ಹೈದರಾಬಾದ್:ಜಾರ್ಖಂಡ್ನಲ್ಲಿ ಸಂಭವಿಸಿದ ರೈಲು ಅಪಘಾತದ ವಿಷಯವಾಗಿ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ದುರಂತವನ್ನು ಕಟುವಾಗಿ ಟೀಕಿಸಿವೆ. ಇದು ಸರ್ಕಾರ ನಡೆಸುವ ರೀತಿಯೇ ಎಂದು ಟಿಎಂಸಿ ಪ್ರಶ್ನಿಸಿದ್ದರೆ, ರೀಲ್ (ರೈಲ್ವೆ) ಮಂತ್ರಿ ಈ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಜೆಎಂಎಂ ಪಕ್ಷ ಟೀಕಿಸಿದೆ.
ದೇಶದಲ್ಲಿ ಸರಣಿ ರೈಲು ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ರೈಲ್ವೆ ಇಲಾಖೆ ಮಾತ್ರ ಮೌನವಾಗಿದೆ. ಇಲಾಖೆ ಅಧಿಕಾರಿಗಳು ಹೊಣೆಗಾರಿಕೆ ಮರೆತಿದ್ದಾರೆ ಎಂದು ವಿಪಕ್ಷಗಳು ಟೀಕಿಸಿವೆ.
ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ''ಮತ್ತೊಂದು ರೈಲು ದುರಂತ ಸಂಭವಿಸಿದೆ. ಮಂಗಳವಾರ ಮುಂಜಾನೆ ಜಾರ್ಖಂಡ್‌ನ ಚಕ್ರಧರಪುರದಲ್ಲಿ ಹೌರಾ-ಮುಂಬೈ ಮೇಲ್ ಹಳಿತಪ್ಪಿದೆ. ಹಲವರು ಸಾವಿಗೀಡಾಗಿದ್ದರೆ, ಅಪಾರ ಜನರು ಗಾಯಗೊಂಡಿದ್ದಾರೆ. ಪ್ರತಿ ವಾರವೂ ಇಂತಹ ದುಃಸ್ವಪ್ನಗಳ ಸರಣಿ ಮುಂದುವರಿದಿದೆ. ರೈಲು ಹಳಿಗಳ ಮೇಲೆ ಸಾವು ಮತ್ತು ಗಾಯಗಳಿಗೆ ಅಂತ್ಯವಿಲ್ಲವಾಗಿದೆ. ನಾವು ಇದನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು'' ಎಂದು ಎಂದು ಪ್ರಶ್ನಿಸಿದ್ದಾರೆ.
''ಕೇಂದ್ರ ಸರ್ಕಾರದ ನಿರ್ದಾಕ್ಷಿಣ್ಯಕ್ಕೆ ಕೊನೆಯಿಲ್ಲವೇ?. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಈ ದುರಂತಕ್ಕೆ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಹೊಣೆಗಾರಿಕೆ ಹೊರಬೇಕು'' ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.
ಅರೆಕಾಲಿಕ ರೈಲ್ವೆ ಸಚಿವರು: ''ಕೇಂದ್ರ ಸರ್ಕಾರ ನಿದ್ದೆಯಿಂದ ಎಚ್ಚೆತ್ತುಕೊಳ್ಳಲು ಇನ್ನೂ ಎಷ್ಟು ರೈಲು ಅಪಘಾತಗಳು ನಡೆಯಬೇಕು?. ಸರ್ಕಾರ ರೈಲ್ವೆ ಸುರಕ್ಷತೆ ಬಗ್ಗೆ ಕ್ರಮ ವಹಿಸದೆ ಹೊಣೆಗೇಡಿತನದಿಂದ ನಡೆದುಕೊಳ್ಳುತ್ತಿದೆ. ಇದರಿಂದ ಜನರ ಪ್ರಾಣ ಕಳೆದುಕೊಂಡು, ಕಷ್ಟಗಳು ಮತ್ತು ದುಃಖಗಳಿಗೆ ಒಳಗಾಗುತ್ತಿದ್ದಾರೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಚಿವಾಲಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಚುನಾವಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರದಲ್ಲಿ ಅರೆಕಾಲಿಕ ರೈಲು ಸಚಿವರಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸಂಸದೆ ಸಾಗರಿಕಾ ಘೋಸ್'' ಆರೋಪಿಸಿದ್ದಾರೆ.
ಇನ್ನೂ, ಅಪಘಾತಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕೂಡ ಕೇಂದ್ರ ಮತ್ತು ರೈಲ್ವೆ ಇಲಾಖೆಯನ್ನು ಟೀಕಿಸಿದೆ. ಪಕ್ಷದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ''ಬಿಜೆಪಿಯ ಉನ್ನತ ನಾಯಕರು ದೆಹಲಿಯಲ್ಲಿ ಕುಳಿತಿದ್ದಾರೆ. ರೀಲ್ (ರೈಲು) ಸಚಿವರು ದೇಶಾದ್ಯಂತ ನಡೆಯುತ್ತಿರುವ ರೈಲ್ವೆ ಅಪಘಾತಗಳ ಬಗ್ಗೆ ಮೌನವಾಗಿದ್ದಾರೆ? ಇದಕ್ಕೆ ಏನು ಕಾರಣ?'' ಎಂದು ಪ್ರಶ್ನಿಸಿದೆ.
ಅಪಘಾತವನ್ನು ಉದಾಹರಿಸಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಬಗ್ಗೆ ವ್ಯಂಗ್ಯವಾಡಿರುವ ಜೆಎಂಎಂ, ''ಈ ಅಪಘಾತದಲ್ಲಿ ಸಿಎಂ ಹೇಮಂತ್ ಸೊರೆನ್ ಮತ್ತು I.N.D.I.A ಕೂಟದ ಕೈವಾಡವಿಲ್ಲ. ಇ.ಡಿ., ಸಿ.ಬಿ.ಐ ಮೂಲಕ ನಮ್ಮ ಮೇಲೆ ದಾಳಿ ನಡೆಸಲು ಪ್ರಚೋದಿಸಬೇಡಿ'' ಎಂದಿದೆ.
ಇದನ್ನೂ ಓದಿ:ಹಳಿ ತಪ್ಪಿದ ಹೌರಾ-ಮುಂಬೈ ಮೇಲ್ ಎಕ್ಸ್ಪ್ರೆಸ್ನ 18 ಬೋಗಿಗಳು; ಇಬ್ಬರು ಸಾವು, 18 ಪ್ರಯಾಣಿಕರಿಗೆ ಗಾಯ - Howrah Mumbai Mail Express Derailed