ಬೆಂಗಳೂರು: ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವ್ಯಕ್ತಿಯ ಮೇಲೆ ರೌಡಿಶೀಟರ್ ಒಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಭಾನುವಾರ ಸಂಜೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಶ್ರೀನಿವಾಸಪುರ ಬಳಿ ನಡೆದಿದೆ. ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಪವನ್ ಅಲಿಯಾಸ್ ಕಡಬು (28) ಎಂಬಾತನೇ ಹಲ್ಲೆ ನಡೆಸಿರುವ ಆರೋಪಿಯಾಗಿದ್ದಾನೆ.
ವಿಶ್ವಾಸ್ ಎಂಬಾತನೆ ಹಲ್ಲೆಗೊಳಗಾದ ವ್ಯಕ್ತಿ. ವಿಶ್ವಾಸ್ ಹಾಗೂ ಆತನ ಸ್ನೇಹಿತನೊಬ್ಬ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಕುಪಿತಗೊಂಡು ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವಿಶ್ವಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.
ಒಂದು ತಿಂಗಳ ಹಿಂದಿನ ವಿಡಿಯೋ ವೈರಲ್: ಅಲ್ಲದೇ, ಹಲ್ಲೆ ಘಟನೆ ನಡೆದ ಕೆಲ ಗಂಟೆಗಳಲ್ಲೇ ರೌಡಿಶೀಟರ್ ಪವನ್ ಮತ್ತೋರ್ವ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಒಂದು ತಿಂಗಳ ಹಿಂದಿನ ವಿಡಿಯೋ ಇದಾಗಿದ್ದು, ಅರ್ಜುನ್ ಎಂಬಾತನ ಮೇಲೆ ಪವನ್ ಹಲ್ಲೆ ನಡೆಸಿದ್ದಾಗಿದೆ. ಅರ್ಜುನ್ನನ್ನು ಬೆತ್ತಲೆಗೊಳಿಸಿ, ಹೊಡೆದು ಓಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪವನ್ ಹಾಗೂ ಆತನ ಸ್ನೇಹಿತರ ನಡುವೆಯೇ ಸಮಸ್ಯೆ ಉಂಟಾಗಿ, ಹಳೆಯ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಈ ಬಗ್ಗೆ ರೌಡಿಶೀಟರ್ ಪವನ್ಗಾಗಿ ಹುಡುಕಾಟ ನಡೆಯುತ್ತಿದೆ. ಹಾಗೂ ವಿಡಿಯೋದಲ್ಲಿ ಹಲ್ಲೆಗೊಳಗಾಗಿರುವ ಅರ್ಜುನ್ ಕೂಡ ನಾಪತ್ತೆಯಾಗಿದ್ದಾನೆ. ಒಂದು ತಿಂಗಳ ಹಿಂದೆ ಘಟನೆ ನಡೆದರೂ, ಆತ ಕೂಡ ಯಾವುದೇ ದೂರು ನೀಡಿಲ್ಲ. ಇಬ್ಬರೂ ಕೂಡ ಬ್ಯಾಡ್ ಕ್ಯಾರೆಕ್ಟರ್ಸ್ ಎಂಬುದು ಗೊತ್ತಾಗಿದೆ. ಇಬ್ಬರನ್ನೂ ಶೀಘ್ರದಲ್ಲೇ ಬಂಧಿಸಿ ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.