ಚಿಕ್ಕೋಡಿ (ಬೆಳಗಾವಿ): ಪ್ರಿಯಕರನ ಜೊತೆಗಿನ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪ್ರಿಯತಮನ ಜೊತೆಗೂಡಿ ಗಂಡನನ್ನು ಕೊಲೆ ಮಾಡಿ ಕೃಷ್ಣಾ ನದಿಯಲ್ಲಿ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಯಬಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಅಪ್ಪಾಸಾಹೇಬ್ ಒಲೆಕಾರ್ (40) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಸಿದ್ದವ್ವ ಅಪ್ಪಾಸಾಹೇಬ್ ಒಲೆಕಾರ್, ಗಣಪತಿ ಕಾಂಬಳೆ ಕೊಲೆ ಆರೋಪಿಗಳು.
ಈ ಕುರಿತು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿ, "ಗುರುವಾರ ಬೆಳಗ್ಗೆ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯ ಭಾವನಸೌಂದತ್ತಿ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಬಳಿ ರಕ್ತಸಿಕ್ತ ಬಟ್ಟೆಗಳು ಇದ್ದ ಕಾರಣ, ಮೇಲ್ನೋಟಕ್ಕೆ ಕೊಲೆ ಮಾಡಿ ಮೃತದೇಹ ಎಸೆದಿರುವ ಸಂದೇಹ ಬಂದಿತ್ತು. ಪ್ರಾಥಮಿಕ ಹಂತದಲ್ಲಿ ಕೊಲೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಶವದ ಜೇಬಲ್ಲಿದ್ದ ಚೀಟಿಯಲ್ಲಿದ್ದ ಫೋನ್ ನಂಬರ್ಗೆ ಕರೆ ಮಾಡಿ, ಶವ ಸಿಕ್ಕಿರುವ ಬಗ್ಗೆ ಫೋಟೋ ಕಳಿಸಿದ್ದು, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಿತ್ತು. ಕುಟುಂಬದವರ ಕಡೆಯಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ" ಎಂದು ತಿಳಿಸಿದರು.
"ಕುಟುಂಬದವರು, ಮೃತ ವ್ಯಕ್ತಿ ಕೊಲೆಯಾದ ಹಿಂದಿನ ದಿನ ತನ್ನ ಪತ್ನಿ ಜೊತೆ ದೇವಸ್ಥಾನಕ್ಕೆಂದು ಹೊರಟಿದ್ದರು ಹಾಗೂ ಹೆಂಡತಿಗೆ ಬೇರೆ ಸಂಬಂಧವಿರುವ ಬಗ್ಗೆ ಗಂಡನಿಗೆ ಸಂಶಯವಿರುವ ಬಗ್ಗೆ ತಿಳಿಸಿದ್ರು. ಆ ಹಿನ್ನೆಲೆಯಲ್ಲಿ ಪತ್ನಿಯನ್ನು ವೈಜ್ಞಾನಿಕವಾಗಿ ತನಿಖೆಗೆ ಒಳಪಡಿಸಿದಾಗ ಗಂಡನನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರು".
ಹೆಚ್ಚಿನ ತನಿಖೆ ನಡೆಸಿದಾಗ, ಈ ಮಹಿಳೆ ಇನ್ನೋರ್ವ ಪುರುಷನ ಜೊತೆ ಸಂಬಂಧ ಹೊಂದಿದ್ದು, ಆ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆಂದು ಆತನನ್ನು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ದೇವಸ್ಥಾನಕ್ಕೆ ಕರೆದೊಯ್ಯುವ ನೆಪದಲ್ಲಿ ಭಾವನಸೌಂದತ್ತಿ ಗ್ರಾಮದ ಸುಗಂಧಾದೇವಿ ದೇವಸ್ಥಾನಕ್ಕೆ ಕರೆದುಕೊಂಡು ಬಂದು, ಪೂಜೆ ಮಾಡಿದ ನಂತರ ಕೊಲೆ ಮಾಡಿ ಶವವನ್ನು ಅಲ್ಲೇ ಎಸೆದು ಇಬ್ಬರು ತಮ್ಮ ತಮ್ಮ ಮನೆಗೆ ತೆರಳಿದ್ದರು. ಘಟನೆ ನಡೆದ 24 ಗಂಟೆಗಳೊಳಗೆ ಪೊಲೀಸರು ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ವಿವರಿಸಿದರು.
ಇದನ್ನೂ ಓದಿ: ಮೈಸೂರು: ಹಣಕಾಸಿನ ವಿಚಾರಕ್ಕೆ ಯುವಕನನ್ನು ಹತ್ಯೆ ಮಾಡಿದ ನಾಲ್ವರ ಬಂಧನ