆಚರಿಸಲಾಗುತ್ತದೆ.
ಆಚರಣೆಯ ಸಂದರ್ಭದಲ್ಲಿ, ವಿಶ್ವಾದ್ಯಂತ ಎಲ್ಲ ಶ್ರವಣದೋಷವುಳ್ಳ ಸಂಸ್ಥೆಗಳು ಕಿವುಡರ ಬೇಡಿಕೆಗಳು ಮತ್ತು ಅಗತ್ಯಗಳನ್ನು ಪೂರೈಸಲು ಮತ್ತು ಸಮಾಜದಲ್ಲಿ ಅವರ ಹಕ್ಕುಗಳನ್ನು ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತದೆ. ಈ ಮೂಲಕ ವಿಶ್ವಾದ್ಯಂತ ಕಿವುಡರಿಗೆ ಆತ್ಮ ವಿಶ್ವಾಸ ಮೂಡಿಸಬಹುದಾಗಿದೆ.
ಈ ವರ್ಷ, ವಿಶ್ವ ಕಿವುಡ ದಿನವನ್ನು ತಿಂಗಳ ಕೊನೆಯ ಭಾನುವಾರದಂದು ಅಂದರೆ ಸೆಪ್ಟೆಂಬರ್ 29 ರಂದು ಆಚರಿಸಲಾಗುತ್ತಿದೆ. ಈ ದಿನವು ಪ್ರಪಂಚದಾದ್ಯಂತದ ಕಿವುಡರ ಸಮಸ್ಯೆಗಳ ಬಗ್ಗೆ ಸಾಮಾನ್ಯ ಜನರಲ್ಲಿ ತಿಳಿವಳಿಕೆ ಉತ್ತೇಜಿಸುವ ಗುರಿ ಹೊಂದಿದೆ.
ಇತಿಹಾಸ: ಕಿವುಡ ಸಮುದಾಯದ ಹಕ್ಕುಗಳು ಮತ್ತು ಜೀವನದ ಗುಣಮಟ್ಟ ಸುಧಾರಿಸಲು ಮೀಸಲಾಗಿರುವ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾದ ವರ್ಲ್ಡ್ ಫೆಡರೇಶನ್ ಆಫ್ ದಿ ಡೆಫ್ (WFD) ಯಿಂದ 1958 ರಲ್ಲಿ ವಿಶ್ವ ಕಿವುಡ ದಿನವನ್ನು ಮೊದಲ ಬಾರಿಗೆ ಆಚರಣೆಗೆ ತರಲಾಯಿತು. ಗ್ರ್ಯಾನ್ವಿಲ್ಲೆ ರಿಚರ್ಡ್ ಸೆಮೌರ್ ರೆಡ್ಮಂಡ್, ಕಲಾ ಜಗತ್ತಿನಲ್ಲಿ ಯಶಸ್ವಿಯಾಗಲು ಕಿವುಡುತನವನ್ನು ನಿವಾರಿಸಿದ ವ್ಯಕ್ತಿ, ವಿಶೇಷವಾಗಿ ಈ ದಿನದೊಂದಿಗೆ ಅವರು ಸಂಬಂಧ ಹೊಂದಿದ್ದಾರೆ.
1871 ರಲ್ಲಿ ಫಿಲಡೆಲ್ಫಿಯಾದಲ್ಲಿ ಜನಿಸಿದ ರೆಡ್ಮಂಡ್, ಕಿವುಡ ಸಮುದಾಯದ ನಡುವೆ ಇರುವ ಸಾಮರ್ಥ್ಯದ ಬಗ್ಗೆ ಸಮಾಜಕ್ಕೆ ಗೊತ್ತು ಮಾಡಿದ ಅದ್ಭುತ ವ್ಯಕ್ತಿಯಾಗಿದ್ದಾರೆ. ಶ್ರವಣ ದೋಷದ ಹೊರತಾಗಿಯೂ ಅವರು ಗೌರವಾನ್ವಿತ ಕ್ಯಾಲಿಫೋರ್ನಿಯಾ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಚಿತ್ರಕಲೆ, ಪ್ಯಾಂಟೊಮೈಮ್ ಮತ್ತು ಡ್ರಾಯಿಂಗ್ ವಿಷಯಗಳ ಬಗ್ಗೆ ಅಧ್ಯಯನ ಮಾಡಿದರು. 1905 ರ ಹೊತ್ತಿಗೆ ಅವರು ಭೂದೃಶ್ಯ ವರ್ಣಚಿತ್ರಕಾರರಾಗಿ ಗುರುತಿಸಲ್ಪಟ್ಟರು.
ಮಹತ್ವ:ಶ್ರವಣದೋಷದ ವಿಧಗಳು ಮತ್ತು ಕಾರಣಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕಿವುಡ ಸಂಸ್ಕೃತಿಯ ಬಗ್ಗೆ ಸಮಾಜಕ್ಕೆ ತಿಳಿಸಲು ವಿಶ್ವ ಕಿವುಡ ದಿನವನ್ನು ಆಚರಿಸಲಾಗುತ್ತದೆ. ಕಿವುಡುತನದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲು, ಅನೇಕ ಕಿವುಡ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಹಲವಾರು ಚಟುವಟಿಕೆಗಳನ್ನು ನಡೆಸುತ್ತವೆ.
ಹೊಸ ತಂತ್ರಜ್ಞಾನಗಳ ಮೂಲಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ವಿಸ್ತರಿಸಲು ಸಹಾಯ ಮಾಡುವ ಮೂಲಕ ಮತ್ತು ಕಿವುಡರಿಗೆ ತಮ್ಮ ಜೀವನಶೈಲಿ ಬದಲಾಯಿಸಲು ವಿವಿಧ ರೀತಿಯ ಅವಕಾಶಗಳನ್ನು ನೀಡುವ ಮೂಲಕ ವಿಶ್ವ ಕಿವುಡ ದಿನವನ್ನು ಆಚರಿಸುವಲ್ಲಿ ಜನರು ಭಾಗವಹಿಸಬೇಕು. ಇದನ್ನು ಸಾಮಾನ್ಯವಾಗಿ ರ್ಯಾಲಿಗಳು, ಸೆಮಿನಾರ್‌ಗಳು ಮತ್ತು ಕೆಲವು ಮೋಜಿನ ಚಟುವಟಿಕೆಗಳು ಸೇರಿದಂತೆ ವಿವಿಧ ಕಿವುಡ ಜಾಗೃತಿ ಅಭಿಯಾನಗಳ ರೂಪದಲ್ಲಿ ಆಚರಿಸಲಾಗುತ್ತದೆ.