ಗುಂಡಲಕೋಣ (ಆಂಧ್ರಪ್ರದೇಶ): ಶಿವರಾತ್ರಿ ಹಿನ್ನೆಲೆ ದೇವಸ್ಥಾನಕ್ಕೆ ಹೋಗುತ್ತಿದ್ದ ಭಕ್ತರ ಮೇಲೆ ಆನೆಗಳು ದಾಳಿ ಮಾಡಿದ ಘಟನೆ ಅನ್ನಮಯ್ಯ ಜಿಲ್ಲೆಯ ಓಬುಲವರಿಪಲ್ಲೆ ಮಂಡಲ ವ್ಯಾಪ್ತಿಯ ಗುಂಡಲಕೋಣದಲ್ಲಿ ನಡೆದಿದೆ. ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಸಾವನ್ನಪ್ಪಿದ ಮೂವರು ಭಕ್ತರು ವೈ.ಕೋಟದವರು. ಗಂಭೀರವಾಗಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ, ಗಾಯಗೊಂಡಿರುವವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆಯ ವಿವರ:ಜಿಲ್ಲೆಯ ಓಬುಲವರಿಪಲ್ಲೆ ಮಂಡಲದ ವೈ ಕೋಟ ಬಳಿಯ ಗುಂಡಲ ಕೋಣದಲ್ಲಿ ಶಿವ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಆನೆಗಳ ಗುಂಪು ದಾಳಿ ನಡೆಸಿದ ಪರಿಣಾಮ ಮೂವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ರೈಲ್ವೆ ಕೋಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವರಾತ್ರಿಯ ಸಂದರ್ಭದಲ್ಲಿ ಗುಂಡಲಕೋಣದ ಸಿದ್ಧೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಾಗರಣೆ ಆಚರಿಸಲು ವೈ. ಕೋಟ ಮತ್ತು ಕನ್ನೆಗುಂಟ ಕಾಲೋನಿಯ 30 ಭಕ್ತರು ಬೆಳಗ್ಗಿನ ಜಾವ 2 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದರು.
ಗುಂಡಲಕೋಣ ಸಮೀಪಿಸುತ್ತಿದ್ದಂತೆ, ಕಾಡಿನಿಂದ ಬಂದ ಆನೆಗಳ ಗುಂಪು ಭಕ್ತರ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಕನ್ನೆಗುಂಟ ಕಾಲೋನಿಯ ಮೂವರು ಭಕ್ತರನ್ನು ಮನಬಂದಂತೆ ತುಳಿದ ಕಾರಣ, ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಸತ್ತವರಲ್ಲಿ ಒಬ್ಬ ಮಹಿಳೆ ಕೂಡ ಸೇರಿದ್ದಾರೆ. ಪೊಲೀಸರು ಶವಗಳನ್ನು ಮತ್ತು ಗಾಯಾಳುಗಳನ್ನು ರೈಲ್ವೆ ಕೊಡೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಡಿಸಿಎಂ ಪವನ್ ಕಲ್ಯಾಣ್ ಕಳವಳ:ಡಿಸಿಎಂ ಪವನ್ ಕಲ್ಯಾಣ್, "ಆನೆ ದಾಳಿಯಲ್ಲಿ ಮೂವರು ಜನರು ಸಾವನ್ನಪ್ಪಿರುವುದು ದುಃಖಕರ" ಎಂದು ಹೇಳಿದರು. ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಯ ಬಗ್ಗೆ ವಿಚಾರಿಸಿದರು. ರೈಲ್ವೆ ಕೊಡೂರು ಶಾಸಕ ಶ್ರೀಧರ್ ಅವರು ತಕ್ಷಣ ವಿಧಾನಸಭೆಯಿಂದ ವೈ. ಕೋಟಾಗೆ ತೆರಳಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡುವಂತೆ ಆದೇಶಿಸಿದರು. ಚಿಕಿತ್ಸೆ ಪಡೆಯುತ್ತಿರುವವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಪವನ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಕೂಡ ಈ ಘಟನೆಯ ಬಗ್ಗೆ ವಿಚಾರಿಸಿದರು. ದೂರವಾಣಿ ಮೂಲಕ ಗಾಯಾಳುಗಳ ಸ್ಥಿತಿಯ ಬಗ್ಗೆ ತಿಳಿದುಕೊಂಡರು.
ಇದನ್ನೂ ಓದಿ:ಕಾಡಾನೆ ದಾಳಿಗೆ ಯುವಕ ಬಲಿ: ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ; ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