ಬೆಳಗಾವಿ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವ ಶನಿವಾರ ಜರುಗಿತು. ಈ ವೇಳೆ ವಿವಿಧ ಸ್ನಾತಕೋತ್ತರ ಪದವೀಧರರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ಮಾಡಿದರು. ರೈತನ ಮಗಳು ನಾಲ್ಕು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಕನ್ಯಾಕುಮಾರಿಯ ನೂರುಲ್ ಇಸ್ಲಾಂ ಸೆಂಟರ್ ಫಾರ್ ಹೈಯರ್ ಎಜುಕೇಶನ್‌ನ ಕುಲಪತಿ ಡಾ. ಟೆಸ್ಸಿ ಥಾಮಸ್ ಅವರು ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್, ಕುಲಸಚಿವ ಟಿ. ಎಂ ಶ್ರೀನಿವಾಸ್ ಸೇರಿ ಮತ್ತಿತರರು ಇದ್ದರು.
ಪದವಿ ಪ್ರದಾನ : ಸ್ನಾತಕೋತ್ತರ ಪದವೀಧರರಿಗೆ 7194 ಎಂಬಿಎ ಪದವಿ, 3784 ಎಂಸಿಎ, 1314 ಎಂಟೆಕ್, 83 ಎಂ. ಆರ್ಚ್, 23 ಎಂಪ್ಲ್ಯಾನ್ ಪದವಿ ಸೇರಿದಂತೆ 425 ಪಿಹೆಚ್‌ಡಿ ಪದವಿ, ಮೂರು ಎಂ.ಎಸ್ಸಿ ಸಂಶೋಧನಾ ಪದವಿ ಹಾಗೂ 5 ಇಂಟಿಗ್ರೇಟೆಡ್ ಡುಯಲ್ ಪದವಿಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಈ ವೇಳೆ ಪದವಿ ಪ್ರದಾನ ಮಾಡಲಾಯಿತು.
ಚಿನ್ನದ ಪದಕ ವಿಜೇತರು : ಎಂಬಿಎ ವಿಭಾಗದಲ್ಲಿ ಬೆಂಗಳೂರಿನ ಸಾಯಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಶ್ವೇತಾ ಹೆಚ್. ಯು ಅವರು ನಾಲ್ಕು ಚಿನ್ನದ ಪದಕ, ಎಂಸಿಎ ವಿಭಾಗದಲ್ಲಿ ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ರಚನಾ ಆರ್ ಅವರು ಮೂರು ಚಿನ್ನದ ಪದಕ, ಎಂ. ಇ ವಿಭಾಗದಲ್ಲಿ ಬೆಂಗಳೂರಿನ ಹೆಚ್‌ಜೆಬಿಐಟಿಯ ಅನ್ವಿತಾ ಎಂ. ಕುಮಾರ್ ಹಾಗೂ ಎಂ.ಟೆಕ್ ವಿಭಾಗದಲ್ಲಿ ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿಯ ಯಶಸ್ ಎಲ್ ಹಾಗೂ ಹಳಿಯಾಳದ ಕೆಎಲ್‌ಎಸ್‌ಡಿಐಟಿ ಸುಪ್ರಿಯಾ ರಜಪೂತ್ ಅವರು ತಲಾ ಎರಡು ಚಿನ್ನದ ಪದಕ ಪಡೆದು ಸಾಧನೆ ಮೆರೆದರು.
![Convocation](https://etvbharatimages.akamaized.net/etvbharat/prod-images/08-02-2025/23502309_thumbjkgjgf.jpg)
ಹಳ್ಳಿ ಹುಡುಗಿ ಪ್ರತಿಭೆಗೆ 4 ಚಿನ್ನದ ಪದಕ : ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊಳೆಕೊಪ್ಪ ಗ್ರಾಮದ ಶ್ವೇತಾ ಹೆಚ್. ಯು ಬೆಂಗಳೂರಿನ ಸಾಯಿ ವಿದ್ಯಾ ಸಂಸ್ಥೆಯಲ್ಲಿ ಎಂಬಿಎ ಪೂರ್ಣಗೊಳಿಸಿದ್ದು, 4 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಶ್ವೇತಾ ತಂದೆ ಉಮೇಶ ನಾಯಿಕ, ತಾಯಿ ಗೀತಾ ರೈತರು. ಎರಡು ಎಕರೆ ಸ್ವಂತ ಜಮೀನಿನಲ್ಲಿ ಕೃಷಿ ಮಾಡುತ್ತಾ, ಕೂಲಿ ಕೆಲಸಕ್ಕೂ ಹೋಗಿ ತಮ್ಮ ಇಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಶ್ವೇತಾ ಸಹೋದರಿ ಸ್ವಾತಿ ನರ್ಸಿಂಗ್ ಕಲಿಯುತ್ತಿದ್ದಾರೆ.
