ವಾಷಿಂಗ್ಟನ್, ಅಮೆರಿಕ: ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ - ರಷ್ಯಾ ಯುದ್ಧದಲ್ಲಿ ಆರಂಭದಿಂದಲೂ ಅಮೆರಿಕ ಉಕ್ರೇನ್ ಪರ ನಿಂತಿತ್ತು. ಆದರೆ, ಇದೀಗ ನಾಟಕೀಯ ಬೆಳವಣಿಗೆಯಲ್ಲಿ ಅಮೆರಿಕ ವಿಶ್ವಸಂಸ್ಥೆ ನಿರ್ಣಯದಲ್ಲಿ ರಷ್ಯಾದ ಪರ ಹಾಗೂ ನಿರ್ಣಯದ ವಿರುದ್ಧ ಮತ ಹಾಕುವ ಮೂಲಕ ಗಮನ ಸೆಳೆದಿದೆ. ರಷ್ಯಾದ ಜೊತೆ ನೇರ ಮಾತುಕತೆ ಮೂಲಕ ಯುದ್ಧವನ್ನು ಕೊನೆಗಾಣಿಸಲು ಮುಂದಾಗಿರುವ ಟ್ರಂಪ್, ಕಳೆದ ವಾರ ನಡೆದ ಪ್ರಾಥಮಿಕ ಮಾತುಕತೆಯಲ್ಲಿ ಉಕ್ರೇನ್ ಮತ್ತು ಯುರೋಪಿಯನ್ ರಾಷ್ಟ್ರಗಳ ಬೆಂಬಲವನ್ನು ಹೊರಗೆ ಇಟ್ಟು ಚರ್ಚೆ ನಡೆಸಿದ್ದರು.
ವಿಶ್ವಸಂಸ್ಥೆ ನಿರ್ಣಯ ಅಂಗೀಕಾರ: 193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯಸಭೆಯು ಉಕ್ರೇನ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಮಂಡಿಸಿದ ನಿರ್ಣಯದ ಮೇಲೆ ಮತ ಚಲಾಯಿಸಿದವು. "ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸಬೇಕು " ಎಂಬ ಕರಡು ನಿರ್ಣಯ ಕೈಗೊಳ್ಳಲಾಗಿತ್ತು
ನಿರ್ಣಯದ ವಿಷಯ ಏನು?: ಈ ನಿರ್ಣಯವು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಾಗರಿಕ ಸಮಾಜ ಒಳಗೊಂಡಂತೆ ಅಗಾಧವಾದ ವಿನಾಶ ಮತ್ತು ಮಾನವ ಸಂಕಟದಿಂದ ಗುರುತಿಸಲ್ಪಟ್ಟಿರುವ ಉಕ್ರೇನ್ ವಿರುದ್ಧದ ಯುದ್ಧದ ಆರಂಭಿಕ ನಿಲುಗಡೆ ಮತ್ತು ಶಾಂತಿ ಕಾಪಾಡಬೇಕು ಎಂಬ ನಿರ್ಣಯಕ್ಕೆ ಕರೆ ನೀಡಿದೆ.
ಮೂರು ವರ್ಷಗಳ ಹಿಂದೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಉಕ್ರೇನ್‌ನ ಕರಡು ನಿರ್ಣಯ ತಡೆಯುವ ಪ್ರಯತ್ನದಲ್ಲಿ ಅಮೆರಿಕ ರಷ್ಯನ್ನರೊಂದಿಗೆ ಮತ ಚಲಾಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿತು. ಕರಡು ನಿರ್ಣಯದ ಪರವಾಗಿ ಯುರೋಪಿಯನ್ನರು ಮತ್ತು G7 ( ಅಮೆರಿಕ ಹೊರತು ಪಡಿಸಿ) ರಾಷ್ಟ್ರಗಳು ಮತ ಚಲಾಯಿಸುವುದರೊಂದಿಗೆ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಯಿತು.
ನಿರ್ಣಯದ ಪರ- ವಿರೋಧ ಮತದಾನ: ಜರ್ಮನಿ, UK, ಫ್ರಾನ್ಸ್ ಮತ್ತು G7 ( US ಹೊರತುಪಡಿಸಿ) ನಂತಹ ಪ್ರಮುಖ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 93 ದೇಶಗಳು ಪರವಾಗಿ ಮತ ಹಾಕಿದವು. ರಷ್ಯಾ, ಅಮೆರಿಕ, ಇಸ್ರೇಲ್ ಮತ್ತು ಹಂಗೇರಿ ಸೇರಿದಂತೆ 18 ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದವು. ಇನ್ನು ಭಾರತ, ಚೀನಾ ಮತ್ತು ಬ್ರೆಜಿಲ್ ಸೇರಿದಂತೆ 65 ರಾಷ್ಟ್ರಗಳು ಗೈರಾಗಿದ್ದವು. ಯುದ್ಧ ಭುಗಿಲೆದ್ದ ಆರಂಭದಿಂದಲೇ ರಷ್ಯಾದ ಅತ್ಯಂತ ನಿಕಟ ಮಿತ್ರರಾಷ್ಟ್ರಗಳಲ್ಲಿ ಪ್ರಮುಖವಾಗಿರುವ ಭಾರತ ಮತ್ತು ಚೀನಾ ಇಂತಹ ನಿರ್ಣಯಗಳಿಂದ ದೂರವಿದ್ದವು.
