ವಿಕಾರಬಾದ್: ತೆಲಂಗಾಣದ ವಿಕಾರಬಾದ್ ಮಂಡಲ್ನ ಪೆರಂಪಳ್ಳಿಯಲ್ಲಿ ಕಲಬೆರಕೆ ನೀರಾ ಸೇವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, 30 ಮಂದಿ ಅಸ್ವಸ್ಥಗೊಂಡಿರುವ ಘಟನೆ ವರದಿಯಾಗಿದೆ. ಮಂಗಳವಾರ ರಾತ್ರಿ ಈ ಕಲಬೆರಕೆ ನೀರಾ ಸೇವಿಸಿ 8 ಮಂದಿ ಅಸ್ವಸ್ಥಗೊಂಡಿದ್ದರು. ಇದಾದ ಬಳಿಕ ಈ ರೀತಿ ಅಸ್ವಸ್ಥಗೊಂಡವರ ಸಂಖ್ಯೆ 30ಕ್ಕೆ ಏರಿದೆ. ಈ ಕಲಬೆರಕೆ ನೀರಾ ಸೇವಿಸಿದವರಲ್ಲಿ ಮಂಪರು, ತಲೆ ಸುತ್ತುವಿಕೆ, ನರ ಹಾನಿ, ಮೂತ್ರಕೋಶದ ಸಮಸ್ಯೆಗಳು ಕಂಡು ಬಂದಿದೆ. ಘಟನೆಯಲ್ಲಿ ದುರ್ಗಯ್ಯ ಎಂಬ 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮನೆಮ್ಮ, ನಾಗಮಣಿ, ಪ್ರಶಾಂತ್ ಎಂಬುವರ ಸ್ಥಿತಿ ಗಂಭೀರವಾಗಿದೆ.
ರಾಖಿ ಹಬ್ಬದ ಸಂಭ್ರಮ ಕಸಿದ ದುರ್ಘಟನೆ: ಪೆರಂಪಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಖಿ ಹಬ್ಬದಂದು ತಮ್ಮ ಸಹೋದರರಿಗೆ ರಾಖಿ ಕಟ್ಟಲು ಆಗಸ್ಟ್ 19ರಂದು ಗ್ರಾಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಲಬೆರಕೆ ನೀರಾ ಸೇವನೆ ಮಾಡಿದ್ದಾರೆ. ಇದಾದ ಬಳಿಕ ಅನೇಕ ಕುಟುಂಬಸ್ಥರು ಅಸ್ವಸ್ಥತೆಗೆ ಒಳಗಾಗಿದ್ದು, ವಿವಿಧ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತನಿಖೆಗೆ ಮುಂದಾದ ಪೊಲೀಸರು:ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಕಲಬೆರಕೆ ನೀರಾ ಮಾರಾಟದಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ಸ್ಥಳೀಯ ಅಂಗಡಿ ಮಾಲೀಕ ನರಸಿಮುಲು ಗೌಡ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾನೂನು ಬದ್ಧವಾಗಿ ನೀರಾದ ಮಾರಾಟಕ್ಕೆ ಪೆರಂಪಲ್ಲಿಯಲ್ಲಿ ಯಾವುದೇ ಅವಕಾಶ ನೀಡಲಾಗಿರಲಿಲ್ಲ. ಜಿಲ್ಲಾ ಅಬಕಾರಿ ಅಧಿಕಾರಿ, ವಿಜಯ್ ಭಾಸ್ಕರ್ ಗೌಡ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ರಾಘವೀಣಾ ಪ್ರಕರಣ ದಾಖಲಿಸಿರುವ ಬಗ್ಗೆ ದೃಢೀಕರಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.