ಬೆಂಗಳೂರು: ರಾಜ್ಯವನ್ನು ಅಂತಾರಾಷ್ಟ್ರೀಯ ವಿಹಾರ ನೌಕೆ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಕರ್ನಾಟಕ ಜಲಸಾರಿಗೆ ಮಂಡಳಿ ಕರಾವಳಿ ಭಾಗದ ಮಂಗಳೂರಲ್ಲಿ ದೇಶದಲ್ಲೇ ಮೊದಲ ಅಂತಾರಾಷ್ಟ್ರೀಯ ವಿಹಾರ ನೌಕಾಯಾನ (CRUISE) ಬಂದರು ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯದ ಕರಾವಳಿ ಭಾಗ ಬಂದರು ಪ್ರವಾಸೋದ್ಯಮದ ಹಾಟ್ ಸ್ಪಾಟ್ ಆಗಲಿದೆ. ವಿದೇಶಗಳಲ್ಲಿ ಇರುವಂತೆ ರಾಜ್ಯದ ಕರಾವಳಿ ಭಾಗವೂ ಐಷಾರಾಮಿ ವಿಹಾರ ನೌಕಾಯಾನದ ಕೇಂದ್ರ ಬಿಂದುವಾಗಲಿದೆ. ಈ ಸಂಬಂಧ ಕರ್ನಾಟಕ ಜಲಸಾರಿಗೆ ಮಂಡಳಿ ಪಿಪಿಪಿ ಮಾದರಿಯಡಿ ಹಲವು ಹೊಸ ಯೋಜನೆಗಳನ್ನು ರೂಪಿಸಿದ್ದು, ಅದರ ಅನುಷ್ಠಾನದ ಪ್ರಕ್ರಿಯೆಯಲ್ಲಿ ತೊಡಗಿದೆ.
ಅಂತಾರಾಷ್ಟ್ರೀಯ CRUISE ನಿರ್ಮಾಣಕ್ಕೆ ಸಿದ್ಧತೆ: ಇನ್ನು ಮುಂದೆ ಮಂಗಳೂರು, ಅಂತಾರಾಷ್ಟ್ರೀಯ ಕ್ರೂಸ್ ನೌಕೆಗಳಿಗೆ ಕೇಂದ್ರ ತಾಣವಾಗಲಿದೆ. ನಗರವನ್ನು ಅಂತಾರಾಷ್ಟ್ರೀಯ ವಿಹಾರನೌಕೆಯ ಕೇಂದ್ರ ಬಿಂದುವಾಗಿ ಮಾಡಲು ನಿಟ್ಟಿನಲ್ಲಿ ರಾಜ್ಯ ಜಲಸಾರಿಗೆ ಮಂಡಳಿ ಇಲ್ಲಿನ ಸೋಮೇಶ್ವರದಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಬಂದರು ಮಾಡಲು ತಯಾರಿ ನಡೆಸಿದೆ. ಸುಮಾರು 2,500- 3000 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಲ್ಲೇ ಪ್ರಪಥಮ ಬಾರಿಗೆ ಅಂತಾರಾಷ್ಟ್ರೀಯ ಕ್ರೂಸ್ ಬಂದರು ನಿರ್ಮಾಣ ಮಾಡಲಿದೆ.
