ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದ ಆದಾಯದಲ್ಲಿ ಭಾರೀ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 82 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬಂದಿದೆ. ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್, ಮುಖ್ಯವಾಗಿ ಭಕ್ತರ ಅರ್ಪಣೆಗಳು ಮತ್ತು ದೇವಾಲಯದಲ್ಲಿ ಉತ್ಪಾದಿಸಿದ ವಸ್ತುಗಳಾದ ಅರವಣ ಪಾಯಸ ಹಾಗೂ ಅಪ್ಪಂನ ಮಾರಾಟದಿಂದ ಆದಾಯ ಬರುತ್ತಿದೆ ಎಂದು ಹೇಳಿದರು.
2024-25ರ ಎರಡು ತಿಂಗಳ ತೀರ್ಥಯಾತ್ರೆಯ ಮೊದಲ ಹಂತವಾದ ನವೆಂಬರ್ 15 ಮತ್ತು ಡಿಸೆಂಬರ್ 26 ರ ನಡುವೆ, ದೇವಾಲಯಕ್ಕೆ 297 ಕೋಟಿ ರೂ. ಆದಾಯ ಬಂದಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಬಂದಿದ್ದ 215 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ ಎಂದು ಪ್ರಶಾಂತ್ ಹೇಳಿದರು.
2024ರಲ್ಲಿ 28 ಲಕ್ಷ ಭಕ್ತರಿಂದ ಅಯ್ಯಪ್ಪನ ದರ್ಶನ; ಕಳೆದ ವರ್ಷಕ್ಕಿಂತ 22 ಕೋಟಿ ರೂ. ಹೆಚ್ಚು ದೇವಾಲಯದ ಉತ್ಪನ್ನಗಳು ಮಾರಾಟವಾಗಿವೆ. ಕಳೆದ ವರ್ಷ 2024ರಲ್ಲಿ ಈ 41 ದಿನಗಳ ಅವಧಿಯಲ್ಲಿ 28 ಲಕ್ಷ ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ, ಈ ಬಾರಿ 32 ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡಿದ್ದಾರೆ.
ತೀರ್ಥಯಾತ್ರೆಯ ಎರಡನೇ ಹಂತ ಡಿಸೆಂಬರ್ 30 ರಂದು ಪ್ರಾರಂಭವಾಗಿದೆ. ಎರಡನೇ ಋತುವಿನ ಅತ್ಯಂತ ಶುಭ ದಿನವನ್ನು ಮಕರವಿಳಕ್ಕು ಎಂದು ಕರೆಯಲಾಗುತ್ತದೆ. ಜನವರಿ 14 ರಂದು ಮಕರವಿಳಕ್ಕು ಆಚರಿಸಲಾಗುತ್ತದೆ. ಇದು ಸಂಕ್ರಾಂತಿ ಹಬ್ಬದ ದಿನವೂ ಹೌದು. ಇದಾಗಿ ಕೆಲ ದಿನಗಳ ನಂತರ ಎರಡನೇ ಸೀಸನ್ ಕೊನೆಗೊಳ್ಳುತ್ತದೆ.
ಜನಸಂದಣಿ ನಿರ್ವಹಿಸಲು ಯಾತ್ರಾರ್ಥಿಗಳ ಸಂಖ್ಯೆಗೆ ಮಿತಿ: ಹೆಚ್ಚುತ್ತಿರುವ ಜನಸಂದಣಿ ನಿರ್ವಹಿಸಲು, ದೇವಾಲಯದ ಅಧಿಕಾರಿಗಳು ದೈನಂದಿನ ಯಾತ್ರಾರ್ಥಿಗಳ ಸಂಖ್ಯೆಯನ್ನು 70,000 ಕ್ಕೆ ಮಿತಿಗೊಳಿಸಿದ್ದಾರೆ. ಇದರಲ್ಲಿ 60,000 ಆನ್ ಲೈನ್ ಬುಕಿಂಗ್ ಮತ್ತು 10,000 ಸ್ಪಾಟ್ ಬುಕಿಂಗ್ ಸೇರಿವೆ. ಭಕ್ತರ ಆಗಮನಕ್ಕೆ ಅನುಗುಣವಾಗಿ ದೇವಾಲಯವು ತನ್ನ ಸಮಯವನ್ನು ಸರಿಹೊಂದಿಸಿದೆ. ದೇವಾಲಯವು ಪ್ರತಿದಿನ ಬೆಳಗ್ಗೆ 3 ಗಂಟೆಗೆ ತೆರೆಯುತ್ತದೆ ಮತ್ತು ಮಧ್ಯಾಹ್ನ 1 ಗಂಟೆಗೆ ಮುಚ್ಚುತ್ತದೆ. ನಂತರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ರವರೆಗೆ ತೆರೆದಿರುತ್ತದೆ.
