ಹುಬ್ಬಳ್ಳಿ: ಗ್ರಾಮಕ್ಕೆ ಮೊದಲ ಬಾರಿಗೆ ಬಂದ ಸಾರಿಗೆ ಬಸ್‌ಗೆ ಗ್ರಾಮಸ್ಥರು ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದ ಸುದ್ದಿಯನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ ಮತ್ತು ಕೇಳಿರುತ್ತೀರಿ. ಆದರೆ, ಇಲ್ಲೊಂದು ಗ್ರಾಮದಲ್ಲಿ ತಮಗೆ ಒಂದೂವರೆ ದಶಕದಿಂದ ಸೇವೆ ಒದಗಿಸಿ ನಿವೃತ್ತಿಯಾಗುತ್ತಿರುವ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಾವನಾತ್ಮಕವಾಗಿ ವಿದಾಯ ಹೇಳಿದ್ದಾರೆ.
ಹೌದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅಲ್ಲಾಪೂರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಗೆ ಕಳೆದ 15 ರಿಂದ 16 ವರ್ಷಗಳಿಂದ ನಿರಂತರ ಸೇವೆ ಸಲ್ಲಿದೆ. ಇಂದು ತನ್ನ ಸೇವೆ ಮುಗಿಸಿ ನಿವೃತ್ತಿಯಾಗುತ್ತಿರುವ ಬಸ್‌ಗೆ ಅಲ್ಲಾಪೂರ, ಕಡಪಟ್ಟಿ ಹಾಗೂ ಹಳ್ಯಾಳ ಗ್ರಾಮಗಳ ಗ್ರಾಮಸ್ಥರು ತಳಿರು - ತೋರಣ ಕಟ್ಟಿ, ಹೂಗಳಿಂದ ಸಿಂಗಾರ ಮಾಡಿ, ಚಾಲಕ - ನಿರ್ವಾಹಕರಿಗೆ ಸನ್ಮಾನಿಸಿ ಬಳಿಕ ಕೇಸರಿ ಬಾತ್ - ಪಲಾವ್ ಊಟ ಹಾಕಿಸಿ ಬೀಳ್ಕೊಟ್ಟಿದ್ದಾರೆ.
2008ರಲ್ಲಿ ಸೇವೆ ಆರಂಭಿಸಿದ್ದ ಬಸ್: ಹುಬ್ಬಳ್ಳಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಅಲ್ಲಾಪೂರ ಗ್ರಾಮಕ್ಕೆ 2008ರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಘಟಕ-1 ರಿಂದ ಬಸ್ ಸೇವೆ ಪ್ರಾರಂಭಿಸಲಾಗಿತ್ತು. ಅಂದು ಬಸ್‌ಗೆ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಈ ಬಸ್ ಅಲ್ಲಾಪೂರ, ಕಡಪಟ್ಟಿ ಹಾಗೂ ಹಳ್ಯಾಳ ಗ್ರಾಮಗಳಿಗೆ ಸೇವೆ ಒದಗಿಸಿದೆ. ಮೂರು ಗ್ರಾಮಗಳ ವಿದ್ಯಾರ್ಥಿಗಳು, ಗ್ರಾಮಸ್ಥರು, ರೈತರು, ಕೂಲಿ ಕಾರ್ಮಿಕರು, ನೌಕರರು ಹಾಗೂ ವ್ಯಾಪಾರಸ್ಥರನ್ನು ಹುಬ್ಬಳ್ಳಿಗೆ ಕರೆದೊಯ್ದು, ಕರೆತರುತ್ತಿತ್ತು. ರಾತ್ರಿ ಅಲ್ಲಾಪೂರದಲ್ಲೇ ತಂಗುತ್ತಿದ್ದ ಬಸ್ ಬೆಳಗ್ಗೆ ಗ್ರಾಮದಿಂದ ಹುಬ್ಬಳ್ಳಿಗೆ ಕಡೆಗೆ ಹೊರಡುತ್ತಿತ್ತು.
ಕಿರೀಟ ಬಸ್ ಎಂದೇ ಖ್ಯಾತಿ: ಈ ಬಸ್ ಮುಂಭಾಗದಲ್ಲಿ ಕೆಎಸ್ಆರ್ಟಿಸಿ ಲೋಗೋ ಜೊತೆಗೆ ಎರಡು ಬದಿಯಲ್ಲಿ ನವಿಲುಗಳಿರುವ ಲೋಗೋ ಹಾಕಲಾಗಿತ್ತು. ಇದು ಬಸ್‌ಗೆ ಕಿರೀಟದಂತೆ ಗೋಚರಿಸುತ್ತಿತ್ತು. ಹೀಗಾಗಿ ಗ್ರಾಮಸ್ಥರು ಇದಕ್ಕೆ ಕಿರೀಟ ಬಸ್ ಎಂದು ಕರೆಯುತ್ತಿದ್ದರು. ಹುಬ್ಬಳ್ಳಿಯಲ್ಲಿ ಒಂದೇ ಮಾದರಿಯ ಹಲವು ಬಸ್‌ಗಳು ಇದ್ದರೂ ಹಳ್ಯಾಳ, ಕಡಪಟ್ಟಿ, ಅಲ್ಲಾಪೂರ ಗ್ರಾಮಸ್ಥರು, ಅದರಲ್ಲೂ ಅನಕ್ಷರಸ್ಥರು ಕಿರೀಟದಂತೆ ಕಾಣುತ್ತಿದ್ದ ಲೋಗೋ ನೋಡಿ ಇದು ನಮ್ಮೂರ ಬಸ್ ಎಂದು ಸುಲಭವಾಗಿ ಗುರುತಿಸುತ್ತಿದ್ದರು.
