ಹತ್ರಾಸ್ (ಉತ್ತರ ಪ್ರದೇಶ) : ಸಂತ ಭೋಲೆ ಬಾಬಾರ ಮಹಿಮೆ ಸರಾಗವಾಗಿ ನಡೆಯುತ್ತಿತ್ತು. ಬಾಬಾ ವೇದಿಕೆಯ ಮೇಲೆ ಕುಳಿತು ಭಕ್ತರಿಗೆ ಉಪದೇಶ ನೀಡುತ್ತಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಅಲ್ಲಿಗೆ ಆಗಮಿಸಿದ್ದರು. ಇದೇ ವೇಳೆ, ಸತ್ಸಂಗ ಸ್ಥಳದಿಂದ ಹೊರಬರುವ ಧಾವಂತದಲ್ಲಿ ಕಾಲ್ತುಳಿತ ಉಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಸ್ಥಳದಲ್ಲಿನ ಶಾಖ ಮತ್ತು ತೇವಾಂಶದಿಂದ ಬೇಸತ್ತ ಜನರು ಇದ್ದಕ್ಕಿದ್ದಂತೆ ಹೊರಾಂಗಣಕ್ಕೆ ಹೋಗಲು ಎದ್ದಿದ್ದಾರೆ. ನಿರ್ಗಮನ ದ್ವಾರ ಕಿರಿದಾಗಿದ್ದರಿಂದ ಅಲ್ಲಿ ಜಾಮ್ ಆಗಿದೆ. ಬಹಳಷ್ಟು ಜನರು ಒಂದೇ ಬಾರಿಗೆ ಹೊರಡಲು ಪ್ರಯತ್ನಿಸಿದ್ದಾರೆ. ಪರಿಣಾಮವಾಗಿ ಕಾಲ್ತುಳಿತ ಉಂಟಾಗಿದೆ. ಅಲ್ಲಿಂದ ಹೊರಬರಲು ಜನರು ಒಬ್ಬರ ನಂತರ ಒಬ್ಬರು ಪೈಪೋಟಿ ಆರಂಭಿಸಿದ್ದಾರೆ. ದಾರಿ ಕಂಡವರು ನಿರ್ಗಮನ ದ್ವಾರದ ಬಳಿಗೆ ಹೋಗಿದ್ದಾರೆ. ಅಲ್ಲಿ ಬಿದ್ದವರಿಗೆ ಮತ್ತೆ ಮೇಲೇಳಲಾಗಿಲ್ಲ. ಈ ಅವ್ಯವಸ್ಥೆಯಲ್ಲಿ 87 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಕಾಲ್ತುಳಿತ ಎಷ್ಟು ಭಯಾನಕವಾಗಿತ್ತು ಎಂದರೆ ಸಾವಿನ ಸಂಖ್ಯೆ 100ಕ್ಕಿಂತ ಹೆಚ್ಚಿರಬಹುದು. ಏಕೆಂದರೆ, ನೂರಾರು ಜನರು ಸತ್ಸಂಗದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮಹಿಳಾ ಭಕ್ತರ ಸಂಖ್ಯೆಯೇ ಅಧಿಕವಾಗಿತ್ತು. ಗುಂಪಿನಲ್ಲಿ ಮಕ್ಕಳು ಮತ್ತು ವೃದ್ಧರೂ ಇದ್ದರು. ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರಿದ್ದಾರೆ. ಮಕ್ಕಳು, ವೃದ್ಧರೂ ಪ್ರಾಣ ಕಳೆದುಕೊಂಡಿದ್ದಾರೆ.
ಸತ್ಸಂಗ ಸ್ಥಳದ ಗೇಟಿನಲ್ಲೇ ಚೆಲ್ಲಾಪಿಲ್ಲಿಯಾಗಿದ್ದ ಮೃತ ದೇಹಗಳು : ಸತ್ಸಂಗ ವೇದಿಕೆಯ ಗೇಟಿನ ಹೊರಗೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಉಸಿರಾಡುತ್ತಿದ್ದ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆದರೆ, ಸಾಕಷ್ಟು ಸಂತ್ರಸ್ತರು ಅಲ್ಲಿಗೆ ತಲುಪಿದ್ದರಿಂದ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಬಹುತೇಕರು ಆಸ್ಪತ್ರೆ ತಲುಪುವಷ್ಟರಲ್ಲಿ ಗೇಟಿನಲ್ಲೇ ಸಾವನ್ನಪ್ಪಿದ್ದಾರೆ.