ಗಂಗಾವತಿ: ಹಿರೇಜಂತಕಲ್‌ನ ಐತಿಹಾಸಿಕ ಪಂಪಾ ವಿರೂಪಾಕ್ಷೇಶ್ವರನಿಗೆ ರಥಸಪ್ತಮಿ ಜಾತ್ರೆಯ ಅಂಗವಾಗಿ ಇಂದು ಸಂಜೆ ಗೋಧೂಳಿ ಸಮಯದಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.
ದೇಗುಲದ ಆವರಣದಲ್ಲಿ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಕಾಯಿ ಒಡೆದು ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಟ್ಟರು. ಸ್ಥಳೀಯ ಪ್ರಮುಖರು ರಥೋತ್ಸವಕ್ಕೆ ಚಾಲನೆ ನೀಡಿದರು. ದೇಗುಲದ ಆವರಣದಿಂದ ಹೊರಟ ರಥ, ಆಂಜನೇಯನ ಪಾದಗಟ್ಟೆ ತಲುಪಿ ವಾಪಸ್ ದೇಗುಲಕ್ಕೆ ಆಗಮಿಸಿತು. ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ, ಹರ್ಷೋದ್ಘಾರದ ಮಧ್ಯೆ ರಥೋತ್ಸವ ನೆರವೇರಿತು. ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು, ಹೂವು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಗಂಗಾವತಿ ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಚಿಕ್ಕಜಂತಕಲ್, ಸಂಗಾಪುರ, ಮಲ್ಲಾಪುರ, ಆನೆಗೊಂದಿ, ವಿನೋಭ ನಗರ, ಮರಳಿ, ಅಯೋಧ್ಯೆ, ಜಂಗಮರ ಕಲ್ಗುಡಿ, ಬಸವಪಟ್ಟಣ, ದಾಸನಾಳ, ವೆಂಕಟಗಿರಿ, ಬಸವನದುರ್ಗ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಮುಖ್ಯವಾಗಿ, ರೈತಾಪಿ ಜನ ತಮ್ಮ ಕುಟುಂಬ ಸದಸ್ಯರನ್ನು ಎತ್ತಿನ ಚಕ್ಕಡಿ (ಬಂಡಿ), ಟ್ರ್ಯಾಕ್ಟರ್, ಆಟೋ, ಟಾಟಾ ಏಸ್ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಕರೆತಂದು ಜಾತ್ರೆಯ ಸೊಬಗು ಸವಿದರು. ಒಂದು ವಾರಕ್ಕೂ ಹೆಚ್ಚು ಕಾಲ ಜಾತ್ರೆ ನಡೆಯಲಿದೆ.
ಜಾತ್ರೆಯಲ್ಲಿ ವಿವಿಧ ಸಿಹಿ ತಿಂಡಿಗಳ ಅಂಗಡಿಗಳನ್ನು ಹಾಕಲಾಗಿತ್ತು. ಮಕ್ಕಳ ಮನೋರಂಜನೆಗಾಗಿ ಹಲವು ಆಟೋಟಗಳ ಕ್ರೀಡಾ ಸಲಕರಣಗಳನ್ನು ಅಳವಡಿಸಲಾಗಿತ್ತು.
ನಗರೀಕರಣದ ಪ್ರಭಾವಕ್ಕೆ ಒಳಗಾದರೂ ಕೂಡ ಹಿರೇಜಂತಕ್ ಇಂದಿಗೂ ಗ್ರಾಮೀಣ ಸೊಗಡನ್ನು ಉಳಿಸಿಕೊಂಡು ಬಂದಿದೆ. ಮುಖ್ಯವಾಗಿ, ಪಂಪಾ ವಿರೂಪಾಕ್ಷೇಶ್ವರನ ರಥೋತ್ಸವವನ್ನು ಜಂತಕಲ್ ಜಾತ್ರೆ ಎಂದೂ ಕರೆಯುವ ವಾಡಿಕೆ ಇದೆ.
ಇದನ್ನೂ ಓದಿ: ಹತ್ತೂರಿಗೂ ಮಾದರಿ ಶ್ರೀ ಕ್ಷೇತ್ರ ಸುತ್ತೂರು ಜಾತ್ರೆ: ಇತಿಹಾಸ ಏನು? - SUTTHURU JATHRA MAHOTSAV