ಬೆಂಗಳೂರು : ಇನ್ವೆಸ್ಟ್ ಕರ್ನಾಟಕ 2025-ಜಾಗತಿಕ ಹೂಡಿಕೆದಾರರ ಸಮಾವೇಶದ (ಜಿಐಎಂ) ಹೊಸ್ತಿಲಲ್ಲಿ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ರಾಜ್ಯದ ಕೈಗಾರಿಕಾ ವಲಯ ಮತ್ತು ಆರ್ಥಿಕತೆಯ ಭವಿಷ್ಯ ರೂಪಿಸುವುದಕ್ಕೆ ಶ್ರೀಕಾರ ಹಾಕುವ ಹಲವಾರು ಮಹತ್ವದ ಉಪಕ್ರಮಗಳನ್ನು ಪ್ರಕಟಿಸಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಇಂದು ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ರಾಜ್ಯದ ಭವಿಷ್ಯದ ಬಗೆಗಿನ ತಮ್ಮ ಕನಸುಗಳನ್ನು ವಿವರಿಸಿದರು. ಪ್ರಗತಿಯ ಮರುಪರಿಕಲ್ಪನೆ ಸಾಕಾರಗೊಳಿಸಲು ರಾಜ್ಯ ಸರ್ಕಾರವು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಹತ್ತಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಫೆ.11 ರಂದು ಸಂಜೆ 4 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸಲಿದ್ದಾರೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್. ಡಿ ಕುಮಾರಸ್ವಾಮಿ, ಕೇಂದ್ರದ ಎಂಎಸ್‌ಎಂಇ ಹಾಗೂ ಕಾರ್ಮಿಕ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಫೆ. 12ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಪ್ರಮುಖ ಕೈಗಾರಿಕೋದ್ಯಮಿಗಳಾದ ಆನಂದ್ ಮಹೀಂದ್ರಾ, ಸಜ್ಜನ್ ಜಿಂದಾಲ್, ಶ್ರೀಮತಿ ಗೀತಾಂಜಲಿ ಕಿರ್ಲೋಸ್ಕರ್, ಶ್ರೀಮತಿ ಕಿರಣ್ ಮಜುಂದಾರ್ ಶಾ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮೊದಲ ಬಾರಿಗೆ ಪ್ರಶಸ್ತಿ : 'ಇದೇ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ ಪ್ರಶಸ್ತಿ ನೀಡಲಾಗುವುದು. ರಾಜ್ಯದ ಕೈಗಾರಿಕಾ ಯಶೋಗಾಥೆ ರೂಪಿಸಿರುವ 14 ಪ್ರವರ್ತಕ ಕೈಗಾರಿಕೆಗಳ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ (ಸರ್ಕಾರಿ ಮತ್ತು ಖಾಸಗಿ), ವಾಹನ / ವಿದ್ಯುತ್‌ಚಾಲಿತ ವಾಹನ (ಇವಿ), ಜೈವಿಕ ತಂತ್ರಜ್ಞಾನ ಮತ್ತು ಜೀವವಿಜ್ಞಾನದಂತಹ ವಿಶೇಷ ವಿಭಾಗಗಳಲ್ಲಿ ತ್ವರಿತವಾಗಿ ಬೆಳವಣಿಗೆ ಸಾಧಿಸುತ್ತಿರುವ ಮತ್ತು ಭವಿಷ್ಯಕ್ಕೆ ಮಹತ್ವದ್ದಾಗಿರುವ ವಲಯಗಳಿಗೂ ಪ್ರಶಸ್ತಿ ನೀಡಲಾಗುವುದು. ಒಂದು ಬಾರಿಗೆ ಗರಿಷ್ಠ ಬಂಡವಾಳ ಹೂಡಿಕೆ ಮಾಡಿದ ಕಂಪನಿ ಹಾಗೂ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರವರ್ತಕ ಕಂಪನಿಗಳಿಗೆ ಪ್ರಶಸ್ತಿ ನೀಡಲಾಗುವುದು' ಎಂದು ವಿವರಿಸಿದರು.
