ಬೆಂಗಳೂರು: ತೆರಿಗೆ ಪಾವತಿಸದೆ ಓಡಾಡುತ್ತಿದ್ದ ದುಬಾರಿ ಕಾರುಗಳ ಮಾಲೀಕರಿಗೆ ಬಿಸಿ ಮುಟ್ಟಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು 30 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ, ವಿವಿಧ ಜಿಲ್ಲೆಗಳಲ್ಲಿ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಫೆರಾರಿ, ಪೋರ್ಶೆ, ಬಿಎಂಡಬ್ಲ್ಯೂ, ಬೆಂಜ್ ಹಾಗೂ ರೇಂಜ್ ರೋವರ್ ಕಾರು ಸೇರಿ ವಿವಿಧ ಕಂಪೆನಿಗಳ 30ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ದಂಡ ಹಾಕಿದ್ದಾರೆ.
ಸಾರಿಗೆ ಉಪ ಆಯುಕ್ತ ಸಿ.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಆರ್ಟಿಒ ಅಧಿಕಾರಿಗಳಾದ ಬಿ.ಶ್ರೀನಿವಾಸ್ ಪ್ರಸಾದ್, ದೀಪಕ್, ಶ್ರೀನಿವಾಸಪ್ಪ ಮತ್ತು ರಂಜಿತ್ ಸೇರಿದಂತೆ 41 ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ವಶಪಡಿಸಿಕೊಂಡಿರುವ ಕಾರುಗಳಿಂದ ಸುಮಾರು 3 ಕೋಟಿ ರೂ. ತೆರಿಗೆ ವಸೂಲಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆರಾರಿ ಕಾರಿನ ಮಾಲೀಕರಿಂದ 1.45 ಕೋಟಿ ರೂ ದಂಡ ವಸೂಲಿ: ಕಾರ್ಯಾಚರಣೆಯಲ್ಲಿ ತೆರಿಗೆ ಪಾವತಿಸದೆ ವಂಚಿಸಿದ್ದ ಪೆರಾರಿ ಮಾಲೀಕರಿಗೆ 1.45 ಕೋಟಿ ದಂಡ ವಿಧಿಸಲಾಗಿದೆ. ದುಬಾರಿ ಮೌಲ್ಯದ ಕಾರು ಮಹಾರಾಷ್ಟ್ರದಲ್ಲಿ 2023ರಲ್ಲಿ ನೋಂದಣಿಯಾಗಿರುವುದು ಕಂಡುಬಂದಿದ್ದು, ಮಾಲೀಕರು ತೆರಿಗೆ ಕಟ್ಟದೆ ಅನಧಿಕೃತವಾಗಿ ರಾಜ್ಯದಲ್ಲಿ ಸಂಚಾರ ನಡೆಸುತ್ತಿರುವುದು ಆರ್ಟಿಒ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಎರಡು ವರ್ಷದಲ್ಲಿ 311 ಬಾರಿ ಸಂಚಾರ ನಿಯಮ ಉಲ್ಲಂಘನೆ: 1.61 ಲಕ್ಷ ರೂ ದಂಡ! - TRAFFIC RULE VIOLATION