ಮಹಾಕುಂಭನಗರ, ಉತ್ತರಪ್ರದೇಶ: ಸುಮಾರು 15,000 ನೈರ್ಮಲ್ಯ ಕಾರ್ಯಕರ್ತರು ಸೋಮವಾರ ಇಲ್ಲಿ ನಾಲ್ಕು ವಲಯಗಳಲ್ಲಿ ಸಿಂಕ್ರೊನೈಸ್ ಮಾಡಿದ ಸ್ವಚ್ಛತಾ ಅಭಿಯಾನ ಮಾಡುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಪ್ರಯಾಗರಾಜ್ ಮೇಯರ್ ಗಣೇಶ್ ಕೇಸರವಾಣಿ, ಮಹಾಕುಂಭದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಆಕಾಂಕ್ಷಾ ರಾಣಾ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮೇಲ್ವಿಚಾರಣಾ ತಂಡ, 15,000 ಕಾರ್ಮಿಕರಿಂದ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮುಖ್ಯ ಮೇಲ್ವಿಚಾರಕ ಮತ್ತು ಜಡ್ಜ್ ರಿಷಿ ನಾಥ್ ಅವರು ತಮ್ಮ ತಂಡದೊಂದಿಗೆ ಲಂಡನ್‌ನಿಂದ ಪ್ರಯಾಗರಾಜ್‌ಗೆ ಆಗಮಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಿಸ್ಟ್‌ಬ್ಯಾಂಡ್‌ನಲ್ಲಿರುವ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೈರ್ಮಲ್ಯ ಕಾರ್ಮಿಕರ ತಲೆ ಎಣಿಕೆ ಮಾಡಲಾಗಿದೆ. ದಾಖಲೆಯ ಅಂತಿಮ ಮೌಲ್ಯಾಂಕನ ವರದಿಯನ್ನು ಮೂರು ದಿನಗಳ ನಂತರ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತ ಹೇಳಿಕೆ ನೀಡಲಾಗಿದೆ.

ಈ ಹಿಂದೆ ಬರೆಯಲಾಗಿತ್ತು ಗಿನ್ನೆಸ್ ವಿಶ್ವದಾಖಲೆ: 2019 ರ ಪ್ರಯಾಗರಾಜ್‌ನಲ್ಲಿ ನಡೆದ ಕುಂಭದಲ್ಲಿ 10,000 ನೈರ್ಮಲ್ಯ ಕಾರ್ಯಕರ್ತರು ಸಿಂಕ್ರೊನೈಸ್ ಮಾಡಿದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದರು.

ವಿಶ್ವ ದಾಖಲೆಯ ಪ್ರಯತ್ನವು ಪವಿತ್ರ ಭೂಮಿ ಪ್ರಯಾಗರಾಜ್‌ನಿಂದ ಜಗತ್ತಿಗೆ ಸ್ವಚ್ಛತೆಯ ಪ್ರಬಲ ಸಂದೇಶವನ್ನು ರವಾನಿಸುವ ಉದ್ದೇಶ ಹೊಂದಿದೆ ಎಂದು ಪ್ರಯಾಗರಾಜ್ ಮೇಯರ್ ಕೇಸರವಾಣಿ ಹೇಳಿದ್ದಾರೆ.

ನೈರ್ಮಲ್ಯ ಕಾರ್ಮಿಕರೇ ನಿಜವಾದ ಸ್ವಚ್ಛತಾ ವೀರರು: ಮಹಾಕುಂಭವು ವಿಶ್ವದ ಅತಿದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ನೈರ್ಮಲ್ಯ ಕಾರ್ಯಕರ್ತರು ಕುಂಭ ಯಶಸ್ವಿಗೊಳಿಸಿದ ನಿಜವಾದ ವೀರರಾಗಿದ್ದಾರೆ ಎಂದು ಉತ್ತರ ಪ್ರದೇಶದ ನಗರಾಭಿವೃದ್ಧಿ ಮತ್ತು ಇಂಧನ ಸಚಿವ ಎ.ಕೆ.ಶರ್ಮಾ ಬಣ್ಣಿಸಿದ್ದಾರೆ.

ಕುಂಭಮೇಳದ ಪ್ರದೇಶವನ್ನು ಸ್ವಚ್ಛವಾಗಿಡಲು ಅವರು ಹಗಲಿರುಳು ಶ್ರಮಿಸಿದರು ಎಂದು ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ 62ಕೋಟಿ ಮಂದಿ: ಪ್ರಯಾಗರಾಜ್ ಗಾಳಿ ಈಗಲೂ ಶುದ್ಧ, ಸಮಾರೋಪಕ್ಕೆ ಕ್ಷಣಗಣನೆ