ಇದುವರೆಗೂ ಉಕ್ರೇನ್ ಬೆಂಬಲ ನೀಡಿದ್ದ ಅಮೆರಿಕ - ಈಗ ಉಲ್ಟಾ: ಇಲ್ಲಿಯವರೆಗೆ ರಷ್ಯಾ-ಉಕ್ರೇನ್ ಯುದ್ಧದ ಕೊನೆಯ ಮೂರು ವರ್ಷಗಳಲ್ಲಿ US ಯಾವಾಗಲೂ ಯುರೋಪಿಯನ್ನರೊಂದಿಗೆ ಮತ ಚಲಾಯಿಸುತ್ತಿತ್ತು. ಅಮೆರಿಕದಲ್ಲಿ ಬೈಡನ್ ಆಡಳಿತ ಕೊನೆಗೊಂಡು, ಟ್ರಂಪ್ ಯುಗ ಶುರುವಾದಾಗಿನಿಂದ ಉಕ್ರೇನ್ ನಿಲುವನ್ನು ವಿರೋಧಿಸಲಾಗುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಿಯಾದ್‌ನಲ್ಲಿ ರಷ್ಯಾದೊಂದಿಗೆ ನೇರ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದು, ಉಕ್ರೇನ್ ಮತ್ತು ಯುರೋಪ್ ಮಿತ್ರ ರಾಷ್ಟ್ರಗಳನ್ನು ಹೊರಗಿಟ್ಟು ಮಾತುಕತೆ ನಡೆಸುತ್ತಿದ್ದಾರೆ.
ಭಾರತ ನಿರ್ಣಯದ ಮತದಾನದಿಂದ ದೂರವಿರುವುದರಲ್ಲಿ ಅಚ್ಚರಿ ಇಲ್ಲ: ಈ ಹಿಂದೆ ರಷ್ಯಾ-ಉಕ್ರೇನ್ ಯುದ್ಧದ ಕುರಿತು ವಿಶ್ವಸಂಸ್ಥೆಯ ನಿರ್ಣಯಗಳಿಂದ ಭಾರತ ದೂರವಿರುವುದರಿಂದ ಆಶ್ಚರ್ಯವೇನಿಲ್ಲ. ಭಾರತ ಮತದಾನದಿಂದ ದೂರ ಇರುವುದು ಅದರ ರಾಜತಾಂತ್ರಿಕ ಬಿಗಿಯಾದ ನಡಿಗೆಯ ಅಭಿವ್ಯಕ್ತಿಯಾಗಿದೆ.
ಅದು ಯಾವುದೇ ರಾಷ್ಟ್ರದ ಪರ ಅಥವಾ ವಿರೋಧವಾಗಿಲ್ಲ. ಈ ಮೂಲಕ ದೆಹಲಿ ತಟಸ್ಥತೆ ನೀತಿ ಪ್ರದರ್ಶಿಸುವ ಮೂಲಕ ಶಾಂತಿಯನ್ನು ಬಯಸುತ್ತಿದೆ. ಅಮೆರಿಕ ತನ್ನ ನಿಲುವನ್ನು ಬದಲಾಯಿಸಿದರೂ ದೆಹಲಿ ತನ್ನ ತಟಸ್ಥತೆ ಉಳಿಸಿಕೊಳ್ಳಲು ಬಯಸುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಬಿರುಗಾಳಿ ಎಬ್ಬಿಸಿದ USAID ಸಂಸ್ಥೆಯ 2 ಸಾವಿರ ಸಿಬ್ಬಂದಿ ವಜಾ ಮಾಡಿದ ಟ್ರಂಪ್
ಇದನ್ನೂ ಓದಿ: NATOದಲ್ಲಿ ಉಕ್ರೇನ್ಗೆ ಸ್ಥಾನ ನೀಡಿದರೆ, ಅಧ್ಯಕ್ಷ ಸ್ಥಾನ ತ್ಯಜಿಸಲು ಸಿದ್ಧ: ಝೆಲೆನ್ಸ್ಕಿ