ನವದೆಹಲಿ: 18ನೇ ಲೋಕಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ಸದಸ್ಯರ ಸಂಖ್ಯೆಯು ಹೆಚ್ಚಾಗುವುದರೊಂದಿಗೆ ಕೆಳಮನೆಯು 10 ವರ್ಷಗಳ ನಂತರ ಪ್ರತಿಪಕ್ಷದ ನಾಯಕ ಪಡೆಯಲು ಸಿದ್ಧವಾಗಿದೆ. ಜೊತೆಗೆ ಕಳೆದ ಐದು ವರ್ಷಗಳಿಂದ ಖಾಲಿ ಇರುವ ಉಪ ಸ್ಪೀಕರ್ ಆಯ್ಕೆ ಮಾಡುವ ನಿರೀಕ್ಷೆಯಲ್ಲೂ ಪ್ರತಿಪಕ್ಷದ ನಾಯಕರು ಇದ್ದಾರೆ.
ಜೂನ್ 5ರಂದು ವಿಸರ್ಜಿಸಲ್ಪಟ್ಟ 17ನೇ ಲೋಕಸಭೆಯು ಪೂರ್ಣಾವಧಿವರೆಗೂ ಉಪ ಸ್ಪೀಕರ್ ಹೊಂದಿರಲಿಲ್ಲ. ಸಂಸತ್ತಿನ ಕೆಳಮನೆಯು ಪ್ರತಿಪಕ್ಷದ ನಾಯಕನೂ ಇಲ್ಲದೇ ಸತತ ಎರಡನೇ ಅವಧಿಯನ್ನು ಮುಗಿಸಿತ್ತು. ಈಗ ಎಲ್ಲರ ಕಣ್ಣುಗಳು ಕೆಳಮನೆಯತ್ತ ನೆಟ್ಟಿದ್ದು, ಲೋಕಸಭೆಯು ಪ್ರತಿಪಕ್ಷದ ನಾಯಕನನ್ನು ಪಡೆಯಲಿದೆ. ಉಪ ಸ್ಪೀಕರ್ಅನ್ನೂ ಹೊಂದುವ ನಿರೀಕ್ಷೆಯಿದೆ. ಈ ಹುದ್ದೆಯು ಸಾಮಾನ್ಯವಾಗಿ ಪ್ರತಿಪಕ್ಷಕ್ಕೆ ಸೇರಲಿದೆ. 'ಇಂಡಿಯಾ' ಮೈತ್ರಿಕೂಟವು ಸಂಸತ್ತಿನ ತನ್ನ ಕಾರ್ಯತಂತ್ರದ ಕುರಿತು ಯಾವುದೇ ಸಮನ್ವಯ ಸಭೆಯನ್ನು ಇನ್ನೂ ನಡೆಸಿಲ್ಲ. ಆದರೂ, ಈ ಬಾರಿ ಉಪ ಸ್ಪೀಕರ್ ಸ್ಥಾನವನ್ನು ಖಾಲಿ ಬಿಡದಂತೆ ಒತ್ತಡ ಹೇರುವುದಾಗಿ ವಿಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಯಾವುದೇ ಉಪ ಸ್ಪೀಕರ್ ಆಯ್ಕೆ ಮಾಡಿಲ್ಲ. ಈಗ ಬಿಜೆಪಿಯವರು ಪಾಠ ಕಲಿತಿದ್ದಾರೆ. ಈ ಬಾರಿ ಉಪ ಸ್ಪೀಕರ್ಅನ್ನು ಆಯ್ಕೆ ಮಾಡುತ್ತಾರೆ ಎಂದು ಭಾವಿಸುತ್ತೇವೆ ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ.