ಸಮುದ್ರ ಮಟ್ಟದಿಂದ 914 ಮೀಟರ್ ಎತ್ತರದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಶಬರಿಮಲೆ ದೇವಸ್ಥಾನವು ಕೇರಳದ ರಾಜಧಾನಿ ತಿರುವನಂತಪುರಂನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಪಥನಂತಿಟ್ಟ ಜಿಲ್ಲೆಯ ಪಂಬಾದಿಂದ ನಾಲ್ಕು ಕಿಲೋಮೀಟರ್ ಅಂತರದಲ್ಲಿ ಬೆಟ್ಟ ಗುಡ್ಡಗಳಲ್ಲಿದೆ.
41 ದಿನಗಳ ಕಠಿಣ ವ್ರತ ಕೈಗೊಳ್ಳಲಿರುವ ಭಕ್ತರು: ಸಾಂಪ್ರದಾಯಿಕವಾಗಿ ಈ ದೇವಸ್ಥಾನದಲ್ಲಿ ಪ್ರೌಢ ವಯಸ್ಕ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ದೇವಾಲಯವನ್ನು ಪಂಬಾ ನದಿಯಿಂದ ಕಾಲ್ನಡಿಗೆಯಲ್ಲಿ ಮಾತ್ರ ಪ್ರವೇಶಿಸಬಹುದು. ಯಾತ್ರಾರ್ಥಿಗಳು ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ 41 ದಿನಗಳ ಕಠಿಣ ವ್ರತ ಕೈಗೊಳ್ಳುತ್ತಾರೆ. ವ್ರತಾಚರಣೆ ಸಮಯದಲ್ಲಿ ಮಾಲಾಧಾರಿಗಳು ಕಟ್ಟುನಿಟ್ಟಾದ ಸಸ್ಯಾಹಾರ ಪಾಲಿಸಿ ಕಪ್ಪು ಉಡುಪು ಧರಿಸುತ್ತಾರೆ. ಈ ಅವಧಿಯಲ್ಲಿ ಅವರು ಪಾದರಕ್ಷೆ ಧರಿಸುವುದಿಲ್ಲ. ಪ್ರತಿಯೊಬ್ಬ ಭಕ್ತನು ತೆಂಗಿನಕಾಯಿಗಳನ್ನು ಹೊಂದಿರುವ ಇರುಮುಡಿಯನ್ನು ತಲೆಯ ಮೇಲೆ ಹೊತ್ತು ದೇವಸ್ಥಾನಕ್ಕೆ ಆಗಮಿಸುತ್ತಾನೆ. ಅದನ್ನು ಸನ್ನಿಧಾನದ ಪವಿತ್ರ 18 ಮೆಟ್ಟಿಲುಗಳನ್ನು ಏರುವ ಮೊದಲು ವಿಧಿವತ್ತಾಗಿ ದೇವರಿಗೆ ಅರ್ಪಿಸಲಾಗುತ್ತದೆ.
ಇದನ್ನೂ ಓದಿ : ಪ್ರಾಯೋಗಿಕ ಸಂಚಾರದಲ್ಲಿ ಗಂಟೆಗೆ 180 ಕಿಮೀ ಗರಿಷ್ಠ ವೇಗ ಸಾಧಿಸಿದ ವಂದೇ ಭಾರತ್ ಸ್ಲೀಪರ್ ರೈಲು - VANDE BHARAT SLEEPER TRAIN