ನವದೆಹಲಿ: ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ತನ್ನ ವಿಶೇಷ ದಾಳಿ ಘಟಕಗಳಲ್ಲಿ ಮಿಲಿಟರಿ ವಿಮಾನಯಾನಿಗಳನ್ನು ಒಳಗೊಂಡ ಕಮಿಕಾಜೆ ಎಂಬ ವಿಶೇಷ ಘಟಕವನ್ನು ಹೊಂದಿತ್ತು. ಯುದ್ಧದ ಪೆಸಿಫಿಕ್ ಕಾರ್ಯಾಚರಣೆಯ ಅಂತಿಮ ಹಂತಗಳಲ್ಲಿ ಮಿತ್ರರಾಷ್ಟ್ರಗಳ ನೌಕಾ ಹಡಗುಗಳ ವಿರುದ್ಧ ಆತ್ಮಹತ್ಯಾ ದಾಳಿಗಳನ್ನು ನಡೆಸುವುದು ಈ ಕಮಿಕಾಜೆ ಪೈಲಟ್ಗಳ ಗುರಿಯಾಗಿತ್ತು.
ಸಾಂಪ್ರದಾಯಿಕ ವಾಯು ದಾಳಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ವೈರಿಗಳ ಯುದ್ಧನೌಕೆಗಳನ್ನು ನಾಶಪಡಿಸುವ ಉದ್ದೇಶ ಈ ಕಮಿಕಾಜೆಗಳದಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಹೋರಾಡಿದ ಸುಮಾರು 3,800 ಕಮಿಕಾಜೆ ಪೈಲಟ್ಗಳು ಸಾವನ್ನಪ್ಪಿದ್ದರು. ಆದರೆ ಇವರು ತಾವು ಸಾವಿಗೀಡಾಗುವ ಮುಂಚೆ ಒಟ್ಟಾರೆಯಾಗಿ 7,000 ಕ್ಕೂ ಹೆಚ್ಚು ನೌಕಾ ಸಿಬ್ಬಂದಿಗಳನ್ನು ಕೊಂದು ಹಾಕಿದ್ದರು.
ಪ್ರಸ್ತುತ 21 ನೇ ಶತಮಾನದಲ್ಲಿ ಭಾರತವು ಈಗ ತನ್ನದೇ ಆದ, ಬಹುತೇಕ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಮಿಕಾಜೆ ಮಾದರಿಯ ವೈಮಾನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ನಾಗಾಸ್ತ್ರ-1 ಎಂದು ಹೆಸರಿಸಲಾಗಿದ್ದು, ಇದೊಂದು ವೈಮಾನಿಕ ಡ್ರೋನ್ ಆಗಿದೆ. ನಾಗಾಸ್ತ್ರ-1 ಮಾನವರಹಿತ ಡ್ರೋನ್ ಆಗಿರುವುದರಿಂದ ಇದನ್ನು ಚಾಲನೆ ಮಾಡುವಾಗ ಅಥವಾ ದಾಳಿ ಮಾಡುವಾಗ ಮನುಷ್ಯರು ಸಾವಿಗೀಡಾಗುವ ಸಂದರ್ಭಗಳು ಉಂಟಾಗುವುದಿಲ್ಲ.
ನಾಗ್ಪುರ ಮೂಲದ ಸೋಲಾರ್ ಇಂಡಸ್ಟ್ರೀಸ್ ತಯಾರಿಸಿದ ನಾಗಾಸ್ತ್ರ-1 ಒಂದು ಕೆಜಿ ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು ಮತ್ತು ಜಿಪಿಎಸ್ ಮೂಲಕ ಎರಡು ಮೀಟರ್ಗೂ ಕಡಿಮೆ ಅಂತರದಲ್ಲಿ ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸಬಲ್ಲದು. ಗುರಿಯ ಮೇಲೆ ಹಾರಾಡುವ ಮತ್ತು ನಂತರ ಬೆನ್ನಟ್ಟಿ ಗುರಿಯ ಮೇಲೆ ಅಪ್ಪಳಿಸುವ ಸಾಮರ್ಥ್ಯದಿಂದಾಗಿ ಇದನ್ನು ಬೆನ್ನಟ್ಟಿ ಹೊಡೆಯುವ ಶಸ್ತ್ರಾಸ್ತ್ರ ಎಂದು ಕರೆಯಲಾಗುತ್ತದೆ. ಇಂತಹ 120 ಡ್ರೋನ್ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲಾಗಿದೆ.
