ಮಾಸ್ಕೋ: ರಷ್ಯಾದ ತನ್ನ ಫಾರ್ ಈಸ್ಟರ್ನ್ ಬಾಹ್ಯಾಕಾಶ ಸಂಕೀರ್ಣ (Far Eastern space complex) ದಿಂದ ಹೊಸ ಹೆವಿ-ಲಿಫ್ಟ್ ರಾಕೆಟ್ ಅನ್ನು ಪರೀಕ್ಷಿಸುವ ಎರಡನೇ ಪ್ರಯತ್ನವನ್ನು ರಷ್ಯಾ ಮುಂದೂಡಿದೆ. ವೊಸ್ಟೊಚ್ನಿ (Vostochny) ಬಾಹ್ಯಾಕಾಶ ನಿಲ್ದಾಣದಿಂದ ಅಂಗಾರ-ಎ 5 ರಾಕೆಟ್ ಉಡಾವಣೆಯನ್ನು 0900 ಜಿಎಂಟಿಯ ಯೋಜಿತ ಸಮಯಕ್ಕಿಂತ ಎರಡು ನಿಮಿಷಗಳ ಮೊದಲು ರದ್ದುಪಡಿಸಲಾಯಿತು. ರಾಕೆಟ್ನ ಮುಖ್ಯ ಬ್ಲಾಕ್ನ ಆಕ್ಸಿಡೈಸರ್ ಟ್ಯಾಂಕ್ನಲ್ಲಿನ ಒತ್ತಡ ವ್ಯವಸ್ಥೆಯ ವೈಫಲ್ಯವೇ ಇದಕ್ಕೆ ಕಾರಣ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಆರ್ಐಎ-ನೊವೊಸ್ಟಿ (RIA-Novosti) ಹೇಳಿದೆ.
ಕನಿಷ್ಠ ಒಂದು ದಿನದ ನಂತರ ಮತ್ತೊಮ್ಮೆ ಉಡಾವಣಾ ಪ್ರಯತ್ನ ಮಾಡಲಾಗುವುದು ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ರಾಸ್ ಕಾಸ್ಮೋಸ್ (Roscosmos) ತಿಳಿಸಿದೆ. ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಯು ಆಕ್ಸಿಡೈಸರ್ ಟ್ಯಾಂಕ್ ಒತ್ತಡ ವ್ಯವಸ್ಥೆಯಲ್ಲಿ ದೋಷ ಕಂಡು ಹಿಡಿದಿದ್ದರಿಂದ ಮಂಗಳವಾರದಂದು ಇದನ್ನು ಉಡಾವಣೆ ಮಾಡುವ ಮೊದಲ ಪ್ರಯತ್ನವೂ ವಿಫಲವಾಗಿತ್ತು ಎಂದು ರಾಸ್ ಕಾಸ್ಮೋಸ್ ಮುಖ್ಯಸ್ಥ ಯೂರಿ ಬೊರಿಸೊವ್ ಹೇಳಿದ್ದಾರೆ.
ಸೋವಿಯತ್ ವಿನ್ಯಾಸದ ಪ್ರೋಟಾನ್ ರಾಕೆಟ್ಗಳನ್ನು ಬದಲಿಸಲು ಹೊಸ ಅಂಗಾರ ಶ್ರೇಣಿಯ ರಾಕೆಟ್ಗಳ ಹೆವಿ-ಲಿಫ್ಟ್ ರಾಕೆಟ್ಗಳನ್ನು ತಯಾರಿಸಲಾಗಿದೆ. ಈ ಶ್ರೇಣಿಯ ಹೆವಿ-ಲಿಫ್ಟ್ ಆವೃತ್ತಿಯಾದ ಅಂಗಾರ-ಎ 5 ಇದು ನಾಲ್ಕನೇ ಬಾರಿಯ ಉಡಾವಣಾ ಪ್ರಯತ್ನವಾಗಿತ್ತು. ಈ ಹಿಂದೆ ಮೂರು ಬಾರಿ ವಾಯುವ್ಯ ರಷ್ಯಾದ ಪ್ಲೆಸೆಟ್ಸ್ಕ್ ಉಡಾವಣಾ ಪ್ಯಾಡ್ನಿಂದ ಇವನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು.