ಮೈಸೂರು: 'ಚಿಂಟು ನಿನ್ನ ಮರೆಯಲಾರೆ' ಎಂಬ ಪುಸ್ತಕವನ್ನು ಮಾಜಿ ಸಚಿವ ಸಾ.ರಾ.ಮಹೇಶ್ ತನ್ನ ನೆಚ್ಚಿನ ಕೋತಿಯ ಪುಣ್ಯಸ್ಮರಣೆಯ ದಿನವಾದ ನಿನ್ನೆ ಬಿಡುಗಡೆ ಮಾಡಿದ್ದಾರೆ. ಕೋತಿಯ 5ನೇ ವರ್ಷದ ಪುಣ್ಯಸ್ಮರಣೆಯಂದು ಸಮಾಧಿಗೆ ಪೂಜೆ ಸಲ್ಲಿಸಿ, ನೂರಾರು ಮಂದಿಗೆ ತಮ್ಮ ತೋಟದಲ್ಲಿ ಊಟ ಹಾಕಿಸಿದ್ದಾರೆ.
ಜೆಡಿಎಸ್ನ ಪ್ರಭಾವಿ ಮುಖಂಡರೂ ಆಗಿರುವ ಸಾ.ರಾ.ಮಹೇಶ್ ಅವರ ಮೈಸೂರಿನ ದಟ್ಟಗಹಳ್ಳಿಯ ತೋಟದಲ್ಲಿ ಚಿಂಟು ಸಾವನ್ನಪ್ಪಿತ್ತು. ಕೋತಿಯ ಪ್ರತಿಮೆಯನ್ನು ಖ್ಯಾತ ಕಲಾವಿದ ಅರುಣ್ ಯೋಗಿರಾಜ್ ಅವರಿಂದ ಕೆತ್ತಿಸಿ ಪ್ರತಿವರ್ಷ ಜನವರಿ 1ರಂದು ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ನಿನ್ನೆ ಸಮಾಧಿಗೆ ಪೂಜೆ ಸಲ್ಲಿಸಿದ ಸಾ.ರಾ.ದಂಪತಿ ವಿಶೇಷ ಹೋಮದಲ್ಲಿ ಭಾಗಿಯಾಗಿದರು. ಬಳಿಕ ಪುಸ್ತಕ ಬಿಡುಗಡೆ ಮಾಡಿದರು.
ಸಾ.ರಾ.ಮಹೇಶ್ ತೋಟದಲ್ಲಿ ಕೋತಿ ಗಾಯಗೊಂಡ ಸ್ಥಿತಿಯಲ್ಲಿತ್ತು. ಅದನ್ನು ಸಾ.ರಾ.ಮಹೇಶ್ ಮಗ ಚಿಕಿತ್ಸೆ ಕೊಡಿಸಿ, ತೋಟದಲ್ಲೇ ಇಟ್ಟುಕೊಂಡಿದ್ದರು. ಅದಕ್ಕೆ ಚಿಂಟು ಎಂದು ಹೆಸರಿಡಲಾಗಿತ್ತು. ಈ ಕೋತಿ ತೋಟದ ನಾಯಿ, ಕುದುರೆ, ಹಸುಗಳ ಜೊತೆಗೆ ಆಟವಾಡುತ್ತಾ ಸಾ.ರಾ.ಮಹೇಶ್ ಅವರ ಮನಸ್ಸು ಗೆದ್ದಿತ್ತು.
2019ರಲ್ಲಿ ಸಾ.ರಾ.ಮಹೇಶ್ ಹೊಸ ವರ್ಷದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಜನವರಿ 1ರಂದು ತಮ್ಮ ತೋಟದಲ್ಲಿದ್ದ ಕೋತಿ ಸೀಬೆ ಮರದಿಂದ ಬಿದ್ದು ವಿದ್ಯುತ್ ತಂತಿಗೆ ಸಿಲುಕಿ ದುರಂತ ಸಾವನ್ನಪ್ಪಿತ್ತು. ಈ ಸುದ್ದಿ ತಿಳಿದು ಸಾ.ರಾ.ಮಹೇಶ್ ಪ್ರವಾಸ ಮೊಟಕುಗೊಳಿಸಿ ಮೈಸೂರಿಗೆ ಬಂದು ಅಂತ್ಯಕ್ರಿಯೆ ನಡೆಸಿದ್ದರು. ಬಳಿಕ 11 ದಿನದ ಮರಣೋತ್ತರ ಕಾರ್ಯಗಳನ್ನು ಮಾಡಿ ಸಮಾಧಿ ಸ್ಥಳದಲ್ಲಿ ಕೋತಿಯ ಮೂರ್ತಿ ಮಾಡಿಸಿದ್ದಾರೆ.
