ಹೈದರಾಬಾದ್: ಹಾಲಿ ಚಾಂಪಿಯನ್ ಆಗಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಪ್ರವೇಶಿಸಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ನ್ಯೂಜಿಲೆಂಡ್ ಮತ್ತು ಭಾರತದ ವಿರುದ್ಧದ ಸೋಲು ಕಂಡು ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.
ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡಿದ್ದ ಪಾಕ್ ನಂತರ ಭಾರತ ವಿರುದ್ಧವೂ ಹೀನಾಯ ಸೋಲು ಅನುಭವಿಸಿತು. 29 ವರ್ಷಗಳ ನಂತರ ತನ್ನದೇ ನೆಲದಲ್ಲಿ ಐಸಿಸಿ ಟೂರ್ನಿ ಆಯೋಜಿಸುತ್ತಿರುವ ಪಾಕಿಸ್ತಾನ, ಸೆಮಿಫೈನಲ್ ತಲುಪದೆ ಟೂರ್ನಿಯಿಂದ ನಿರ್ಗಮಿಸಿದೆ. ಇದರ ಜೊತೆಗೆ ಕೆಟ್ಟ ದಾಖಲೆಗಳನ್ನೂ ಬರೆದಿದೆ.
16 ವರ್ಷಗಳಲ್ಲಿ ಇದೇ ಮೊದಲು!: ಚಾಂಪಿಯನ್ಸ್ ಟ್ರೋಫಿ ಆಯೋಜಿಸಿರುವ ಪಾಕಿಸ್ತಾನ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿರುವುದು 16 ವರ್ಷಗಳಲ್ಲಿ ಇದೇ ಮೊದಲು. 2009ರ ಆವೃತ್ತಿಯನ್ನು ಆಯೋಜಿಸಿದ್ದ ದಕ್ಷಿಣ ಆಫ್ರಿಕಾ ಕೂಡ ಇಂಥದೇ ಪರಿಸ್ಥಿತಿ ಎದುರಿಸಿತ್ತು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಹರಿಣ ಪಡೆ ತನ್ನ ಮೂರು ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದು, ಉಳಿದ ಎರಡರಲ್ಲಿ ಸೋಲು ಕಂಡಿತ್ತು. ಇದರೊಂದಿಗೆ, ಪಾಯಿಂಟ್ಸ್ ಪಟ್ಟಿಯಲ್ಲೂ ಕೊನೆಯ ಸ್ಥಾನ ಪಡೆದು ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು.
ಹಾಲಿ ಚಾಂಪಿಯನ್ ಆಗಿ ಟೂರ್ನಿ ಪ್ರವೇಶಿಸಿ ಸೆಮಿಫೈನಲ್ ತಲುಪದೇ ಹೊರಬಿದ್ದ ತಂಡವಾಗಿ ಪಾಕಿಸ್ತಾನ ಮತ್ತೊಂದು ಕೆಟ್ಟ ದಾಖಲೆ ಬರೆದಿದೆ. 2004ರಲ್ಲಿ ಭಾರತ ಮತ್ತು ಶ್ರೀಲಂಕಾ ಕೂಡ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಿ ಸೆಮಿಫೈನಲ್ ತಲುಪಲಿಲ್ಲ. 2013ರ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಿದ್ದ ಆಸ್ಟ್ರೇಲಿಯಾ ಕೂಡ ಲೀಗ್ ಹಂತದಲ್ಲಿ ಒಂದೇ ಒಂದು ಪಂದ್ಯವನ್ನೂ ಗೆಲ್ಲದೇ ತವರಿಗೆ ತೆರಳಿತ್ತು.
ಇನ್ನು, ಈ ಬಾರಿ ಪಾಕಿಸ್ತಾನ ಲೀಗ್ ಹಂತದ ತನ್ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಗುರುವಾರ ಪಂದ್ಯ ನಡೆಯಲಿದೆ. ಉಭಯ ತಂಡಗಳಲ್ಲಿ ಯಾರೇ ಗೆಲುವು ಸಾಧಿಸಿದರೂ ಸೆಮಿಫೈನಲ್ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ. ಬದಲಿಗೆ ಎರಡೂ ತಂಡಗಳು ಕನಿಷ್ಠ ಒಂದು ಪಂದ್ಯವನ್ನಾದರೂ ಗೆದ್ದು ಗೌರವ ಉಳಿಸಿಕೊಳ್ಳಲು ಮುಂದಾಗಿವೆ.
ಇದನ್ನೂ ಓದಿ: 'ಪಾಕ್ ವಿರುದ್ಧ ಭಾರತ ಗೆಲ್ಲಲ್ಲ' ಎಂದಿದ್ದ ಐಐಟಿ ಬಾಬಾ; ಈಗ ಹೇಳುತ್ತಿರುವುದೇನು ಗೊತ್ತಾ?