ನವದೆಹಲಿ: 76ನೇ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನದಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿಯ ಸ್ತಬ್ಧಚಿತ್ರ ಗಮನ ಸೆಳೆಯಿತು. ಗದಗ ಜಿಲ್ಲೆಯ ಐತಿಹಾಸಿಕ ನಗರ ಲಕ್ಕುಂಡಿಯ ಸೊಗಸಾದ ಹಾಗೂ ಕಲಾತ್ಮಕ ದೇವಾಲಯಗಳ ಪ್ರತಿಕೃತಿಯನ್ನು ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾಯಿತು.
ಹುಬ್ಬಳ್ಳಿಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಲಕ್ಕುಂಡಿಯನ್ನು ಅದರ ಅದ್ಭುತವಾದ ಕಲ್ಲಿನ ವಾಸ್ತುಶಿಲ್ಪಕ್ಕಾಗಿ "ಕಲ್ಲಿನ ಕರಕುಶಲ ವಸ್ತುಗಳ ತೊಟ್ಟಿಲು" ಎಂದು ಕರೆಯಲಾಗುತ್ತದೆ. ಕರ್ತವ್ಯ ಪಥದೊಳಗೆ ಪ್ರವೇಶಿಸಿದ ಟ್ಯಾಬ್ಲೋದ ಮುಂಭಾಗದಲ್ಲಿ ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ರಚಿಸಲಾಗಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು, ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ.
ಇದರ ಹಿಂದೆ ಬ್ರಹ್ಮ ಜಿನಾಲಯ ದೇವಾಲಯದ ತೆರೆದ ಕಂಬದ ಮಂಟಪವಿದೆ. ಟ್ಯಾಬ್ಲೋದ ಮುಖ್ಯಭಾಗದಲ್ಲಿ ಶಿವ ದೇವಾಲಯಗಳಾದ ಕಾಶಿ ವಿಶ್ವನಾಥ ದೇವಾಲಯ ಹಾಗೂ ನನ್ನೇಶ್ವರ ದೇವಾಲಯಗಳ ಪ್ರತಿಕೃತಿಗಳನ್ನು ಪ್ರದರ್ಶಿಸಲಾಯಿತು.
ಉಳಿದಂತೆ ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಭಾಗವಹಿಸಿದವು. ಅದರಲ್ಲಿ ದೆಹಲಿ ಸರ್ಕಾರದ ಸ್ತಬ್ಧಚಿತ್ರದಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ಮತ್ತು ತಂತ್ರಜ್ಞಾನದ ಕೇಂದ್ರವಾಗಿ ರಾಷ್ಟ್ರ ರಾಜಧಾನಿಯ ಮಹತ್ವವನ್ನು ಪ್ರದರ್ಶಿಸಲಾಯಿತು. ಉನ್ನತ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳು ಡಿಜಿಟಲೀಕರಣದ ಪ್ರಯೋಜನಗಳು ಮತ್ತು ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟಿಕ್ ತಂತ್ರಜ್ಞಾನದ ಬಳಕೆಯ ಬಗ್ಗೆ ಪ್ರದರ್ಶಿಸಲಾಯಿತು.
ಉತ್ತರ ಪ್ರದೇಶದ ಟ್ಯಾಬ್ಲೋದಲ್ಲಿ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ, ವಿರಾಸತ್, ವಿಕಾಸ, ಸಂಗಮದ ರೂಪಕಗಳನ್ನು ಪ್ರದರ್ಶಿಸಲಾಯಿತು. ಸಮುದ್ರ ಮಂಥನ, ಅಮೃತ ಕಲಶ, ಸಂಗಮ ದಡದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ಜನರ ಪ್ರತಿಕೃತಿಗಳನ್ನು ಕರ್ತವ್ಯ ಪಥದಲ್ಲಿ ನೆರೆದಿದ್ದ ಜನ ಹರ್ಷೋದ್ಘಾರ ಮಾಡಿದರು.
Karnataka’s tableau showcased during the 76th #RepublicDay Parade on Kartavya Path, in Delhi The tableau celebrates the historic town of Lakkundi, located in the Gadag district, often referred to as the " cradle of stone craft."#RepublicDayParade #76thRepublicDay… pic.twitter.com/XGhqYtFnix
— DD News (@DDNewslive) January 26, 2025
ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡದ ಸ್ತಬ್ಧಚಿತ್ರ, ಹಳೆಯ ಪರಂಪರೆ ಮತ್ತು ಆಧುನಿಕ ವಾಸ್ತುಶಿಲ್ಪದ ಮಿಶ್ರಣವಿರುವ ನಗರವನ್ನು ಪ್ರತಿಬಿಂಬಿಸಿತು. ಈ ಮೂಲಕ ಆಧುನಿಕ ಮತ್ತು ಪ್ರಗತಿಪರ ನಗರವಾಗಿ ಎಲ್ಲರಿಗೂ ಗೌರವಾನ್ವಿತ ಜೀವನ ನೀಡುವ ಬ್ಯೂಟಿಫುಲ್ ಸಿಟಿಗೆ ಗೌರವ ಸಲ್ಲಿಸಿತು. ಚಂಡೀಗಢ ತನ್ನ ಹಸಿರು, ವಾಸ್ತುಶಿಲ್ಪ ಮತ್ತು ಯುವ ಕೇಂದ್ರಿತ ಜೀವನಶೈಲಿಯಿಂದಾಗಿ ಸಿನಿಮಾಗಳ ಚಿತ್ರೀಕರಣಗಳಿಗೆ ಹೇಗೆ ಆದ್ಯತೆಯ ತಾಣವಾಗುತ್ತಿದೆ ಎಂಬುದನ್ನು, ಸ್ತಬ್ಧಚಿತ್ರದಲ್ಲಿ ಅಳವಡಿಸಲಾಗಿದ್ದ ಜಪಾನೀಸ್ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬ ಕಲಾಕೃತಿ ವಿಡಿಯೋಗ್ರಫಿ ಮಾಡುತ್ತಿರುವ ಮೂಲಕ ಪ್ರದರ್ಶಿಸಿತು.
