ಚಂಡೀಗಢ:ಹರಿಯಾಣ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಒಟ್ಟು 90 ಸ್ಥಾನಗಳಿರುವ ರಾಜ್ಯದಲ್ಲಿ ಒಟ್ಟು 1031 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕೋಟ್ಯಧಿಪತಿಗಳು ಎಂಬುದು ವಿಶೇಷ.
ಹೌದು, ಬಿಜೆಪಿ ಆಡಳಿತಾರೂಢ ರಾಜ್ಯದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಭಾರಿ ಕುಳಗಳಾಗಿದ್ದಾರೆ. 1031 ಅಭ್ಯರ್ಥಿಗಳ ಪೈಕಿ 538 (52%) ಅಭ್ಯರ್ಥಿಗಳು ಕೋಟ್ಯಾಧೀಶರಾಗಿದ್ದಾರೆ. ಇಂಥದ್ದೊಂದು ಮಾಹಿತಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು ಸಲ್ಲಿಸಿದ ನಾಮಪತ್ರಗಳ ಆಧಾರದ ಮೇಲೆ ವರದಿ ತಯಾರಿಸಿದೆ.
ಪಕ್ಷಗಳಿಗಿಂತ ಸ್ವತಂತ್ರರೇ ಕೋಟಿ ಕುಳಗಳು:ವರದಿಯ ಪ್ರಕಾರ, ಕೋಟ್ಯಧಿಪತಿ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಜಕೀಯ ಪಕ್ಷಗಳಿಗಿಂತಲೂ ಸ್ವತಂತ್ರ ಅಭ್ಯರ್ಥಿಗಳೇ ಹೆಚ್ಚಿದ್ದಾರೆ. ಅಂದರೆ, 538 ಜನರ ಪೈಕಿ 184 ಮಂದಿ ಸ್ವತಂತ್ರ ಅಭ್ಯರ್ಥಿಗಳು ಕೋಟಿ ಕುಳಗಳಾಗಿದ್ದಾರೆ. ಇದರಲ್ಲಿ ಬಿಜೆಪಿಯ 85, ಕಾಂಗ್ರೆಸ್‌ನ 84, ಜೆಜೆಪಿಯ 46, ಐಎನ್‌ಎಲ್‌ಡಿಯ 34, ಎಎಪಿಯ 52 ಮತ್ತು ಬಿಎಸ್‌ಪಿಯಿಂದ 18 ಅಭ್ಯರ್ಥಿಗಳು ಕೋಟ್ಯಂತರ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಹಿಸಾರ್‌ನ ನಾರ್ನಾಂಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕ್ಯಾಪ್ಟನ್ ಅಭಿಮನ್ಯು ಚುನಾವಣಾ ಕಣದಲ್ಲಿಯೇ ಶ್ರೀಮಂತ ಅಭ್ಯರ್ಥಿ. ನಾಮಪತ್ರದಲ್ಲಿ ಘೋಷಿಸಿರುವಂತೆ ಇವರ ಆಸ್ತಿಯ ಮೌಲ್ಯ 491 ಕೋಟಿ ರೂಪಾಯಿ. ಸೊಹ್ನಾದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರೋಹ್ತಾಸ್ ಸಿಂಗ್ ಅವರ ಆಸ್ತಿ 484 ಕೋಟಿ ರೂಪಾಯಿ, ಹಿಸಾರ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಾವಿತ್ರಿ ಜಿಂದಾಲ್ ಅವರು 270 ಕೋಟಿಗೂ ಅಧಿಕ ಆಸ್ತಿಯನ್ನು ಪ್ರಕಟಿಸಿದ್ದಾರೆ.
ಕಣದಲ್ಲಿನ 277 ಅಭ್ಯರ್ಥಿಗಳು (ಶೇ.27) 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. 136 (ಶೇ.13) ಅಭ್ಯರ್ಥಿಗಳ ಆಸ್ತಿ 2 ಕೋಟಿ ರೂ.ನಿಂದ 5 ಕೋಟಿ ರೂ. ಇದೆ. 50 ಲಕ್ಷದಿಂದ 2 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡವರ ಪ್ರಮಾಣ ಶೇ.22 ರಷ್ಟಿದ್ದರೆ, 10 ಲಕ್ಷದಿಂದ 50 ಲಕ್ಷ ರೂಪಾಯಿ ಆಸ್ತಿ ಹೊಂದಿದವರು ಶೇಕಡಾ 19 ರಷ್ಟಿದ್ದಾರೆ. ಶೇ.19ರಷ್ಟು ಮಂದಿ 10 ಲಕ್ಷಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ. 2019ರ ವಿಧಾನಸಭಾ ಚುನಾವಣೆಯಲ್ಲಿ 1138 ಅಭ್ಯರ್ಥಿಗಳ ಪೈಕಿ 481 ಅಭ್ಯರ್ಥಿಗಳು (ಶೇ.42) ಕೋಟ್ಯಧಿಪತಿಗಳಾಗಿದ್ದರು. ಈ ಬಾರಿ ಆ ಸಂಖ್ಯೆ ಶೇ.52ಕ್ಕೆ ಹೆಚ್ಚಿದೆ.
ಕ್ರಿಮಿನಲ್ ಕೇಸ್ ಇರುವ ಅಭ್ಯರ್ಥಿಗಳು:ವಿವಿಧ ಪಕ್ಷಗಳಿಗೆ ಸೇರಿದ 133 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರೆ, 95 ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ 209 ಮಂದಿ ಪದವಿ, 152 ಮಂದಿ ಸ್ನಾತಕೋತ್ತರ, 15 ಮಂದಿ ಡಾಕ್ಟರೇಟ್ ಹಾಗೂ 201 ಮಂದಿ ಹತ್ತನೇ ತರಗತಿ ಪೂರ್ಣಗೊಳಿಸಿದ್ದಾರೆ. 15 ಮಂದಿ ಅನಕ್ಷರಸ್ಥರೂ ಸ್ಪರ್ಧೆಯಲ್ಲಿದ್ದಾರೆ.
ಇದನ್ನೂ ಓದಿ:ಜಮ್ಮು- ಕಾಶ್ಮೀರ ಚುನಾವಣೆ: ಅರ್ಧದಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳು, ಹಲವರ ಮೇಲಿದೆ ಕ್ರಿಮಿನಲ್ ಕೇಸ್ - ADR reoprt on J K Assembly Polls