ಸೋಲಾರ್ ಇಂಡಸ್ಟ್ರೀಸ್ ಇದು ಎಕನಾಮಿಕ್ ಎಕ್ಸ್ ಪ್ಲೋಸಿವ್ಸ್ ಲಿಮಿಟೆಡ್ (ಇಇಎಲ್) ಹೆಸರಿನ ಕಂಪನಿಯ 100 ಪ್ರತಿಶತ ಅಂಗಸಂಸ್ಥೆಯಾಗಿದೆ. ಇಂಥ 420 ಬೆನ್ನಟ್ಟಿ ಹೊಡೆಯುವ ಡ್ರೋನ್ಗಳನ್ನು ತಯಾರಿಸಿ ಕೊಡುವಂತೆ ಭಾರತೀಯ ಸೇನೆಯು ಈ ಕಂಪನಿಗೆ ಆರ್ಡರ್ ನೀಡಿದೆ.
ಬೆನ್ನಟ್ಟಿ ಹೊಡೆಯುವ ಶಸ್ತ್ರಾಸ್ತ್ರಗಳು ಎಂದರೇನು?: ಆತ್ಮಹತ್ಯಾ ಡ್ರೋನ್, ಕಮಿಕಾಜೆ ಡ್ರೋನ್ ಅಥವಾ ಸ್ಫೋಟಿಸುವ ಡ್ರೋನ್ ಎಂದೂ ಕರೆಯಲ್ಪಡುವ ಬೆನ್ನಟ್ಟಿ ಹೊಡೆಯುವ ಶಸ್ತ್ರಾಸ್ತ್ರವು ಅಂತರ್ನಿರ್ಮಿತ ಸಿಡಿತಲೆಯನ್ನು ಹೊಂದಿರುವ ಒಂದು ರೀತಿಯ ವೈಮಾನಿಕ ಶಸ್ತ್ರಾಸ್ತ್ರವಾಗಿದೆ. ಇದು ಗುರಿಯನ್ನು ಪತ್ತೆಹಚ್ಚುವವರೆಗೆ ಗುರಿಯ ಪ್ರದೇಶದ ಸುತ್ತಲೂ ಹಾರಾಡುತ್ತದೆ ಮತ್ತು ಗುರಿಯ ಮೇಲೆ ಸಿಡಿತಲೆಯನ್ನು ಅಪ್ಪಳಿಸುತ್ತದೆ.
ಬೆನ್ನಟ್ಟಿ ಹೊಡೆಯುವ ಶಸ್ತ್ರಾಸ್ತ್ರಗಳು ಕ್ರೂಸ್ ಕ್ಷಿಪಣಿಗಳು ಮತ್ತು ಮಾನವರಹಿತ ಯುದ್ಧ ವೈಮಾನಿಕ ವಾಹನಗಳ (ಯುಸಿಎವಿಗಳು ಅಥವಾ ಯುದ್ಧ ಡ್ರೋನ್ಗಳು) ಗುಣಲಕ್ಷಣಗಳ ಸಂಯೋಜನೆಯಾಗಿವೆ. ಇವುಗಳನ್ನು ಗುರಿ ಪ್ರದೇಶದ ಸುತ್ತಲೂ ತುಲನಾತ್ಮಕವಾಗಿ ದೀರ್ಘಕಾಲದವರೆಗೆ ಹಾರಾಡುವಂತೆ ವಿನ್ಯಾಸಗೊಳಿಸಲಾಗಿರುವುದರಿಂದ ಇವು ಕ್ರೂಸ್ ಕ್ಷಿಪಣಿಗಳಿಗಿಂತ ಭಿನ್ನವಾಗಿವೆ.