"ಎಂಟು ವರ್ಷದ ಹಿಂದೆ ಕೋತಿಯ ಹಿಂಡಿನಲ್ಲಿ ಬಂದ ಒಂದು ಮರಿ ನಮ್ಮ ತೋಟದಲ್ಲಿ ಉಳಿದುಕೊಂಡಿತ್ತು. ಅದನ್ನು ನನ್ನ ಎರಡನೇ ಮಗ ಜಯಂತ್ ಹಾಲು ಕೊಟ್ಟು ಸಾಕಿದ್ದ. ಅದು ನಮ್ಮ ತೋಟಕ್ಕೆ ಹೊಂದಿಕೊಂಡಿತು. ತೋಟದಲ್ಲಿದ್ದ ಇತರೆ ಪ್ರಾಣಿಗಳ ಜೊತೆಗೂ ಬಹಳ ಹೊಂದಿಕೊಂಡಿತ್ತು. ನಾವು ಯಾವುದೇ ಹೊಸ ವಸ್ತುವನ್ನು ತಂದರೆ ಅದನ್ನು ಹಿಡಿದುಕೊಂಡು ನೋಡುತ್ತಿತ್ತು. ನಮ್ಮ ಹಸುಗಳು ಹೊರಗೆ ಮೇಯಲು ಹೋದಾಗ ತೋಟದ ಕಾಂಪೌಂಡ್ ಮೇಲೆ ಕುಳಿತು ಅವುಗಳಿಗಾಗಿ ಕಾಯುತ್ತಿತ್ತು. ನಾನು ಹೊರದೇಶಕ್ಕೆ ಹೋದ ಸಮಯದಲ್ಲಿ ವಿದ್ಯುತ್ ತಗುಲಿ ಸಾವನ್ನಪ್ಪಿತು. ನಂಬಿಕೆಯೇ ದೇವರು. ಅದಕ್ಕಾಗಿ ಕೋತಿಯ ನೆನಪಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದೇವೆ. ಕೋತಿ ಆಂಜನೇಯನ ಪ್ರತಿರೂಪ. ಹೀಗಾಗಿ ದೇವಾಲಯ ನಿರ್ಮಿಸಿ ಪೂಜೆ ಮಾಡುತ್ತೇವೆ. ಕುರಿಯ ಮೇಲೆ ಹೋಗುತ್ತಿದ್ದ ಒಂದು ಫೋಟೋ ಇತ್ತು. ಅದರ ರೀತಿಯಲ್ಲೇ ಕೋತಿಯ ಪ್ರತಿಮೆಯನ್ನು ಯಾವುದೇ ಹಣ ಪಡೆಯದೇ ಶಿಲ್ಪಿ ಅರುಣ್ ಯೋಗಿರಾಜ್ ಮಾಡಿಕೊಟ್ಟರು. ಅದನ್ನು ದೇವಸ್ಥಾನ ಮಾಡಿ ಪ್ರತಿಷ್ಠಾಪನೆ ಮಾಡಿದ್ಧೇವೆ. ಪ್ರತಿವರ್ಷದಂದು ಪುಣ್ಯಸ್ಮರಣೆ ಮಾಡುತ್ತೇವೆ. ಅಂದು ಸುದರ್ಶನ ಹೋಮ, ಗಣಪತಿ ಹೋಮ, ನವಗ್ರಹ ಹೋಮ, ಮಾಡುತ್ತೇವೆ. ಹೀಗೆ ಪ್ರತಿವರ್ಷ ಅದನ್ನು ನೆನೆಯುವ ಕೆಲಸ ಮಾಡುತ್ತಿದ್ದೇವೆ. ಇಂದು 5ನೇ ವರ್ಷದ ಪುಣ್ಯಸ್ಮರಣೆ. ಅದು ಜೀವಂತವಾಗಿದ್ದಾಗ ತೆಗೆದ ಫೋಟೋಗಳ ಸಮೇತ ರಮೇಶ್ ಎಂಬ ಉಪನ್ಯಾಸಕರು ಪುಸ್ತಕ ಬರೆದಿದ್ದಾರೆ. ಅದನ್ನು ಬಿಡುಗಡೆ ಮಾಡಿದ್ದೇವೆ. ಕೋತಿಯನ್ನು ಚಿಂಟು ಎನ್ನುತ್ತಿದ್ದೆವು. ಆ ಹೆಸರಿನಲ್ಲೇ ಪುಸ್ತಕ ಬರೆದಿದ್ದಾರೆ. ಮನುಷ್ಯರು ಅನೇಕ ಪ್ರಾಣಿಗಳನ್ನು ತಮ್ಮಿಚ್ಚೆಗೆ ತಕ್ಕಂತೆ ಪ್ರೀತಿಸುತ್ತಾರೆ. ಆದರೆ ಈ ಕೋತಿ ನನ್ನ ಜೊತೆ ಬಹಳ ಬಾಂಧವ್ಯ ಹೊಂದಿತ್ತು. ಅದರ ಸ್ಥಾನವನ್ನು ಬೇರೆ ಯಾವ ಪ್ರಾಣಿಯೂ ತುಂಬಲು ಸಾಧ್ಯವಿಲ್ಲ" ಎಂದು ಸಾ.ರಾ.ಮಹೇಶ್ ಭಾವುಕರಾದರು.
ಇದನ್ನೂ ಓದಿ: ಪ್ರೀತಿಯ ಕೋತಿಗೆ ವರ್ಷದ ತಿಥಿ ಕಾರ್ಯ ಮಾಡಿದ ಶಾಸಕ ಸಾ.ರಾ. ಮಹೇಶ್