ಕಾರವಾರ (ಉತ್ತರ ಕನ್ನಡ): ಗರ್ಭ ಧರಿಸಿದ್ದ ಗೋ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಪಂಚನಾಮೆಗೆ ಕರೆದುಕೊಂಡು ಹೋಗಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಕೊಂಡಾಕುಳಿಯಲ್ಲಿ ಗರ್ಭ ಧರಿಸಿದ್ದ ಗೋ ವಧೆ ಮಾಡಿದ ಆರೋಪದಡಿ ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹಮ್ಮದ್ ಜಿದ್ದಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ತಪ್ಪಿಸಿಕೊಂಡು ಪರಾರಿಯಾಗಿದ್ದ. ಈ ವೇಳೆ ಆರೋಪಿ ಕಾಲಿಗೆ ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಆರೋಪಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಜ.25 ರಂದು ಹೊನ್ನಾವರ ಪೊಲೀಸರು ಹೊನ್ನಾವರ ತಾಲೂಕಿನ ದುಗ್ಗುರು ರಸ್ತೆ ಹತ್ತಿರ ಆರೋಪಿತ ಫೈಜಾನ್ನಿಂದ ಆಯುಧ ಜಪ್ತಿಗಾಗಿ ಪಂಚನಾಮೆ ಜರುಗಿಸಲು ಕರೆದುಕೊಂಡು ಹೋದ ಸಂದರ್ಭದಲ್ಲಿ ಪಿಐ ಸಿದ್ಧರಾಮೇಶ್ವರ ಮತ್ತು ಪಿಎಸ್ಐ ರಾಜಶೇಖರ ವಂದಲಿ ಸೇರಿದಂತೆ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಭ ಧರಿಸಿದ್ದ ಗೋ ವಧೆ ಪ್ರಕರಣ : ಓರ್ವ ಆರೋಪಿ ಬಂಧನ