'ಏರೋಸ್ಪೇಸ್, ಜೈವಿಕ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನ ವಲಯಗಳಲ್ಲಿನ ಕರ್ನಾಟಕದ ಸಾಧನೆ ಪರಿಚಯಿಸುವ, ನವೋದ್ಯಮಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಯಶೋಗಾಥೆ ಒಳಗೊಂಡಿರುವ ಕಿರುಹೊತ್ತಿಗೆ ಹೊರತರಲಾಗುವುದು. ಎಸ್‌ಎಂಇ-ಗಳಿಗೆ ಬೆಂಬಲ ನೀಡಲು ಇದೇ ಮೊದಲ ಬಾರಿಗೆ ಎಸ್‌ಎಂಇ ಪ್ರಶಸ್ತಿ ನೀಡಲಾಗುತ್ತಿದ್ದು, ಗಮನಾರ್ಹ ಸಾಧನೆ ಮಾಡಿರುವ 35ಕ್ಕೂ ಹೆಚ್ಚು ಎಸ್‌ಎಂಇ-ಗಳನ್ನು ಗೌರವಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿರುವ ಎಸ್‌ಎಂಇ-ಗಳನ್ನು ವಿಶೇಷವಾಗಿ ಗುರುತಿಸಲಾಗುವುದು. ಮಹಿಳಾ ಉದ್ಯಮಿಗಳು ಮತ್ತು ವಲಯವಾರು ಸಾಧನೆಗಳನ್ನು ಗುರುತಿಸಿ ಮನ್ನಣೆ ನೀಡಲಾಗುವುದು. ನಾವೀನ್ಯತೆಯಲ್ಲಿ ಜಾಗತಿಕ ನಾಯಕ ಸ್ಥಾನದಲ್ಲಿ ಇರುವ ಕರ್ನಾಟಕದ ಸ್ಥಾನಮಾನವನ್ನು ಬಲಪಡಿಸಲು 60ಕ್ಕೂ ಹೆಚ್ಚು ಕಂಪನಿಗಳು ಮತ್ತು ನವೋದ್ಯಮಗಳು ತಯಾರಿಕೆ, ಸಂಚಾರ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುವ ತಂತ್ರಜ್ಞಾನಗಳನ್ನು ಸಮಾವೇಶದಲ್ಲಿ ಪ್ರದರ್ಶಿಸಲಿವೆ' ಎಂದು ಮಾಹಿತಿ ನೀಡಿದರು.
ವಿವಿಧ ಪಾರ್ಕ್‌ಗಳ ಅಭಿವೃದ್ಧಿ : ರಾಜ್ಯದಲ್ಲಿ ಕೈಗಾರಿಕಾ ವಿಸ್ತರಣೆ ಹೆಚ್ಚಿಸಲು ಕೋಲಾರದಲ್ಲಿ ಅತ್ಯಾಧುನಿಕ ಔಷಧಿ ಪಾರ್ಕ್, ವಿಜಯಪುರದಲ್ಲಿ ಸೌರ ಕೋಶ ಪಾರ್ಕ್ ಮತ್ತು ಆಹಾರ ಪಾರ್ಕ್, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್ ಮತ್ತು ಚಿಕ್ಕಬಳ್ಳಾಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಇವಿ ಕ್ಲಸ್ಟರ್‌ಗಳು (ಕೈಗಾರಿಕಾ ಸಮೂಹ) ಸೇರಿದಂತೆ ಅಭಿವೃದ್ಧಿಪಡಿಸುವುದಾಗಿಯೂ ಸಚಿವರು ಪ್ರಕಟಿಸಿದರು.
'ಇವುಗಳ ಜೊತೆಗೆ, 400ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳಿಗೆ ನೆರವಾಗಲು ಹುಬ್ಬಳ್ಳಿಯಲ್ಲಿ 200 ಎಕರೆ ಪ್ರದೇಶದಲ್ಲಿ ನವೋದ್ಯಮ ಪಾರ್ಕ್ ಸ್ಥಾಪನೆ, ವಿಜಯಪುರ ಜಿಲ್ಲೆಯ ತಿಡಗುಂದಿಯಲ್ಲಿ 1,200 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಮತ್ತು ಸರಕು ಸಾಗಣೆ ಪಾರ್ಕ್ ಸ್ಥಾಪಿಸಲಾಗುವುದು' ಎಂದರು.
