ಬೆಂಗಳೂರು: ನಿರಂತರವಾಗಿ ಸಂಚಾರ ನಿಯಮ ಉಲ್ಲಂಘಿಸಿ, ನೋಟಿಸ್ಗೂ ಕ್ಯಾರೆ ಎನ್ನದೆ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರನಿಂದ ಕೊನೆಗೂ ಸಂಚಾರ ಪೊಲೀಸರು ₹1.61 ಲಕ್ಷ ರೂ. ದಂಡ ಕಟ್ಟಿಸಿಕೊಂಡಿದ್ದಾರೆ.
ಹೆಲ್ಮೆೆಟ್ ಧರಿಸದಿರುವುದು, ಸಿಗ್ನಲ್ ಜಂಪ್, ಏಕಮುಖ ಚಾಲನೆ, ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ 311 ಕೇಸ್ಗಳು ದಾಖಲಾಗಿದ್ದವು. ಹೀಗಾಗಿ, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಿನ್ನೆ ಸಂಚಾರ ಪೊಲೀಸರು ಆತನನ್ನು ಪತ್ತೆ ಹಚ್ಚಿ ವಾಹನ ಜಪ್ತಿ ಮಾಡಿದ್ದರು. ಇಂದು ಆತನಿಂದ 1.61 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ಕೆಎ-05, ಜೆಎಕ್ಸ್-1344 ನೋಂದಣಿ ಸಂಖ್ಯೆೆಯ ದ್ವಿಚಕ್ರ ವಾಹನ ಸವಾರ ಪೊಲೀಸರ ದಂಡಾಸ್ತ್ರಕ್ಕೂ ಜಗ್ಗದೆ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ. ಹೀಗಾಗಿ ಆತನಿಗೆ 1.61 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕಳೆದ ವರ್ಷ 1,05,500 ರೂ.ಇದ್ದ ದಂಡದ ಮೊತ್ತ ಈ ವರ್ಷ 1,61,500 ರೂ.ಗೆ ಏರಿಕೆಯಾಗಿದೆ. ಈ ಬಗ್ಗೆೆ ಆತನಿಗೆ ಹಲವು ಬಾರಿ ನೋಟಿಸ್ ಕೂಡ ನೀಡಲಾಗಿತ್ತು. ಆದರೂ ಸಂಚಾರ ನಿಯಮ ಉಲ್ಲಂಘಿಸಿದ್ದ.
ಇದನ್ನೂ ಓದಿ: ತೆರಿಗೆ ಪಾವತಿಸದೆ ಸಂಚಾರ: 30 ದುಬಾರಿ ಕಾರುಗಳು ವಶಕ್ಕೆ; ಫೆರಾರಿ ಮಾಲೀಕನಿಗೆ ₹1.45 ಕೋಟಿ ದಂಡ - LUXURY CARS SEIZED