ನೆಲದ ಮೇಲೆ ಚಲಿಸುವ ವಾಹನಗಳು, ವಿಮಾನಗಳು, ಹಡಗುಗಳು ಸೇರಿದಂತೆ ವಿವಿಧ ಪ್ಲಾಟ್ ಫಾರ್ಮ್ಗಳಿಂದ ಅಥವಾ ಸಣ್ಣ ಪ್ರಮಾಣದಲ್ಲಿ ಈ ಬೆನ್ನಟ್ಟಿ ಹೊಡೆಯುವ ಶಸ್ತ್ರಾಸ್ತ್ರಗಳನ್ನು ಗುರಿಯೆಡೆಗೆ ಹಾರಿಸಬಹುದು. ಉಡಾವಣೆಯ ನಂತರ ಈ ರಾಕೆಟ್ ಪೂರ್ವನಿರ್ಧರಿತ ಪ್ರದೇಶದ ಮೇಲೆ ದೀರ್ಘಕಾಲದವರೆಗೆ ಚಲಿಸಬಹುದು, ಗುರಿ ಕಾಣಿಸಿಕೊಳ್ಳುವವರೆಗೆ ಅಥವಾ ಆಪರೇಟರ್ ಗುರಿಯನ್ನು ನಿಗದಿಪಡಿಸುವವರೆಗೆ ಕಾಯಬಹುದು.
ಆನ್ ಬೋರ್ಡ್ ಸಂವೇದಕಗಳನ್ನು ಬಳಸಿಕೊಂಡು ಆಪರೇಟರ್ಗಳು ಅಥವಾ ಸ್ವಯಂಚಾಲಿತ ಅಲ್ಗಾರಿದಮ್ಗಳು ಸಂಭಾವ್ಯ ಗುರಿಗಳನ್ನು ಗುರುತಿಸುತ್ತವೆ ಮತ್ತು ಟ್ರ್ಯಾಕ್ ಮಾಡುತ್ತವೆ. ಒಮ್ಮೆ ಗುರಿಯನ್ನು ಗೊತ್ತುಪಡಿಸಿದ ನಂತರ, ಶಸ್ತ್ರಾಸ್ತ್ರವು ತಾನು ಹೊಂದಿರುವ ಸಿಡಿತಲೆಯೊಂದಿಗೆ ಗುರಿಯನ್ನು ನಾಶಪಡಿಸಲು ಹೈಸ್ಪೀಡ್ ಡೈವ್ಗೆ ಪರಿವರ್ತನೆಗೊಳ್ಳುತ್ತದೆ.
ಬೆನ್ನಟ್ಟಿ ಹೊಡೆಯುವ ಮೂರು ಮಾದರಿಯ ಡ್ರೋನ್ಗಳು ಹೀಗಿವೆ: ಅಲ್ಪ ವ್ಯಾಪ್ತಿ, ಮಧ್ಯಮ ಶ್ರೇಣಿ ಮತ್ತು ದೀರ್ಘ ವ್ಯಾಪ್ತಿ.
ಅಲ್ಪ ವ್ಯಾಪ್ತಿಯ ಶಸ್ತ್ರಾಸ್ತ್ರಗಳು ಸಾಮಾನ್ಯವಾಗಿ 10 ರಿಂದ 20 ಕಿಮೀ ವ್ಯಾಪ್ತಿಯನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಯುದ್ಧತಂತ್ರದ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಮಧ್ಯಮ ಶ್ರೇಣಿಯ ಬೆನ್ನಟ್ಟಿ ಹೊಡೆಯುವ ಶಸ್ತ್ರಾಸ್ತ್ರಗಳು 100 ಕಿಮೀ ದೂರದವರೆಗೆ ಚಲಿಸಬಹುದು.
