ಲಖನೌ, ಉತ್ತರಪ್ರದೇಶ: 2022ರ ಡಿಸೆಂಬರ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸೇನೆಯ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇಲ್ಲಿನ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.
ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರು ಪ್ರಕರಣದ ಮುಂದಿನ ವಿಚಾರಣೆಗೆ ಮಾರ್ಚ್ 24 ರಂದು ದಿನಾಂಕವನ್ನು ನಿಗದಿಪಡಿಸಿದ್ದಾರೆ. ಅಂದು ರಾಹುಲ್ ಗಾಂಧಿ ಅವರು ಕೋರ್ಟ್ ಎದುರು ಹಾಜರಾಗುವಂತೆ ಈ ಸಮನ್ಸ್ ನಲ್ಲಿ ಆದೇಶ ನೀಡಲಾಗಿದೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಪರವಾಗಿ ವಕೀಲ ವಿವೇಕ್ ತಿವಾರಿ ಅವರು ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ರಾಹುಲ್ ಗಾಂಧಿಯವರು ಡಿಸೆಂಬರ್ 16, 2022 ರಂದು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಕೀಲರು ದೂರಿದ್ದರು. ಕೆಲವು ಮಾಧ್ಯಮ ಪ್ರತಿನಿಧಿಗಳೊಂದಿಗೆ ರಾಹುಲ್ ಗಾಂಧಿ ಮಾತನಾಡುವಾಗ, ಭಾರತ ಮತ್ತು ಚೀನಾದ ಸೇನೆಗಳ ನಡುವಿನ ಘರ್ಷಣೆಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಗಳನ್ನು ಮಾಡಿದ್ದರು. ರಾಹುಲ್ ಅವರ ಹೇಳಿಕೆಗಳು ಅವಹೇಳನಕಾರಿ ಮತ್ತು ಭಾರತೀಯ ಸೇನೆಗೆ ಮಾನಹಾನಿಯಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಇದನ್ನು ಓದಿ: ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದ ಟಿಎಂಸಿ: ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿದೆ