ಬೆಂಗಳೂರು: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ, 7ನೇ ವೇತನ ಪರಿಷ್ಕರಣೆಯ ಹೊರೆಯೊಂದಿಗೆ ಆಡಳಿತ ನಡೆಸುತ್ತಿದೆ. ಆರ್ಥಿಕ ನಿರ್ವಹಣೆಗಾಗಿ ಬಹುವಾಗಿ ತೆರಿಗೆ ಸಂಗ್ರಹ ಹಾಗೂ ಸಾಲವನ್ನು ನೆಚ್ಚಿಕೊಂಡಿದೆ. ಆದರೆ, ಪ್ರಸಕ್ತ ವರ್ಷದಲ್ಲೂ ಬಜೆಟ್ ಗುರಿಯಂತೆ ರಾಜಸ್ವ ಸಂಗ್ರಹವಾಗದೇ ಇರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ರಾಜ್ಯ ಸರ್ಕಾರ ಕಳೆದ ಆರ್ಥಿಕ ವರ್ಷದಲ್ಲಿ ನಿರೀಕ್ಷಿತ ರಾಜಸ್ವ ಸಂಗ್ರಹದ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ವರ್ಷದಲ್ಲಿ ಬಜೆಟ್ನಲ್ಲಿ ನಿಗದಿಪಡಿಸಿದ ರಾಜಸ್ವ ಗುರಿಯನ್ನು ತಲುಪಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ಮೂರು ಬಾರಿ ಪ್ರಮುಖ ತೆರಿಗೆ ಸಂಗ್ರಹದ ಇಲಾಖೆ ಹಾಗೂ ಆರ್ಥಿಕ ಇಲಾಖೆ ಜೊತೆ ಪ್ರಗತಿ ಪರಿಶೀಲನೆ ಸಭೆ ನಡೆಸಿ, ರಾಜಸ್ವ ಸಂಗ್ರಹಕ್ಕೆ ಚುರುಕು ಮುಟ್ಟಿಸಲು ಯತ್ನಿಸಿದ್ದರು. ಆದರೆ, ಪ್ರಸಕ್ತ ಆರ್ಥಿಕ ವರ್ಷದ ನಾಲ್ಕು ತಿಂಗಳಲ್ಲಿ ಸರ್ಕಾರಕ್ಕೆ ಬಜೆಟ್ ಗುರಿಯಂತೆ ರಾಜಸ್ವ ಸಂಗ್ರಹ ಸಾಧ್ಯವಾಗಿಲ್ಲ.
ಈವರೆಗಿನ ಒಟ್ಟು ರಾಜಸ್ವ ಸಂಗ್ರಹ, ರಾಜಸ್ವ ವೆಚ್ಚ, ಕೊರತೆ: 2024-25 ಸಾಲಿನಲ್ಲಿ ರಾಜ್ಯ ಸರ್ಕಾರ ಒಟ್ಟು 2,63,427 ಕೋಟಿ ರೂ. ರಾಜಸ್ವ ಜಮೆಯ ಅಂದಾಜು ಮಾಡಿದೆ. ಆರ್ಥಿಕ ಇಲಾಖೆ ನೀಡಿದ ಅಂಕಿ -ಅಂಶದ ಪ್ರಕಾರ, ಜುಲೈ ಅಂತ್ಯದವರೆಗೆ ಒಟ್ಟು 79,529 ಕೋಟಿ ರಾಜಸ್ವ ಜಮೆಯಾಗಿದೆ. ಇತ್ತ ಪ್ರಸಕ್ತ ವರ್ಷದಲ್ಲಿ ಅಂದಾಜಿಸಲಾದ ಒಟ್ಟು ವೆಚ್ಚ 3,46,408 ಕೋಟಿ ರೂ. ಆಗಿದ್ದು, ಜುಲೈವರೆಗೆ ಆಗಿರುವ ಒಟ್ಟು ವೆಚ್ಚ 95,206 ಕೋಟಿ ರೂ.ಗಳಾಗಿದೆ.
ಸ್ವಂತ ತೆರಿಗೆ, ತೆರಿಗೆಯೇತರ ರಾಜಸ್ವ, ಕೇಂದ್ರದ ಸಹಾಯಾನುದಾನ, ಕೇಂದ್ರದ ತೆರಿಗೆ ಹಂಚಿಕೆ ರೂಪದಲ್ಲಿ ಒಟ್ಟು 79,521 ಕೋಟಿ ರೂ. ರಾಜಸ್ವ ಸ್ವೀಕೃತಿಯಾಗಿದೆ. ಜುಲೈವರೆಗೆ ಒಟ್ಟು 15,677 ಕೋಟಿ ರೂ. ವಿತ್ತೀಯ ಕೊರತೆ ಎದುರಾಗಿದೆ. ಅದೇ ರೀತಿ 7,666 ಕೋಟಿ ರೂ. ರಾಜಸ್ವ ಕೊರತೆ ಅನುಭವಿಸಿದೆ. ಒಟ್ಟು ಸ್ವಂತ ತೆರಿಗೆಯ ಬಜೆಟ್ ಗುರಿಯ ಪ್ರಕಾರ ನಾಲ್ಕು ತಿಂಗಳಲ್ಲಿ ಸುಮಾರು 7,039 ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹ ಕೊರತೆಯಾಗಿದೆ.