ಯಾವೆಲ್ಲ ದೇಶಗಳು ಬೆನ್ನಟ್ಟಿ ಹೊಡೆಯುವ ಶಸ್ತ್ರಾಸ್ತ್ರಗಳನ್ನು ಹೊಂದಿವೆ?: 1980 ರ ದಶಕದಲ್ಲಿ ಮೊದಲ ಬಾರಿಗೆ ಮೇಲ್ಮೈಯಿಂದ ಗಾಳಿಯಲ್ಲಿ ಕ್ಷಿಪಣಿಗಳ (ಎಸ್ಎಎಂ) ವಿರುದ್ಧ ದಾಳಿ ನಡೆಸುವ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಯಿತು. 1990 ರ ದಶಕದಲ್ಲಿ ಹಲವಾರು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಇವುಗಳನ್ನು ನಿಯೋಜಿಸಲಾಗಿತ್ತು. 2000 ರ ದಶಕದಲ್ಲಿ, ತುಲನಾತ್ಮಕವಾಗಿ ದೀರ್ಘ-ಶ್ರೇಣಿಯ ದಾಳಿಗಳು ಮತ್ತು ಅಗ್ನಿಶಾಮಕ ಬೆಂಬಲದಿಂದ ಹಿಡಿದು ಬ್ಯಾಕ್ ಪ್ಯಾಕ್ನಲ್ಲಿ ಹೊಂದಿಕೊಳ್ಳುವ ಯುದ್ಧತಂತ್ರದ, ಬಹಳ ಕಡಿಮೆ ವ್ಯಾಪ್ತಿಯ ಯುದ್ಧಭೂಮಿ ವ್ಯವಸ್ಥೆಗಳವರೆಗೆ ಹೆಚ್ಚುವರಿ ಕಾರ್ಯಾಚರಣೆಗಳಿಗಾಗಿ ಬೆನ್ನಟ್ಟಿ ಹೊಡೆಯುವ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಾಯಿತು.
ಆರಂಭದಲ್ಲಿ ಇವುಗಳನ್ನು ಬೆನ್ನಟ್ಟಿ ಹೊಡೆಯುವ ಡ್ರೋನ್ಗಳೆಂದು ಕರೆಯಲಾಗುತ್ತಿರಲಿಲ್ಲ. ಬದಲಿಗೆ ಇವನ್ನು 'ಆತ್ಮಹತ್ಯಾ ಮಾನವರಹಿತ ವೈಮಾನಿಕ ವಾಹನಗಳು (ಯುಎವಿಗಳು)' ಅಥವಾ 'ಅಲೆದಾಡುವ ಕ್ಷಿಪಣಿಗಳು' ಎಂದು ಕರೆಯಲಾಗುತ್ತಿತ್ತು. ಇವುಗಳ ಮೂಲ ಯಾವುದೆಂಬ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ವಿಫಲಗೊಂಡಿದ್ದ ಯುಎಸ್ ಎಜಿಎಂ -136 ಟಾಸಿಟ್ ರೇನ್ ಬೋ ಪ್ರೋಗ್ರಾಂ ಅಥವಾ 1980 ರ ಆರಂಭಿಕ ಇಸ್ರೇಲಿ ಡೆಲಿಲಾ ಶಸ್ತ್ರಾಸ್ತ್ರಗಳು ಈ ಬೆನ್ನಟ್ಟಿ ಹೊಡೆಯುವ ಡ್ರೋನ್ಗಳ ಮೂಲವೆಂದು ಕೆಲ ಮೂಲಗಳು ಉಲ್ಲೇಖಿಸಿವೆ. ಇರಾನಿನ ಅಬಾಬಿಲ್ -1 ಅನ್ನು 1980 ರ ದಶಕದಲ್ಲಿ ಉತ್ಪಾದಿಸಲಾಗಿತ್ತು. ಆದರೆ ಅದರ ನಿಖರವಾದ ಉತ್ಪಾದನಾ ದಿನಾಂಕ ತಿಳಿದಿಲ್ಲ. ಇಸ್ರೇಲಿ ಐಎಐ ಹಾರ್ಪಿಯನ್ನು 1980 ರ ದಶಕದ ಉತ್ತರಾರ್ಧದಲ್ಲಿ ತಯಾರಿಸಲಾಗಿತ್ತು.