ಗೋವಾ ಸೇರಿದಂತೆ ದೇಶದಲ್ಲಿ ಸಣ್ಣ ಸಣ್ಣ ಕ್ರೂಸ್ ಬಂದರುಗಳು ಇವೆ. ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ವಿಹಾರ ನೌಕೆಗಳನ್ನು ನಿಲ್ಲಿಸುವ ವಿಶೇಷ ಬಂದರು ಇಲ್ಲ. ಅದಕ್ಕಾಗಿಯೇ ಈಗ ಮಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರು ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಭಾರತದಲ್ಲಿ ವಿದೇಶಿ ವಿಹಾರ ನೌಕೆಗಳು ಹೆಚ್ಚಾಗಿ ಲಕ್ಷದ್ವೀಪ, ಅಂಡಮಾನ್ ನಿಕೋಬಾರ್, ಕೇರಳ, ಗೋವಾ, ಮುಂಬೈ ಕರಾವಳಿಗೆ ಹೆಚ್ಚಾಗಿ ಆಗಮಿಸುತ್ತಿವೆ. ಈ ವಿಲಾಸಿ ಕ್ರೂಸ್ ನೌಕೆಗಳ ಲಂಗರು ಹಾಕಲು ದೇಶದಲ್ಲಿ ಪ್ರತ್ಯೇಕ ಸುಸಜ್ಜಿತ ಕ್ರೂಸ್ ಬಂದರು ಇಲ್ಲ. ಹಾಗಾಗಿ ಅತಿ ಹೆಚ್ಚು ಕ್ರೂಸ್ ಪ್ರವಾಸೋದ್ಯಮಕ್ಕೆ ಬೇಡಿಕೆ ಇರುವ ಮಂಗಳೂರಲ್ಲಿ ಕ್ರೂಸ್ ಬಂದರು ಮಾಡಲು ಸಿದ್ಧತೆ ನಡೆಸಲಾಗಿದೆ.
ಅಂತಾರಾಷ್ಟ್ರೀಯ CRUISE ವಿಶೇಷತೆಗಳೇನು?: ಇಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರು ದೇಶದಲ್ಲೇ ಮೊದಲ ಸುಸಜ್ಜಿತ ಬೃಹತ್ ಕ್ರೂಸ್ ಬಂದರು ಆಗಿರಲಿದೆ. ಈ ಬಂದರಿನಲ್ಲಿ ಒಟ್ಟು ಏಳು ಬರ್ತ್ಗಳನ್ನು ಮಾಡಲು ಉದ್ದೇಶಿಸಲಾಗಿದೆ. ಕೆಳಗಿನ ಮೂರು ಬರ್ತ್ಗಳು ಕ್ರೂಸ್ ಬರ್ತ್ಗಳಾಗಿರಲಿವೆ. ಮೇಲಿನ ನಾಲ್ಕು ಬರ್ತ್ಗಳಲ್ಲಿ ಕ್ಲೀನ್ ಕಾರ್ಗೋ ಬರ್ತ್ ನಿರ್ಮಿಸಲಾಗುತ್ತದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಲ್ಲಿ ವಿವಿಧ ಪ್ರಯಾಣಿಕರ ಸೌಕರ್ಯಗಳಾದ ಲಾಂಜ್ಗಳು, ಕಸ್ಟಮ್ ಹಾಗೂ ವಲಸೆ ಸೇವೆಗಳು, ಸರಕು ನಿರ್ವಹಣೆ, ಸಾರಿಗೆ ಆಯ್ಕೆಗಳು, ಮನರಂಜನೆಗಳನ್ನು ಸೇರ್ಪಡೆಗೊಳಿಸಲು ಚಿಂತಿಸಲಾಗಿದೆ.
ಪ್ರವಾಸೋದ್ಯಮ ಆಕರ್ಷಣೆಯ ನಿರೀಕ್ಷೆ: ಮಂಗಳೂರನ್ನು ರಾಜ್ಯದ ಪ್ರಮುಖ ಕ್ರೂಸ್ ಪ್ರವಾಸೋದ್ಯಮ ಕೇಂದ್ರ ಸ್ಥಾನವನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಸಾಗರ ಮಾಲ ಯೋಜನೆಯಡಿ ಸಹಕಾರ ನೀಡಲು ಮುಂದಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೇರಳ ಹಾಗೂ ತಮಿಳುನಾಡು ಭಾಗದ ಜನರು ಕ್ರೂಸ್ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಜೊತೆಗೆ ಮಂಗಳೂರಿಗೆ ಹೆಚ್ಚಿನ ಪ್ರಮಾಣದ ವಿದೇಶಿ ಕ್ರೂಸ್ ನೌಕೆಗಳು ಆಗಮಿಸುತ್ತವೆ.
