ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಚುನಾವಣೆ: ಅವಿವಾಹಿತರಿಗೆ ಕಂಕಣಭಾಗ್ಯದ ಭರವಸೆ ನೀಡಿದ ಅಭ್ಯರ್ಥಿ!

ತಾನು ಗೆದ್ದಲ್ಲಿ ಉದ್ಯೋಗವಿಲ್ಲದೆ, ಹೆಣ್ಣು ಸಿಗದ ಕಾರಣ ಇನ್ನೂ ಮದುವೆಯಾಗದೆ ಇರುವ ಯುವಕರಿಗೆ ಮದುವೆ ಮಾಡಿಸುವುದಾಗಿ ಎನ್​ಸಿಪಿ(ಎಸ್​ಪಿ) ಅಭ್ಯರ್ಥಿಯೊಬ್ಬರು ಚುನಾವಣಾ ಭರವಸೆ ನೀಡಿದ್ದಾರೆ.

RAJESAHEB DESHMUKH
ಅಭ್ಯರ್ಥಿ ರಾಜೇಸಾಹೇಬ್​ ದೇಶಮುಖ್ (ETV Bharat)

By PTI

Published : Nov 9, 2024, 6:37 PM IST

ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ):ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಎನ್​ಸಿಪಿ(ಎಸ್​ಪಿ) ಅಭ್ಯರ್ಥಿ ರಾಜೇಸಾಹೇಬ್​ ದೇಶಮುಖ್​ ಅವರು, ತಾವು ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ತಮ್ಮ ಕ್ಷೇತ್ರದಲ್ಲಿರುವ ಹೆಣ್ಣು ಸಿಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಭರವಸೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಬೀಡ್​ ಜಿಲ್ಲೆಯ ಪರ್ಲಿಯಿಂದ ಸ್ಪರ್ಧಿಸಿರುವ ರಾಜೇಸಾಹೇಬ್​ ದೇಶಮುಖ್​, ಬುಧವಾರ ಚುನಾವಣಾ ಪ್ರಚಾರದ ವೇಳೆ ಮರಾಠವಾಡದ ಗ್ರಾಮೀಣ ಪ್ರದೇಶದಲ್ಲಿ ಮದುವೆ ವಯಸ್ಸಿನ ಯುವಕರು ವಧು ಸಿಗದೆ ಬ್ರಹ್ಮಚಾರಿಯಾಗಿ ಉಳಿದಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಧನಂಜಯ್​ ಮುಂಡೆ ವಿರುದ್ಧ ಆರೋಪ: "ಯುವಕರಿಗೆ ಮದುವೆಯಾಗದೇ ಇರಲು ತಮ್ಮ ಪ್ರತಿಸ್ಪರ್ಧಿ ಧನಂಜಯ್​ ಮುಂಡೆ ಕಾರಣ. ಇಲ್ಲಿಯ ಹಳ್ಳಿಗೆಳಿಗೆ ಹೋದರೆ ಸುಮಾರು 150-200 ಉತ್ತಮ ಶಿಕ್ಷಣ ಪಡೆದಿದ್ದರೂ ನಿರುದ್ಯೋಗಿ ಬ್ಯಾಚುಲರ್​ಗಳಿದ್ದಾರೆ. ಈ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಧನಂಜಯ್​ ಮುಂಡೆ ಈ ಭಾಗಕ್ಕೆ ಯಾವುದೇ ಹೊಸ ಉದ್ಯಮ ತರದೆ, ಇದ್ದ ಉದ್ಯಮವನ್ನೇ ಮುಚ್ಚಿದ್ದಾರೆ" ಎಂದು ಆರೋಪಿಸಿದರು.

"ಹುಡುಗಿ ಕಡೆಯವರು ಹುಡುಗನ ಉದ್ಯೋಗದ ಬಗ್ಗೆ ವಿಚಾರಿಸುತ್ತಾರೆ. ಉದ್ಯೋಗವಿಲ್ಲದೆ ಅನೇಕರು ಇನ್ನೂ ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಹಾಗಾಗಿ ನಾನು ಶಾಸಕನಾದರೆ ಮದುವೆಯಾಗದೇ ಇರುವವರಿಗೆ ಮದುವೆ ಮಾಡಿಸುತ್ತೇನೆ. ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುತ್ತೇನೆ" ಎಂದು ದೇಶಮುಖ್ ಭರವಸೆ ನೀಡಿದರು.

ಪಂಕಜಾರನ್ನು ಸೋಲಿಸಲು ಪಿತೂರಿ:"ಲೋಕಸಭೆ ಚುನಾವಣೆ ವೇಳೆ ಎನ್​ಸಿಪಿ ನಾಯಕ ಹಾಗೂ ಸಚಿವ ಧನಂಜಯ್​ ಮುಂಡೆ ಅವರು ಮಹಾಯುತಿ ಮಿತ್ರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿಯೇ ಬದಿಗಿಟ್ಟಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಂಎಲ್​ಸಿ ಪಂಕಜಾ ಮುಂಡೆ ಎಲ್ಲಿಯೂ ಕಾಣಿಸುತ್ತಿಲ್ಲ. ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಸೋದರ ಸಂಬಂಧಿಯಾದ ಧನಂಜಯ್​ ಮುಂಡೆ ಇಡೀ ವ್ಯವಸ್ಥೆಯನ್ನು ನಿಯಂತ್ರಿಸಿ, ಉದ್ದೇಶಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರನ್ನು ಬದಿಗಿಟ್ಟಿದ್ದರು. ಅವರನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಪಂಕಜಾ ಅವರನ್ನು ಸೋಲಿಸಲು ಅದು ಪಿತೂರಿಯಾಗಿತ್ತು" ಎಂದು ಆರೋಪಿಸಿದರು.

ನವೆಂಬರ್​ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬೀಡ್​ ಜಿಲ್ಲೆಯ ಪರ್ಲಿ ವಿಧಾನಸಭಾ ಕ್ಷೇತ್ರದಿಂದ ದೇಶಮುಖ್​ ಅವರು ಅಜಿತ್​ ಪವಾರ್​ ನೇತೃತ್ವದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ರಾಜ್ಯ ಕೃಷಿ ಸಚಿವ ಧನಂಜಯ್​ ಮುಂಡೆ ವಿರುದ್ಧ ಕಣದಲ್ಲಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ​- ಇಂಡಿಯಾ ಕೂಟಕ್ಕೆ ಶಕ್ತಿ ಬಂದರೆ, ದೇಶ ದುರ್ಬಲವಾಗುತ್ತೆ: ಪ್ರಧಾನಿ ಮೋದಿ

ABOUT THE AUTHOR

...view details