ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕುಸಿದಿದ್ದು, ಯಮುನಾ ನದಿಯಲ್ಲಿ ವಿಷಕಾರಿ ನೊರೆ ತೇಲುತ್ತಿರುವುದು ಕಂಡು ಬಂದಿದೆ. ಶುಕ್ರವಾರ ಬೆಳಗ್ಗೆ ಕಾಳಿಂದಿ ಕುಂಜ್ ಪ್ರದೇಶದಲ್ಲಿ ಯಮುನಾ ನದಿಯ ಮೇಲ್ಮೈಯಲ್ಲಿ ಭಾರಿ ಪ್ರಮಾಣದ ವಿಷಕಾರಿ ನೊರೆ ತೇಲುತ್ತಿರುವುದು ಕಂಡು ಬಂದಿದೆ.
ನದಿಯಲ್ಲಿ ವಿಷಯುಕ್ತ ನೊರೆ ಕಾಣಿಸಿಕೊಳ್ಳಲು ಅಕ್ಷರಶಃ ಮಿತಿಮೀರಿದ ಮಾಲಿನ್ಯವೇ ಕಾರಣ. ರಾಜಧಾನಿಯಲ್ಲಿ ಇಂದು ಬೆಳಗ್ಗೆ ವಾಯು ಗುಣಮಟ್ಟದ ಸೂಚ್ಯಂಕ (AQI) 292 ರಷ್ಟಿತ್ತು. ಎಲ್ಲವನ್ನು ನಿಯಂತ್ರಿಸಲಾಗುತ್ತದೆ ಎನ್ನುವ ಅರವಿಂದ್ ಕೇಜ್ರಿವಾಲ್, ಇದನ್ನೇಕೆ ನಿಯಂತ್ರಣ ಮಾಡುತ್ತಿಲ್ಲ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.
''ಕಳೆದ 10 ವರ್ಷಗಳಿಂದ ದೆಹಲಿಯ ಆಡಳಿತ ನಡೆಸುತ್ತಿರುವ ಎಎಪಿ ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಪರಿಣಾಮ ವಾಯುಗುಣಮಟ್ಟ ದಿನೇ ದಿನೆ ಕುಸಿಯುತ್ತಿದೆ. ನದಿ ಮತ್ತು ಗಾಳಿಯಲ್ಲಿ ವಿಷ ತುಂಬಿದೆ. ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಕೇವಲ ಆರಂಭಷ್ಟೇ... ಶೀಘ್ರದಲ್ಲೇ ಚುನಾವಣೆ ಎದುರಾಗಲಿದೆ. ರಾಷ್ಟ್ರ ರಾಜಧಾನಿಯನ್ನು ವಿಷಮುಕ್ತ ಮಾಡಲು ಬಿಜೆಪಿಗೆ ಅವಕಾಶ ಮಾಡಿಕೊಡಬೇಕು. ಸಮಸ್ಯೆ ಎದುರಾದಾಗ ಎಎಪಿ ಎಚ್ಚೆತ್ತುಕೊಳ್ಳುತ್ತದೆ. ಸಮಸ್ಯೆ ಉದ್ಭವಿಸುವ ಮೊದಲು, ಅವರು ಎಚ್ಚೆತ್ತುಕೊಳ್ಳವ ಮುನ್ನವೇ ದೆಹಲಿಯ ಸಮಸ್ಯೆಗಳು ಬಗೆಹರಿಯುತ್ತವೆ'' ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.
ಸಮಸ್ಯೆಗೆ ಎಎಪಿಯೇ ಕಾರಣ - ಪೂನಾವಾಲಾ:''ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಮಾತನಾಡಿ, ರಾಜಧಾನಿ ವಿಷಕಾರಿ ಗ್ಯಾಸ್ ಚೇಂಬರ್ ಆಗುತ್ತಿದೆ. ಹೀಗಾಗಲು ಎಎಪಿ ಸರ್ಕಾರವೇ ಕಾರಣ. ಸರ್ಕಾರದ ನಿರ್ಲಕ್ಷ್ಯತನ, ಬೇಜವಾಬ್ದಾರಿತನದಿಂದ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿಯುತ್ತಿದೆ'' ಎಂದು ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.