ಪಶ್ಚಿಮ ಬಂಗಾಳದ ಸ್ತಬ್ಧಚಿತ್ರದಲ್ಲಿ ಸರ್ಕಾರದ ಲಕ್ಷ್ಮೀ ಭಂಡಾರ್ ಯೋಜನೆ ಹಾಗೂ ಜಾನಪದ ಕಲಾವಿದರನ್ನು ಉತ್ತೇಜಿಸುವ 'ಲೋಕ ಪ್ರಸಾರ ಪ್ರಕಲ್ಪ' ಉಪಕ್ರಮದ ಬಗ್ಗೆ ಹೈಲೈಟ್ ಮಾಡಲಾಗಿತ್ತು. ಜಾರ್ಖಂಡ್ ಟ್ಯಾಬ್ಲೋ "ಸ್ವರ್ಣಿಮ್ ಜಾರ್ಖಂಡ್: ಎ ಲೆಗಸಿ ಆಫ್ ಹೆರಿಟೇಜ್ ಆ್ಯಂಡ್ ಪ್ರೋಗ್ರೆಸ್" ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯದ ಪರಂಪರೆ ಮತ್ತು ಪ್ರಗತಿಯನ್ನು ಎತ್ತಿ ತೋರಿಸಿದೆ. ತ್ರಿಪುರಾದ ಟ್ಯಾಬ್ಲೋದಲ್ಲಿ 14 ದೇವತೆಗಳಿಗೆ ಗೌರವ ಸಲ್ಲಿಸುವ ವಿಶಿಷ್ಟ ಸಂಪ್ರದಾಯವನ್ನು ಪ್ರದರ್ಶಿಸಲಾಯಿತು.
ಪಂಜಾಬ್ ರಾಜ್ಯದ ಸ್ತಬ್ಧಚಿತ್ರ ರಾಜ್ಯ ಕರಕುಶಲ ಮತ್ತು ಶ್ರೀಮಂತ ಸಂಗೀತ ಪರಂಪರೆಯ ಕೆತ್ತನೆ ವಿನ್ಯಾಸಗಳು ಹಾಗೂ ಸೂಫಿ ಸಂತ ಬಾಬಾ ಶೇಖ್ ಫರಿದ್ಜಿ ಅವರ ಪ್ರತಿಕೃತಿಯ ಮೂಲಕ ಗಮನ ಸೆಳೆಯಿತು.
400 ವರ್ಷಗಳ ಹಿಂದಿನ ಕರಕುಶಲತೆಯ ಸಂಪ್ರದಾಯವನ್ನು ಹೊಂದಿರುವ ಪರಿಸರಸ್ನೇಹಿ ಮರದ ಆಟಿಕೆಗಳನ್ನು ಹೊತ್ತು ಬಂದ ಆಂಧ್ರಪ್ರದೇಶದ ಸ್ತಬ್ಧಚಿತ್ರ ಗಣ್ಯರ ಹಾಗೂ ಅಲ್ಲಿದ್ದವರ ಪ್ರಶಂಸೆಗೆ ಪಾತ್ರವಾಯಿತು. ಉಳಿದಂತೆ ಕುರುಕ್ಷೇತ್ರ ಪೌರಾಣಿಕ ಯುದ್ಧ, ಭಗವದ್ಗೀತೆ ಸಂದೇಶಗಳ ಪ್ರತಿಕೃತಿಯನ್ನು ಹೊತ್ತ ಹರಿಯಾಣದ ಸ್ತಬ್ಧಚಿತ್ರ, ಕಾವಿ ಕಲೆ, ದಿವಿಜ ಉತ್ಸವವನ್ನು ಪ್ರದರ್ಶಿಸಿದ ಗೋವಾದ ಸ್ತಬ್ಧಚಿತ್ರ ಜನರ ಗಮನ ಸೆಳೆದವು.
ಗುಜರಾತ್ ಟ್ಯಾಬ್ಲೋ, ದೇಶದೆಲ್ಲೆಡೆಯಿಂದ ರೈತರು ನೀಡಿದಂತಹ ಕಬ್ಬಿಣದಿಂದ ನಿರ್ಮಿಸಿದ ಸರ್ದಾರ್ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ 182 ಮೀಟರ್ ಎತ್ತರದ ಸ್ಟ್ಯಾಚ್ಯೂ ಆಫ್ ಯುನಿಟಿಯ ಪ್ರತಿಕೃತಿ ನಿರ್ಮಿಸಿ, ಗೌರವ ಸಲ್ಲಿಸಿತು.
ಇದನ್ನೂ ಓದಿ: ಗಣರಾಜ್ಯೋತ್ಸವ 2025: ದೆಹಲಿಯ ಕರ್ತವ್ಯ ಪಥದಲ್ಲಿ ಮಿಲಿಟರಿ ಶಕ್ತಿ, ಸಾಂಸ್ಕೃತಿಕ ಶ್ರೀಮಂತಿಕೆ ಪ್ರದರ್ಶನ