ಕ್ವಿನ್‌ಸಿಟಿ ಸಹಭಾಗಿತ್ವಕ್ಕೆ ಆದ್ಯತೆ : 'ವಿಶ್ವದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಜೊತೆಗಿನ ಸಹಭಾಗಿತ್ವಕ್ಕೆ ಕರ್ನಾಟಕದ ಬದ್ಧತೆ ಪುನರುಚ್ಚರಿಸಿದ ಸಚಿವರು, ಕ್ವಿನ್ ಸಿಟಿಗಾಗಿ ಸಹಭಾಗಿತ್ವ ವಿಸ್ತರಿಸಲು ಸಮಾವೇಶದಲ್ಲಿ ಆದ್ಯತೆ ನೀಡಲಾಗುವುದು. ಯುನಿವರ್ಸಿಟಿ ಆಫ್ ಲಿವರ್‌ಪೂರ್ ಜೊತೆಗಿನ ಇತ್ತೀಚಿನ ಒಪ್ಪಂದವು ಇದಕ್ಕೆ ನಿದರ್ಶನವಾಗಿದೆ. ಈ ಶೃಂಗಸಭೆಯು, ವಿವಿಧ ಕೈಗಾರಿಕಾ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆ ಬೆಳೆಸುವುದರ ಜೊತೆಗೆ, ನಾವೀನ್ಯತೆ ಮತ್ತು ಹೂಡಿಕೆ ಕೇಂದ್ರವಾಗಿರುವ ಕರ್ನಾಟಕದ ಮಹತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆ' ಎಂದು ಹೇಳಿದರು.
'ಸಮಾವೇಶದಲ್ಲಿ ಪ್ರಮುಖರಾದ ಆನಂದ್ ಮಹೀಂದ್ರಾ, ಸಜ್ಜನ್ ಜಿಂದಾಲ್, ಡಾ. ಶಶಿ ತರೂರ್, ಸೆಬಾಸ್ಟಿಯನ್ ದ್ರನ್, ಆನ್ ಡಂಕಿನ್, ನಿಖಿಲ್ ಕಾಮತ್, ಕಿರಣ್ ರಾವ್, ಗೀತಾಂಜಲಿ ಕಿರ್ಲೋಸ್ಕರ್, ಪ್ಯಾಟ್ರಿಕ್ ಲಾರ್ಡ್, ಕಿರಣ್ ಮಜುಂದಾರ್ ಶಾ, ವಿವೇಕ್ ಲಾಲ್, ಸುದರ್ಶನ್ ವೇಣು, ಮಾರ್ಟಿನ್ ಲುಂಡ್ಡೆಡ್, ರಾಬ್ ಬಾಯ್, ಅಕಿನ್ ಇವಾಂಜೆಲಿಡಿಸ್ ಮತ್ತು ಪ್ರಶಾಂತ್ ಪ್ರಕಾಶ್ ಸೇರಿದಂತೆ 75ಕ್ಕೂ ಹೆಚ್ಚು ಗಣ್ಯ ಭಾಷಣಕಾರರು ಭಾಗವಹಿಸಲಿದ್ದಾರೆ' ಎಂದರು.