ಈ ಬಗ್ಗೆ ಶ್ವೇತಾ ಮಾತನಾಡಿ, 'ನನಗೆ 4 ಚಿನ್ನದ ಪದಕ ಬಂದಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ಇವುಗಳನ್ನು ಅಪ್ಪ-ಅವ್ವ, ಉಪನ್ಯಾಸಕರು ಮತ್ತು ದೇವರಿಗೆ ಅರ್ಪಿಸುತ್ತೇನೆ. ಪರೀಕ್ಷೆ ಹಿಂದಿನ ದಿನದವರೆಗೂ ಓದುತ್ತಿದ್ದೆ. ಪರೀಕ್ಷೆ ಸಮೀಪಿಸಿದಾಗ ಮೊಬೈಲ್ ಬಹಳ ಕಮ್ಮಿ ಉಪಯೋಗಿಸುತ್ತಿದ್ದೆ. ಮುಂದೆ ಕೆಎಎಸ್ ಪರೀಕ್ಷೆ ಎದುರಿಸುವ ಗುರಿ ಹೊಂದಿದ್ದೇನೆ. ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳುವ ಆಶಯ ಇಟ್ಟುಕೊಂಡಿದ್ದೇನೆ' ಎಂದು ತಮ್ಮ ಜೀವನದ ಗುರಿ ಬಗ್ಗೆ ತಿಳಿಸಿದರು.
![Convocation](https://etvbharatimages.akamaized.net/etvbharat/prod-images/08-02-2025/23502309_thumbnakhjfh.jpg)
ಕಾರ್ಮಿಕನ ಮಗಳಿಗೆ ಎರಡು ಚಿನ್ನದ ಪದಕ : ದಾಂಡೇಲಿಯ ಸುಪ್ರಿಯಾ ಪರಶುರಾಮಸಿಂಗ್ ರಜಪೂತ್ ಮಾತನಾಡಿ, 'ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ನನಗೆ 2 ಚಿನ್ನದ ಬಂದಿವೆ. ತಂದೆ ಪರಶುರಾಮ ದಾಂಡೇಲಿಯ ವೆಸ್ಟ್ ಕೋಸ್ಟ್ ಪೆಪರ್ ಮಿಲ್ನಲ್ಲಿ ಕಾರ್ಮಿಕರಾಗಿದ್ದಾರೆ. ತಾಯಿ ಮನೆಗೆಲಸ ಮಾಡುತ್ತಾರೆ. ನಮ್ಮದು ಮಧ್ಯಮ ವರ್ಗದ ಕುಟುಂಬ. ತಂದೆ-ತಾಯಿ ಕಷ್ಟ ಪಟ್ಟು ಓದಿಸಿದ್ದರು. ಈಗ ಮೂರು ತಿಂಗಳ ಹಿಂದೆಯಷ್ಟೇ ಮದುವೆ ಆಗಿದೆ. ತಂದೆ -ತಾಯಿ ಮುಂದೆ ಚಿನ್ನದ ಪದಕ ಪಡೆದಿರುವುದು ಬಹಳಷ್ಟು ಖುಷಿ ತಂದಿದೆ. ಈ ಪದಕಗಳನ್ನು ಅವರಿಗೆ ಅರ್ಪಿಸುತ್ತೇನೆ. ಸದ್ಯಕ್ಕೆ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆ ಪಿಹೆಚ್‌ಡಿ ಮಾಡುವ ಗುರಿ ಇದೆ' ಎಂದು ಹೇಳಿದರು.
![Convocation](https://etvbharatimages.akamaized.net/etvbharat/prod-images/08-02-2025/23502309_thumbnkgfgdg.jpg)
2 ಚಿನ್ನದ ಪದಕ ವಿಜೇತೆ ಅನ್ವಿತಾ ಎಂ. ಕುಮಾರ್ ಮಾತನಾಡಿ, 'ನನ್ನ ತಂದೆ-ತಾಯಿ, ಪ್ರಿನ್ಸಿಪಾಲ್, ಹೆಚ್ಒಡಿ, ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರೆಲ್ಲರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ವಿಷಯ ಅರ್ಥ ಆಗೋವರೆಗೂ ಓದುತ್ತಿದ್ದೆ. ಮುಂದೆ ಕೆಎಎಸ್ ಅಧಿಕಾರಿಯಾಗಿ ಸಮಾಜಕ್ಕೆ ಒಳ್ಳೆಯ ಸೇವೆ ನೀಡುವ ಗುರಿ ಇಟ್ಟುಕೊಂಡಿದ್ದೇನೆ' ಎಂದರು.