ನವದೆಹಲಿ:ಈಶಾ ಫೌಂಡೇಶನ್ನ ಆಶ್ರಮದಲ್ಲಿ ಇಬ್ಬರು ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿರಿಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶದಲ್ಲಿ ಮುಂದೆ ಯಾವುದೇ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಗುರುವಾರ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿತು. ಈ ಮೂಲಕ ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಹೇಬಿಯಸ್ ಕಾರ್ಪಸ್ ಅರ್ಜಿ: ಈಶಾ ಫೌಂಡೇಶನ್ ಆವರಣದಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬಂಧಿಯಾಗಿರಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ಗೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತನಗೆ ವರ್ಗಾಯಿಸಿಕೊಂಡಿದೆ. ಕಾಣೆಯಾದ ಅಥವಾ ಅಕ್ರಮವಾಗಿ ಬಂಧನಕ್ಕೊಳಗಾಗಿರುವ ತನ್ನ ಹೆಣ್ಣು ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಿರ್ದೇಶನ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿತ್ತು.
ಫೌಂಡೇಶನ್ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೊಯಮತ್ತೂರು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 30ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಈಶಾ ಫೌಂಡೇಶನ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.
ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ: ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಹೈಕೋರ್ಟ್ ಆದೇಶಕ್ಕೆ ಅನುಸಾರವಾಗಿ ಪೊಲೀಸರು ಯಾವುದೇ ಮುಂದಿನ ಕ್ರಮ ತೆಗೆದುಕೊಳ್ಳಬಾರದು ಎಂದು ನಿರ್ದೇಶನ ನೀಡಿತು. ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ಸ್ಥಿತಿಗತಿ ವರದಿಯನ್ನು ಉನ್ನತ ನ್ಯಾಯಾಲಯಕ್ಕೇ ಸಲ್ಲಿಸಲಿದ್ದಾರೆ ಎಂದು ಅದು ಹೇಳಿದೆ.
ಫೌಂಡೇಶನ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ಸುಮಾರು 150 ಪೊಲೀಸ್ ಅಧಿಕಾರಿಗಳು ಪ್ರತಿಷ್ಠಾನದ ಆಶ್ರಮವನ್ನು ಪ್ರವೇಶಿಸಿದ್ದಾರೆ ಮತ್ತು ಪ್ರತಿ ಮೂಲೆಯಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಕೋರಿದರು.
ಅಕ್ರಮವಾಗಿ ಬಂಧನದಲ್ಲಿದ್ದಾರೆ ಎಂದು ಹೇಳಲಾದ ಇಬ್ಬರು ಮಹಿಳೆಯರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ತನ್ನ ಚೇಂಬರ್ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಿತು. ಪೊಲೀಸರು ಬುಧವಾರ ರಾತ್ರಿ ಆಶ್ರಮವನ್ನು ತೊರೆದಿದ್ದಾರೆ ಎಂದು ಈ ಸಂದರ್ಭದಲ್ಲಿ ನ್ಯಾಯಪೀಠಕ್ಕೆ ತಿಳಿಸಲಾಯಿತು. ಅಲ್ಲದೆ ತಾವು ಸ್ವಯಂಪ್ರೇರಿತವಾಗಿ ಆಶ್ರಮದಲ್ಲಿ ವಾಸಿಸುತ್ತಿದ್ದೇವೆ ಎಂದು ಇಬ್ಬರೂ ಮಹಿಳೆಯರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 14ರಿಂದ ಪ್ರಾರಂಭವಾಗುವ ವಾರದಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಶೀಘ್ರವೇ ಸಿಎಂ ನಿವಾಸ ಖಾಲಿ ಮಾಡಲಿದ್ದಾರೆ ಕೇಜ್ರಿವಾಲ್: ಸಂಸದ ಮಿತ್ತಲ್ ನಿವಾಸಕ್ಕೆ ಸ್ಥಳಾಂತರ - Kejriwal new house