ರಾಷ್ಟ್ರಪತಿಯಾಗಿ ಇಂದಿಗೆ 2 ವರ್ಷ ಪೂರೈಸಿದ ಮುರ್ಮು; ಮಕ್ಕಳಿಗೆ 'ದೇಶದ ಪ್ರಥಮ ಪ್ರಜೆ'ಯ ಪಾಠ - President Droupadi Murmu
Published : Jul 25, 2024, 2:25 PM IST
ನವದೆಹಲಿ: ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಿ ಇಂದಿಗೆ ಎರಡು ವರ್ಷ ಪೂರೈಸಿದ್ದಾರೆ. 'ದೇಶದ ಪ್ರಥಮ ಪ್ರಜೆ'ಯಾದ ಮುರ್ಮು, ಮಕ್ಕಳಿಗೆ ಪಾಠ ಮಾಡುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಿದರು.
ಇಂದು ಬೆಳಗ್ಗೆ ರಾಷ್ಟ್ರಪತಿ ಎಸ್ಟೇಟ್ನಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿರುವ ಅವರು, ವಿದ್ಯಾರ್ಥಿಗಳಲ್ಲಿ ಅಚ್ಚರಿ ಮೂಡಿಸಿದರು. ಅಷ್ಟೇ ಅಲ್ಲ, ಶಾಲಾ ಶಿಕ್ಷಕಿಯಾಗಿಯೂ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.
ಮೊದಲು ವಿದ್ಯಾರ್ಥಿಗಳ ಹೆಸರು ಕೇಳಿದ ಮುರ್ಮು, ಅವರ ಆಸಕ್ತಿಗಳು ಮತ್ತು ಗುರಿಗಳನ್ನು ತಿಳಿದುಕೊಂಡರು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾವಂತರಾಗಿದ್ದು, ಅವರಿಗೆ ತಂತ್ರಜ್ಞಾನದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. ನಂತರ 'ಗ್ಲೋಬಲ್ ವಾರ್ಮಿಂಗ್' ಬಗ್ಗೆ ಪಾಠ ಮಾಡಿ, ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆಯ ಮಹತ್ವ ವಿವರಿಸಿದರು. ಪರಿಸರ ಬದಲಾವಣೆಯಿಂದ ನಮ್ಮ ಮೇಲೆ ಆಗುತ್ತಿರುವ ಪ್ರಭಾವವನ್ನು ತಪ್ಪಿಸಲು ಸಾಧ್ಯವಾದಷ್ಟು ಹೆಚ್ಚು ಸಸಿಗಳನ್ನು ನೆಡುವಂತೆ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪ್ರೋತ್ಸಾಹಿಸಿದರು.
2022ರ ಜುಲೈ 25ರಂದು ಮುರ್ಮು ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ದೇಶದ ಅತ್ಯುನ್ನತ ಹುದ್ದೆಗೇರಿದ ಮೊದಲ ಆದಿವಾಸಿ ಮಹಿಳೆ ಹಾಗೂ ಅತ್ಯಂತ ಕಿರಿಯ ವಯಸ್ಸಿನವರು ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಸಿಂಗಾಪುರ ಪಾಸ್ಪೋರ್ಟ್ ವಿಶ್ವದ ನಂ.1; ಭಾರತದ ಸ್ಥಾನವೆಷ್ಟು ಗೊತ್ತೇ? ಪಾಕ್ ಅತ್ಯಂತ ದುರ್ಬಲ!