ಹೈದರಾಬಾದ್: ಕಳೆದ ವರ್ಷ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿತ್ತು. ಬರೋಬ್ಬರಿ 13 ವರ್ಷಗಳ ನಂತರ ಭಾರತ ವಿಶ್ವಕಪ್ಗೆ ಮುತ್ತಿಕ್ಕಿತ್ತು. ಬಳಿಕ ಬಿಸಿಸಿಐ ಭಾರತೀಯ ಆಟಗಾರರನ್ನು 125 ಕೋಟಿ ರೂ. ನಗದು ಬಹುಮಾನ ನೀಡಿ ಗೌರವಿಸಿತ್ತು. ಇದರ ಜೊತೆಗೆ ಆಟಗಾರರಿಗೆ ಮತ್ತೊಂದು ಅಮೂಲ್ಯ ಬಹುಮಾನವನ್ನು ಬಿಸಿಸಿಐ ನೀಡಿದೆ.
ವಿಜೇತ ತಂಡದ ಪ್ರತಿಯೊಬ್ಬ ಆಟಗಾರನಿಗೆ ಅತ್ಯಮೂಲ್ಯವಾದ ವಜ್ರದ ಉಂಗುರಗಳನ್ನು ನೀಡಿದೆ. ಇತ್ತೀಚೆಗೆ, ಬಿಸಿಸಿಐ ನಮನ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ಆಟಗಾರರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಜ್ರದ ಉಂಗುರಗಳನ್ನು ನೀಡಲಾಯಿತು.
ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇತ್ತೀಚೆಗೆ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ. ಟಿ20ಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾಗೆ ನಾವು ಚಾಂಪಿಯನ್ಸ್ ರಿಂಗ್ ನೀಡುತ್ತಿದ್ದೇವೆ. ಈ ವಜ್ರಗಳು ಶಾಶ್ವತವಾಗಿರಬಹುದು, ಆದರೆ ಈ ಗೆಲುವು ಖಂಡಿತವಾಗಿಯೂ ಕೋಟ್ಯಂತರ ಜನರ ಹೃದಯಗಳಲ್ಲಿ ಅಮರವಾಗಿದೆ. ಈ ಸಿಹಿ ನೆನಪುಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ ಎಂದು ಬಿಸಿಸಿಐ ಹೇಳಿದೆ.
ಈ ಉಂಗುರ ವಜ್ರ ಮತ್ತು ಚಿನ್ನದಿಂದ ಮಾಡಲ್ಪಟ್ಟಿದೆ. ಈ ಉಂಗುರದ ಮೇಲ್ಭಾಗದಲ್ಲಿ "T20 ವಿಶ್ವಕಪ್ ಚಾಂಪಿಯನ್ ಇಂಡಿಯಾ" ಎಂಬ ಅಕ್ಷರಗಳನ್ನು ಸಹ ಕೆತ್ತಲಾಗಿದೆ. ಇದರೊಂದಿಗೆ ಅಶೋಕ ಚಕ್ರದ ಚಿಹ್ನೆಯನ್ನೂ ಮುದ್ರಿಸಲಾಗಿದೆ. ಇದಲ್ಲದೆ, ರಿಂಗ್‌ನ ಎರಡೂ ಬದಿಗಳಲ್ಲಿ, ಆಟಗಾರರ ಹೆಸರುಗಳು ಮತ್ತು ಜೆರ್ಸಿ ಸಂಖ್ಯೆ, ಹಾಗೆಯೇ ಟಿ20ಯಲ್ಲಿ ಟೀಂ ಇಂಡಿಯಾ ಯಾವ ತಂಡದ ವಿರುದ್ದ ಗೆದ್ದಿದೆ ಎಂಬುದನ್ನು ಮುದ್ರಿಸಲಾಗಿದೆ. ವೀಡಿಯೊದಲ್ಲಿ ರೋಹಿತ್ ಶರ್ಮಾ, ಬುಮ್ರಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಈ ಉಂಗುರಗಳನ್ನು ತೆಗೆದುಕೊಳ್ಳುತ್ತಿರುವುದನ್ನು ತೋರಿಸಲಾಗಿದೆ.
ಏತನ್ಮಧ್ಯೆ, ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಭಾರತ ಅಜೇಯವಾಗಿ 9 ಪಂದ್ಯಗಳನ್ನು ಗೆದ್ದು ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಟಿ20 ವಿಶ್ವಕಪ್ ಫೈನಲ್ ಅನ್ನು ಗೆದ್ದುಕೊಂಡಿತು. ಆಗ ಆಟಗಾರರ ಮೇಲೆ ಕೋಟ್ಯಂತರ ರೂಪಾಯಿಗಳ ಸುರಿಮಳೆಗೈದಿದ್ದ ಮಂಡಳಿ, ಈಗ ಮತ್ತೊಮ್ಮೆ ಅವರಿಗೆ ವಜ್ರದ ಉಂಗುರಗಳನ್ನು ನೀಡಿ ಗೌರವಿಸಿದೆ. ಇವು ಕೂಡ ಕೋಟಿಗೂ ಹೆಚ್ಚಿನ ಬೆಲ್ಲೆಯದ್ದಾಗಿವೆ. ಬಿಸಿಸಿಐ ತನ್ನ ಶ್ರೇಣಿಗೆ ತಕ್ಕ ಉಡುಗೊರೆಗಳನ್ನು ನೀಡಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಮ್ಮಿನ್ಸ್ ಮನೆಗೆ ಹೊಸ ಅತಿಥಿ ಆಗಮನ : ಮಗುವಿಗೆ ಇಟ್ಟ ಹೆಸರೇನು ಗೊತ್ತಾ?