ಮಂಗಳೂರು ಅಂತಾರಾಷ್ಟ್ರೀಯ ಕ್ರೂಸ್ ಬಂದರಿನಿಂದ ಅಂಡಮಾನ್ ನಿಕೋಬಾರ್, ಲಕ್ಷದ್ವೀಪ, ಮಾರಿಷಸ್, ಶ್ರೀಲಂಕಾ, ಗಲ್ಫ್ ದೇಶಗಳಿಗೆ, ಆಫ್ರಿಕಾ ದೇಶಗಳಿಗೆ ಸಂಪರ್ಕಿಸಬಹುದಾಗಿದೆ. ಆ ಮೂಲಕ ಕರಾವಳಿ ಭಾಗವನ್ನು ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ಮಾಡಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಿಮ ಹಂತದಲ್ಲಿ ಕಾರ್ಯಸಾಧು ವರದಿ: ಮದ್ರಾಸ್ ಐಐಟಿಯಲ್ಲಿ ಈ ಯೋಜನೆ ಸಂಬಂಧ ತಾಂತ್ರಿಕ ಕಾರ್ಯಸಾಧು ವರದಿ ಸಿದ್ಧಪಡಿಸಲಾಗುತ್ತಿದೆ. ವರದಿ ತಯಾರಿ ಅಂತಿಮ ಹಂತದಲ್ಲಿದೆ. ಇನ್ನು ಒಂದು ತಿಂಗಳೊಳಗೆ ತಾಂತ್ರಿಕ ಕಾರ್ಯಸಾಧು ವರದಿ ಸಲ್ಲಿಕೆಯಾಗಲಿದೆ. ನಂತರ ಮೂರು ನಾಲ್ಕು ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆಗಳು ಪೂರ್ಣವಾಗಲಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
"ಈ ಯೋಜನೆಗೆ ಸುಮಾರು 2,500- 3000 ಕೋಟಿ ರೂ. ಅಂದಾಜಿಸಲಾಗಿದೆ. ತಿಂಗಳಲ್ಲಿ ಕಾರ್ಯಸಾಧು ವರದಿ ಕೂಡ ಸಿದ್ಧವಾಗಲಿದೆ. ಪಿಪಿಪಿ ಅನುಮೋದನೆ ಪ್ರಕ್ರಿಯೆಯೂ ನಡೆಯುತ್ತಿದೆ. ಎರಡು ತಿಂಗಳೊಳಗೆ ಪಿಪಿಪಿಗೂ ಅನುಮೋದನೆ ಸಿಗಲಿದೆ. ಕೊನೆಯದಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಅನುಮೋದನೆಗೆ ಕಳುಹಿಸಲಾಗುತ್ತದೆ. ಎರಡು ಮೂರು ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಗಿಯಲಿದೆ. ಬಳಿಕ ನಾವು ಜಾಗತಿಕ ಟೆಂಡರ್ಗೆ ಹೋಗಲಿದ್ದೇವೆ. ಯುರೋಪಿಯನ್ ನ ಅನುಭವಿ ಸಂಸ್ಥೆ ಬರಲಿ ಎಂಬುದು ನಮ್ಮ ನಿರೀಕ್ಷೆ ಇದೆ" ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಸಿಇಒ ಜಯರಾಮ್ ರಾಯಪುರ ತಿಳಿಸಿದ್ದಾರೆ.
ಇದನ್ನೂ ಓದಿ: ಪರಿಸರ ಸ್ನೇಹಿ ನಗರಕ್ಕಾಗಿ 2,843 ಕೋಟಿ ರೂ. ನೆರವಿಗೆ ವಿಶ್ವಬ್ಯಾಂಕ್ಗೆ ಪ್ರಸ್ತಾವನೆ ಸಲ್ಲಿಸಿದ ಮೈಸೂರು ಮಹಾನಗರ ಪಾಲಿಕೆ