17ನೇ ಲೋಕಸಭೆಯಲ್ಲಿ ಬಿಜೆಪಿ 303 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತ ಹೊಂದಿತ್ತು. ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು. ಮೊದಲ ಬಾರಿಗೆ ಪೂರ್ಣ ಐದು ವರ್ಷಗಳ ಅವಧಿಯಲ್ಲಿ ಉಪ ಸ್ಪೀಕರ್ಅನ್ನು ಆಯ್ಕೆಯೇ ಮಾಡಿರಲಿಲ್ಲ. ಸಂವಿಧಾನದ ಪರಿಚ್ಛೇದ 93ರ ಪ್ರಕಾರ, ಲೋಕಸಭೆಯು ಆದಷ್ಟು ಬೇಗ ಇಬ್ಬರು ಸದಸ್ಯರನ್ನು ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಆಗಿ ಆಯ್ಕೆ ಮಾಡಬೇಕು. ಆದಾಗ್ಯೂ, ಇದು ನಿರ್ದಿಷ್ಟ ಸಮಯದ ಚೌಕಟ್ಟನ್ನು ಹೊಂದಿಲ್ಲ.
ಉಪ ಸ್ಪೀಕರ್ ಕಚೇರಿ ಸಂವಿಧಾನದ ಅಗತ್ಯವಾಗಿದೆ. ಆದರೆ, ರಾಷ್ಟ್ರೀಯ ಮತ್ತು ರಾಜ್ಯಗಳ ಶಾಸಕಾಂಗಗಳು ಉಪ ಸ್ಪೀಕರ್ ಹುದ್ದೆಯನ್ನು ಭರ್ತಿ ಮಾಡದಿರುವುದು ಸಮಸ್ಯೆದಾಯಕ ಪ್ರವೃತ್ತಿಯಾಗಿದೆ. ಉದಾಹರಣೆಗೆ, 2019 ಮತ್ತು 2024ರ ನಡುವೆ ಸಂಸತ್ತಿನಲ್ಲಿ ಉಪ ಸ್ಪೀಕರ್ ಇರಲಿಲ್ಲ. ಕಳೆದ ರಾಜಸ್ಥಾನ ಅಸೆಂಬ್ಲಿಯು ತನ್ನ ಪೂರ್ಣ ಐದು ವರ್ಷಗಳ ಅವಧಿಗೆ ಡೆಪ್ಯೂಟಿ ಸ್ಪೀಕರ್ಅನ್ನು ಹೊಂದಿರಲಿಲ್ಲ ಎಂದು ಪಿಆರ್ಎಸ್ ಶಾಸಕಾಂಗ ಸಂಶೋಧನೆಯಲ್ಲಿ ಶಾಸಕಾಂಗ ಮತ್ತು ನಾಗರಿಕ ಉಪಕ್ರಮಗಳ ಮುಖ್ಯಸ್ಥ ಚಕ್ಷು ರಾಯ್ ತಿಳಿಸಿದರು.
ಪ್ರಸ್ತುತ, ಜಾರ್ಖಂಡ್ ಶಾಸಕಾಂಗದ ಅವಧಿಯು ಈ ವರ್ಷದ ಕೊನೆಯಲ್ಲಿ ಕೊನೆಗೊಳ್ಳಲಿದ್ದು, ಇದು ಸಹ ಉಪ ಸ್ಪೀಕರ್ಅನ್ನು ಹೊಂದಿಲ್ಲ. ಸಾಂವಿಧಾನಿಕ ಅಗತ್ಯವನ್ನು ಹೊರತುಪಡಿಸಿ, ಈ ಹಿಂದೆ ಹಲವು ಸಂದರ್ಭಗಳಲ್ಲಿ ಉಪ ಸ್ಪೀಕರ್ ಕಚೇರಿಯು ವಿಪಕ್ಷಗಳ ಪಾಲಾಗಿದೆ. ಇದು ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಬಲಪಡಿಸುವುದಲ್ಲದೆ, ಸ್ಪೀಕರ್ ಹುದ್ದೆಯ ನಿರಂತರತೆಯನ್ನು ಖಾತ್ರಿಪಡಿಸುತ್ತದೆ. ಅದು ಎಂದಿಗೂ ಖಾಲಿ ಉಳಿಯಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಈಶ್ವರನ ಹೆಸರಿನಲ್ಲಿ ಮೋದಿ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕಾರ; ಹೆಚ್ಡಿಕೆ ಸೇರಿ 5 ಮಿತ್ರಪಕ್ಷಗಳ ನಾಯಕರಿಗೆ ಕ್ಯಾಬಿನೆಟ್ ಸ್ಥಾನ