ವಿಶೇಷ ಎಂದರೆ ಕಳೆದ ಒಂದು ದಶಕದಿಂದ ಬಸ್ ಕೆಟ್ಟ, ಸಂಚಾರ ಸ್ಥಗಿತಗೊಳಿಸಿದ ನಿದರ್ಶನ ಕಡಿಮೆ. ನಿರಂತರವಾಗಿ ಗ್ರಾಮಸ್ಥರಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಈ ಬಸ್ 11.80 ಲಕ್ಷ ಕಿ.ಮೀ. ಓಡಾಟ ಮಾಡಿದೆ. ಕೇಂದ್ರ ಸರ್ಕಾರದ ಸ್ಕ್ರಾಪಿಂಗ್ ನೀತಿಯಂತೆ ಈ ಬಸ್ ಗುಜರಿ ಸೇರುತ್ತಿದೆ.
ಬಸ್ ಚಾಲಕ ಹನುಮಂತಪ್ಪ ಮಾತನಾಡಿ, ಅಲ್ಲಾಪೂರಕ್ಕೆ 2008ರಲ್ಲಿ ಬಸ್ ಸೇವೆ ಆರಂಭಿಸಿದ್ದಾಗ ಹುಬ್ಬಳ್ಳಿ ನಗರ ಘಟಕ-1ರಿಂದ ನಾನೇ ಚಾಲಕನಾಗಿ ಬಸ್ ತೆಗೆದುಕೊಂಡು ಹೋಗಿದ್ದೆ. ಮಧ್ಯಾಹ್ನ 1 ಗಂಟೆಗೆ ಈ ಬಸ್‌ನ ಕರ್ತವ್ಯ ಆರಂಭವಾದರೆ ಮರುದಿನ ಮಧ್ಯಾಹ್ನ 1:00 ಗಂಟೆಗೆ ಮುಗಿಯುತ್ತದೆ. ನಾನು ಇನ್ನೊಬ್ಬ ಚಾಲಕ ಇಬ್ಬರೇ ನಿರಂತರವಾಗಿ ಬಸ್ ಓಡಿಸಿದ್ದೆವು. ಅಲ್ಲಾಪೂರಕ್ಕೆ ಸಂಚಾರ ಆರಂಭಿಸಿದಾಗ ಬಸ್ ಹೊಸದಾಗಿತ್ತು. ನಗರ ಘಟಕ-2 ರಿಂದ ಘಟಕ-1ಕ್ಕೆ ಬಂದ ನಾಲ್ಕು ಹೊಸ ಬಸ್‌ಗಳಲ್ಲಿ ಇದು ಒಂದು. ವರ್ಕ್ಶಾಪ್ನಲ್ಲಿ ಬಸ್‌ಗೆ ಕಿರೀಟ ಹಾಕಿಸಿದ್ದೆ. ಇದೀಗ ಬಸ್ ತನ್ನ ಸಂಚಾರ ಸ್ಥಗಿತಗೊಳಿಸುತ್ತಿದೆ. ಇನ್ನು ನಾಲ್ಕು ತಿಂಗಳಲ್ಲಿ ನಾನೂ ಸೇವೆಯಿಂದ ನಿವೃತ್ತಿಯಾಗುವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿ, ಸಾಮಾನ್ಯವಾಗಿ ಮೊದಲ ಬಾರಿಗೆ ಗ್ರಾಮಕ್ಕೆ ಬಂದ ಬಸ್‌ಗೆ ಪೂಜೆ ಸಲ್ಲಿಸುತ್ತಾರೆ. ಆದರೆ ನಮ್ಮ ಗ್ರಾಮಕ್ಕೆ ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಬಸ್‌ಗೆ ಕೃತಜ್ಞತೆ ಸಲ್ಲಿಸಲು ಪೂಜೆಯೊಂದಿಗೆ ಬೀಳ್ಕೊಡುಗೆ ಕೊಟ್ಟಿದ್ದೇವೆ. ಗ್ರಾಮಕ್ಕೆ ಒಟ್ಟು ಎರಡು ಬಸ್ ಬರುತ್ತಿದ್ದು, ಇದೀಗ ಸುದೀರ್ಘ ಸೇವೆ ಸಲ್ಲಿಸಿದ ಬಸ್ ನಿವೃತ್ತಿಯಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಪಾವೂರು ಉಳಿಯ ದ್ವೀಪದಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ: ನದಿಗಿಳಿದು ಪ್ರತಿಭಟಿಸಿದ ಜನರು - Pavoor Island sand mining