ವಾಣಿಜ್ಯ ತೆರಿಗೆ ಸಂಗ್ರಹ: 2024-25 ಸಾಲಿನಲ್ಲಿ ವಾಣಿಜ್ಯ ತೆರಿಗೆ ಮೂಲಕ 1,10,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಜುಲೈವರೆಗೆ 32,861 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈವರೆಗೆ ಸಂಗ್ರಹಿಸಿದ ವಾಣಿಜ್ಯ ತೆರಿಗೆಯಲ್ಲಿ 6.62% ಪ್ರಗತಿ ಕಂಡಿದೆ. ಪ್ರಸಕ್ತ ವರ್ಷದಲ್ಲಿ ಮಾಸಿಕ 9,166 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸುವ ಗುರಿ ಇದೆ. ಅದರಂತೆ ನಾಲ್ಕು ತಿಂಗಳಲ್ಲಿ 36,666 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಬೇಕು. ಅಂದರೆ ಬಜೆಟ್ ಗುರಿಗಿಂತ 3,805 ಕೋಟಿ ರೂ. ಕೊರತೆ ಆಗಿದೆ.
ಅಬಕಾರಿ ತೆರಿಗೆ ಸಂಗ್ರಹ: 2024-25 ಸಾಲಿನಲ್ಲಿ ಅಬಕಾರಿ ಸುಂಕದ ಮೂಲಕ 38,525 ಕೋಟಿ ರೂ. ತೆರಿಗೆ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿದೆ. ಜುಲೈವರೆಗೆ 11,871 ಕೋಟಿ ಅಬಕಾರಿ ತೆರಿಗೆ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಗೆ ಸಂಗ್ರಹಿಸಿದ ಅಬಕಾರಿ ಸುಂಕದಲ್ಲಿ 3.74% ಪ್ರಗತಿ ಕಂಡಿದೆ. ಬಜೆಟ್ ಅಂದಾಜಿನಂತೆ ಮಾಸಿಕ 3,210 ಕೋಟಿ ರೂ. ನಂತೆ ನಾಲ್ಕು ತಿಂಗಳಲ್ಲಿ 12,840 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹಿಸಬೇಕಾಗಿತ್ತು. ಅಂದರೆ 4 ತಿಂಗಳಲ್ಲಿ 969 ಕೋಟಿ ರೂ.ಗಳಷ್ಟು ನಿಗದಿತ ತೆರಿಗೆಗಿಂತ ಕೊರತೆಯಾಗಿದೆ.
ಮೋಟಾರು ವಾಹನ ತೆರಿಗೆ ಸಂಗ್ರಹ: 2024-25 ಸಾಲಿನಲ್ಲಿ ಮೋಟಾರು ವಾಹನ ತೆರಿಗೆ ರೂಪದಲ್ಲಿ 13,000 ಕೋಟಿ ರೂ. ಆದಾಯ ಸಂಗ್ರಹಿಸುವ ಬಜೆಟ್ ಗುರಿ ಹೊಂದಲಾಗಿದೆ. ಜುಲೈವರೆಗೆ 3,553 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ 7.35% ಪ್ರಗತಿ ಕಂಡಿದೆ. ಬಜೆಟ್ ಅಂದಾಜಿನ ಗುರಿಯಂತೆ ಮಾಸಿಕ 1,083 ಕೋಟಿ ರೂ.ಗಳಂತೆ ನಾಲ್ಕು ತಿಂಗಳಲ್ಲಿ 4,332 ಕೋಟಿ ರೂ. ಮೋಟಾರು ವಾಹನ ತೆರಿಗೆ ಸಂಗ್ರಹಿಸಬೇಕಾಗಿತ್ತು. ಆದರೆ, ನಾಲ್ಕು ತಿಂಗಳಲ್ಲಿ 3,553 ಕೋಟಿ ರೂ. ಸಂಗ್ರಹವಾಗಿದ್ದು, ಗುರಿಗಿಂತ 779 ಕೋಟಿ ರೂ.ಗಳಷ್ಟು ಸಂಗ್ರಹ ಕೊರತೆಯಾಗಿದೆ.
ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹ: 2024-25 ಸಾಲಿನಲ್ಲಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ರೂಪದಲ್ಲಿ 26,000 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಜುಲೈವರೆಗೆ 7,615 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ 40% ಪ್ರಗತಿ ಕಂಡಿದೆ. ಬಜೆಟ್ ಅಂದಾಜಿನ ಗುರಿಯಂತೆ ಮಾಸಿಕ 2,166 ಕೋಟಿ ರೂ.ಗಳಂತೆ ನಾಲ್ಕು ತಿಂಗಳಲ್ಲಿ 8,664 ಕೋಟಿ ರೂ. ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹಿಸಬೇಕಾಗಿತ್ತು. ಆದರೆ, ನಾಲ್ಕು ತಿಂಗಳಲ್ಲಿ 7,615 ಕೋಟಿ ರೂ. ಸಂಗ್ರಹವಾಗಿದ್ದು, ಗುರಿಗಿಂತ 1,049 ಕೋಟಿ ರೂ.ಗಳಷ್ಟು ಸಂಗ್ರಹ ಕೊರತೆ ಉಂಟಾಗಿದೆ.