'25ಕ್ಕೂ ಹೆಚ್ಚು ತಾಂತ್ರಿಕ ಅಧಿವೇಶನಗಳು, 10ಕ್ಕೂ ಹೆಚ್ಚು ದೇಶಗಳ ಸಭೆಗಳು ಮತ್ತು ಎಸ್‌ಎಂಇ ಕನೆಕ್ಟ್‌ಗೆ ಸಂಬಂಧಿಸಿದ ಸಮಾಲೋಚನೆಗಳು ನಡೆಯಲಿವೆ. ಈ ಹೂಡಿಕೆ ಶೃಂಗಸಭೆಯು ಜಾಗತಿಕಮಟ್ಟದ ಇತ್ತೀಚಿನ ಆರ್ಥಿಕ ಬೆಳವಣಿಗೆಗಳು, ನಾವೀನ್ಯತೆ ಮತ್ತು ಕ್ಷಮತೆ ಕಾರ್ಯತಂತ್ರಗಳನ್ನು ಅನ್ವೇಷಿಸಲು ನೆರವಾಗಲಿದೆ. '19 ದೇಶಗಳ ಉದ್ಯಮ ಪಾಲುದಾರರು ವಾಣಿಜ್ಯ ಬಾಂಧವ್ಯ ವೃದ್ಧಿ ಸಮಾಲೋಚನೆಗಳಲ್ಲಿ ಭಾಗವಹಿಸಲಿದ್ದಾರೆ. 9 ಕಂಟ್ರಿ ಪೆವಿಲಿಯನ್‌ಗಳು ಮತ್ತು 10ಕ್ಕೂ ಹೆಚ್ಚು ನಿರ್ದಿಷ್ಟ ದೇಶಗಳ ಅಧಿವೇಶನಗಳು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಅವಕಾಶಗಳನ್ನು ಪರಿಚಯಿಸಲಿವೆ' ಎಂದು ಹೇಳಿದರು.
'ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ ಕುರಿತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ರಾಷ್ಟ್ರೀಯ ಕ್ಷಮತೆ ಕುರಿತು ಶಶಿ ತರೂರ್ ಮತ್ತು ಜಾರ್ಜ್ ಪಾಪಂಡ್ರಿಯೊ ಅವರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಭಾರತದ ಭವಿಷ್ಯವನ್ನು ರೂಪಿಸುವ ಯುವ ಆವಿಷ್ಕಾರರು - ವಿಚಾರಗೋಷ್ಠಿಯನ್ನು ನಿಖಿಲ್ ಕಾಮತ್ ಅವರು ನಿರ್ವಹಿಸಲಿದ್ದಾರೆ.
'ಸಮಾವೇಶದ ಭಾಗವಾಗಿ ನವೀಕರಿಸಬಹುದಾದ ಇಂಧನ, ಕ್ವಿನ್ ಸಿಟಿಗಾಗಿ ವಿಶ್ವವಿದ್ಯಾಲಯಗಳ ಸಹಭಾಗಿತ್ವ ಮತ್ತು ಆರೋಗ್ಯ ಕ್ಷೇತ್ರದ ಆವಿಷ್ಕಾರಗಳ ಬಗ್ಗೆ ದುಂಡುಮೇಜಿನ ಸಮಾಲೋಚನೆಯೂ ನಡೆಯಲಿದೆ. 'ಇನ್ವೆಸ್ಟ್ ಕರ್ನಾಟಕ 2025- ಕರ್ನಾಟಕದ ಅತ್ಯಂತ ಮಹತ್ವದ ಬಂಡವಾಳ ಹೂಡಿಕೆ ಶೃಂಗಸಭೆಯಾಗಲಿದೆ. ಭಾರತದ ಹೂಡಿಕೆ ಮತ್ತು ನಾವೀನ್ಯತೆಯ ಪ್ರಮುಖ ತಾಣವಾಗಿ ರಾಜ್ಯದ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ' ಎಂದು ತಿಳಿಸಿದರು.
ಬಂಡವಾಳ ಹೂಡಿಕೆ ಸಮಾವೇಶದ ಮೂಲಕ ಸುಮಾರು 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಪೈಕಿ ಶೇ.70 ರಷ್ಟಾದರೂ ನೈಜ ಹೂಡಿಕೆಯಾಗಿ ಬರಬೇಕು ಎನ್ನುವುದು ನಮ್ಮ ಪ್ರಯತ್ನ ಎಂದರು.
ಇದನ್ನೂ ಓದಿ : ಮೆಗಾ ಜ್ಯುವೆಲ್ಲರಿ ಪಾರ್ಕ್ಗೆ 50 ಎಕರೆ ಭೂಮಿ ಕೊಡಿ: ಟಿ.ಎ.ಶರವಣ ಮನವಿ - MEGA JEWELLERY PARK