ಹೈದರಾಬಾದ್: ಹೈದರಾಬಾದ್‌ನ ಐದು ಸ್ಥಳಗಳಲ್ಲಿ ನಡೆಸಿದ ಶೋಧದ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಹೀರಾ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ಡಾ.ಆಲಿಮಾ ನೌಹೇರಾ ಶೇಕ್ ಮತ್ತು ಬೇನಾಮಿದಾರರ ಹೆಸರಿನ 70 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ.
2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೈದರಾಬಾದ್ ವಲಯ ಕಚೇರಿ ನಗರದ ಐದು ವಿಭಿನ್ನ ಸ್ಥಳಗಳಲ್ಲಿ ಆರೋಪಿಗಳು ನಡೆಸಿದ ಆಪಾದಿತ ಹೂಡಿಕೆ ವಂಚನೆಯಲ್ಲಿ ಆಗಸ್ಟ್ 3ರಂದು ಶೋಧ ಕಾರ್ಯಾಚರಣೆ ನಡೆಸಿದ ನಂತರ ಇಡಿ ಈ ಕ್ರಮ ಕೈಗೊಂಡಿದೆ. ಶೋಧ ಸಮಯದಲ್ಲಿ, ತನಿಖಾ ಸಂಸ್ಥೆಯು ನೌಹೆರಾ ಅವರ ಮನೆಯ ಕಾಂಪೌಂಡ್‌ನಲ್ಲಿ 12 ಅತ್ಯಾಧುನಿಕ ಕಾರುಗಳನ್ನು ವಶಪಡಿಸಿಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿರುವ ಅವರ ಆಸ್ತಿ ವಿವರ ಕಂಡುಕೊಂಡಿದೆ.
ಶೋಧ ಕಾರ್ಯಾಚರಣೆಯ ಸಮಯದಲ್ಲಿ 90 ಲಕ್ಷ ರೂಪಾಯಿ ನಗದು, ಒಂದು ಬಿಎಂಡಬ್ಲ್ಯು, ಒಂದು ಮರ್ಸಿಡಿಸ್ ಬೆಂಜ್, ಒಂಬತ್ತು ಟೊಯೊಟಾ ಫಾರ್ಚುನರ್ ಮತ್ತು ಒಂದು ಮಹೀಂದ್ರಾ ಸ್ಕಾರ್ಪಿಯೊ ಸೇರಿದಂತೆ 12 ಅತ್ಯಾಧುನಿಕ ಕಾರುಗಳು ವಶಪಡಿಸಿಕೊಳ್ಳಲಾಗಿದೆ. ಹೀರಾ ಗುಂಪಿನ ಹೆಸರಿನಲ್ಲಿ 13 ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಅವುಗಳು ಶೇಖ್ ಮತ್ತು ಅವರ ಸಂಬಂಧಿಕರು ಹಾಗೂ ಸಹಚರರು ಹೆಸರಿನಲ್ಲಿದ್ದು, ಸುಮಾರು ರೂ.45 ಕೋಟಿ ಮೌಲ್ಯದ ಆಸ್ತಿ ಇದಾಗಿದೆ. ಸುಮಾರು ರೂ.25 ಕೋಟಿ ಮೌಲ್ಯದ 11 ಬೇನಾಮಿ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತ ಮತ್ತು ವಿದೇಶಗಳಲ್ಲಿನ ಅಕ್ರಮವಾಗಿ ಗಳಿಸಿದ ಆದಾಯವನ್ನು ಬೇರೆಡೆಗೆ ತಿರುಗಿಸಲು ಸಂಬಂಧಿಸಿದ ವಿವಿಧ ದೋಷಾರೋಪಣೆ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೀರಾ ಗ್ರೂಪ್ ಆಫ್ ಕಂಪನಿಗಳು ಮತ್ತು ನೌಹೇರಾ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ. ಅಕ್ಟೋಬರ್ 2018ರಲ್ಲಿ, ಶೇಕ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೈಕಲ್ ಪಾತ್ ಯೋಜನೆ ರದ್ದು - Mangaluru Cycle Path Project