ಹುಬ್ಬಳ್ಳಿ: ರಾಜ್ಯ ಸರ್ಕಾರ ನಾಲ್ಕು ಸಾರಿಗೆ ಸಂಸ್ಥೆಗಳ ಪ್ರಯಾಣ ದರ ಪರಿಷ್ಕರಿಸುವ ನಿರ್ಧಾರ ಕೈಗೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆಯಾಗುತ್ತಿರುವುದಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಶಿಕುಮಾರ್ ಹಿರೇಮಠ ಎಂಬವರು ಪ್ರತಿಕ್ರಿಯಿಸಿ, "ಬಸ್ ದರ ಏರಿಕೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವದರ ಜೊತೆಗೆ ಆರ್ಥಿಕ ಹೊರೆ ಬೀಳಲಿದೆ. ದರ ಏರಿಕೆ ಮಾಡುವುದಕ್ಕಿಂತ ಮಹಿಳೆಯರಿಗೆ ನೀಡಿರುವ ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸಿ ಯಥಾಸ್ಥಿತಿ ಮುಂದುವರೆಸಬೇಕು" ಎಂದು ಒತ್ತಾಯಿಸಿದ ಅವರು "ಸಾರಿಗೆ ಸಿಬ್ಬಂದಿಗೆ ಸಂಬಳ ಕೊಡಲು ಸಾಧ್ಯವಾಗದ ಕಾರಣ ಅದನ್ನು ಮುಚ್ಚಿಕೊಳ್ಳಲು ದರ ಏರಿಕೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕ ಹಿತಾಶಕ್ತಿ ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಹಿಂದಕ್ಕೆ ಪಡೆಯಬೇಕು" ಎಂದರು.
ಶ್ರೀನಿವಾಸ ಕುಲಕರ್ಣಿ ಪ್ರತಿಕ್ರಿಯಿಸಿ, "ಏಕಕಾಲಕ್ಕೆ ಶೇ.15ರಷ್ಟು ದರ ಏರಿಕೆ ಮಾಡಿದರೆ ಸಾರ್ವಜನಿಕರಿಗೆ ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗಲಿದೆ. ಈಗಾಗಲೇ ದಿನ ಬಳಕೆ ವಸ್ತುಗಳು ಬೆಲೆ ಏರಿಕೆ ನಡುವೆ ಇದನದನು ಏರಿಕೆ ಸರಿಯಲ್ಲ. ಹಂತ ಹಂತವಾಗಿ ಬೆಲೆ ಏರಿಕೆ ಮಾಡಿದರೆ ಒಳ್ಳೆಯದು. ಈಗ ಏಕಕಾಲಕ್ಕೆ ಶೇ.15ರಷ್ಟು ಮಾಡಬಾರದು" ಎಂದು ಅನಿಸಿಕೆ ಹಂಚಿಕೊಂಡರು.
"ರಾಜ್ಯದಲ್ಲಿ ಮಳೆ, ಬೆಳೆ ಸರಿ ಇಲ್ಲ. ಜನರ ಬಳಿ ಹಣವಿಲ್ಲ. ಹೀಗಾಗಿ ಕೂಲಿ ಕಾರ್ಮಿಕರು, ರೈತರಿಗೆ ತೊಂದರೆಯಾಗಲಿದೆ. ಇದ್ದಂತೆ ಇರಲಿ. ಸರ್ಕಾರ ಐದು ಯೋಜನೆ ಕೊಟ್ಟು ಯಶಸ್ವಿಯಾಗಿದೆ. ಇದರಿಂದ ತುಂಬ ಖುಷಿಯಾಗಿದೆ. ಬಸ್ ದರ ಹೆಚ್ಚಿಸುವುದನ್ನು ಕೈಬಿಡಬೇಕು" ಎಂದು ಪ್ರಯಾಣಿಕ ಮುನಾಫ ಸಾಬದ ವಾಲಿಕಾರ ಹೇಳಿದರು.
"ದರ ಏರಿಕೆ ಕ್ರಮ ಸರಿಯಲ್ಲ. ಈಗಾಗಲೇ ಸರಿಯಾದ ಬಸ್ಗಳಿಲ್ಲ. ಇದ್ದ ಬಸ್ಗಳು ಶಕ್ತಿ ಯೋಜನೆಯಿಂದ ತುಂಬಿರುತ್ತವೆ. ಹೀಗಾಗಿ ಸಾರ್ವಜನಿಕರು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಬಸ್ ದರ ಏರಿಕೆ ಕ್ರಮದಿಂದ ಸರ್ಕಾರ ಹಿಂಪಡೆಯಬೇಕು" ಎಂದು ಮತ್ತೋರ್ವ ಪ್ರಯಾಣಿಕ ವಾಸೀಂ ಒತ್ತಾಯಿಸಿದರು.
ಶೇ.15ರಷ್ಟು ದರ ಪರಿಷ್ಕರಣೆ ಮಾಡಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಇದೇ ಜನವರಿ 5ರಿಂದ ಹೊಸ ದರ ಪರಿಷ್ಕರಣೆ ಅನ್ವಯವಾಗಲಿದೆ.
ಇದನ್ನೂ ಓದಿ: ಮೂಲಭೂತ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ಖರ್ಚು 38%!