ದಿಂಡೋರಿ (ಮಧ್ಯಪ್ರದೇಶ):ವಿಮೆ ಮತ್ತು ಬ್ಯಾಂಕ್ ದಾಖಲೆಗಳಲ್ಲಿ ತನ್ನನ್ನು ನಾಮಿನಿಯನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಮಹಿಳಾ ಉಪವಿಭಾಗೀಯ ಅಧೀಕ್ಷಕಿಯಾಗಿದ್ದ ಅಧಿಕಾರಿ ಪತ್ನಿಯನ್ನೇ ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಚ್ಚರಿಯ ಸಂಗತಿ ಎಂದರೆ ಕೊಲೆ ಮಾಡಿದ ಬಳಿಕ ಏನು ಮಾಡಬೇಕು ಎಂದು ತೋಚದೇ 6 ಗಂಟೆ ಕಾಲ ಶವದ ಮುಂದೆಯೇ ಆತ ಕುಳಿತಿದ್ದನಂತೆ.
ದಿಂಡೋರಿ ಜಿಲ್ಲೆಯ ಶಹಪುರದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ನಿಶಾ ನಾಪಿತ್ (51) ಕೊಲೆಯಾದ ಮಹಿಳಾ ಅಧಿಕಾರಿ. ಆಸ್ತಿ, ಬ್ಯಾಂಕ್ ಖಾತೆಗಳಿಗೆ ನಾಮಿನಿ ಮಾಡದ್ದಕ್ಕೆ ಗಂಡನಿಂದಲೇ ಕೊಲೆಯಾಗಿದ್ದಾರೆ. ಪೊಲೀಸರು 24 ಗಂಟೆ ಅವಧಿಯಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.
ಪ್ರಕರಣದ ವಿವರ ಹೀಗಿದೆ:ಅಧಿಕಾರಿ ನಿಶಾ ನಾಪಿತ್ ಅವರು, ಆರೋಪಿ ಮನೀಶ್ ಶರ್ಮಾ ಎಂಬಾತನನ್ನು 2020 ರಲ್ಲಿ ವಿವಾಹವಾಗಿದ್ದರು. ಆಸ್ತಿ ಮಾರಾಟಗಾರನಾಗಿದ್ದ ಈತ, ಪತ್ನಿಯ ಜೊತೆಗೆ ಹಣ, ಆಸ್ತಿ ವಿಚಾರದಲ್ಲಿ ಕಿತ್ತಾಡುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ನಿಶಾ ಅವರು ತಮ್ಮ ಸೇವಾ ವಿಮೆ, ಬ್ಯಾಂಕ್ ಖಾತೆಗಳಿಗೆ ನಾಮಿನಿಯಾಗಿ ಯಾರನ್ನೂ ಸೂಚಿಸಿರಲಿಲ್ಲ. ಇದು ಪತಿ ಮನೀಶ್ಗೆ ಕೋಪಕ್ಕೆ ಕಾರಣವಾಗಿತ್ತು.
ತನ್ನನ್ನು ನಾಮಿನಿಯನ್ನಾಗಿ ಮಾಡುವಂತೆ ಹಲವು ಬಾರಿ ಆತ ಕಿತ್ತಾಡಿಕೊಂಡಿದ್ದ. ಆದಾಗ್ಯೂ ನಿಶಾ ಅವರು ನಿರಾಕರಿಸಿದ್ದರು. ಇದರಿಂದ ಕೋಪಗೊಂಡಿದ್ದ ಪತಿ, ಭಾನುವಾರ ರಾತ್ರಿ ಆಕೆಯನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಯಾರಿಗೂ ಗೊತ್ತಾಗದ ಹಾಗೆ ಶವವನ್ನು ವಿಲೇವಾರಿ ಮಾಡಲು ಯತ್ನಿಸಿದ್ದಾನೆ.