ಐಎಐ ಹಾರ್ಪಿಯಲ್ಲದೆ, ಇಸ್ರೇಲ್ ಐಎಐ ಹರೋಪ್ ಎಂಬ ಮತ್ತೊಂದು ಆತ್ಮಾಹುತಿ ಡ್ರೋನ್ ಅನ್ನು ತಯಾರಿಸಿದೆ. ಐಎಐ ಹಾರ್ಪಿ ಎಂಬುದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ತಯಾರಿಸಿದ ಯುದ್ಧೋಪಕರಣ ಕ್ಷಿಪಣಿಯಾಗಿದೆ. ಹಾರ್ಪಿಯನ್ನು ರಾಡಾರ್ ವ್ಯವಸ್ಥೆಗಳ ಮೇಲೆ ದಾಳಿ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಎಸ್ಇಎಡಿ ಪಾತ್ರಕ್ಕೆ ಸೂಕ್ತವಾಗಿದೆ. ಇದು ದೊಡ್ಡ ಗಾತ್ರದ ಸ್ಫೋಟಕ ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು. ಹಾರ್ಪಿಯನ್ನು ದಕ್ಷಿಣ ಕೊರಿಯಾ, ಭಾರತ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳಿಗೆ ಮಾರಾಟ ಮಾಡಲಾಗಿದೆ.
ಐಎಐ ಹರೋಪ್ ಆರು ಗಂಟೆಗಳ ಕಾಲ ಗಾಳಿಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ ಮತ್ತು ಹಿಮ್ಮುಖ ಹಾಗೂ ಮುಮ್ಮುಖವಾಗಿ 200 ಕಿ.ಮೀ ವ್ಯಾಪ್ತಿಯೊಳಗೆ ಚಲಿಸಬಲ್ಲದು. ಇದು ಐಎಐ ಹಾರ್ಪಿಯ ಮುಂದುವರಿದ ಆವೃತ್ತಿಯಾಗಿದೆ ಮತ್ತು ನೆಲ ಅಥವಾ ಸಮುದ್ರ ಆಧಾರಿತ ಕ್ಯಾನಿಸ್ಟರ್ಗಳ ಮೂಲಕ ಉಡಾಯಿಸಲಾಗುತ್ತದೆ. ಇದನ್ನು ವಾಯು ಉಡಾವಣೆಗೆ ಕೂಡ ಪರಿವರ್ತಿಸಬಹುದು. ಹರೋಪ್ ಮ್ಯಾನ್-ಇನ್-ದಿ-ಲೂಪ್ ಮೋಡ್ ಅನ್ನು ಬಳಸುತ್ತದೆ ಹಾಗೂ ರಿಮೋಟ್ ಆಪರೇಟರ್ನಿಂದ ಇದನ್ನು ನಿಯಂತ್ರಿಸಲಾಗುತ್ತದೆ. ಹರೋಪ್ ಆಪರೇಟರ್ ವಿಮಾನದ ಎಲೆಕ್ಟ್ರೋ-ಆಪ್ಟಿಕಲ್ ಸೆನ್ಸರ್ ನಿಂದ ಪತ್ತೆಯಾದ ಸ್ಥಿರ ಅಥವಾ ಚಲಿಸುವ ಗುರಿಗಳನ್ನು ಹೊಡೆಯಬಹುದು.
ನಾಗಾಸ್ತ್ರ-1ರ ಸಾಮರ್ಥ್ಯಗಳೇನು?: ನಾಗಾಸ್ತ್ರ-1 ರಕ್ಷಣಾ ಸಚಿವಾಲಯದ ಮೇಡ್ ಇನ್ ಇಂಡಿಯಾ ಯೋಜನೆಯ ಸಂಕೇತವಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್ ಗಳಿಂದ ಚಾಲಿತವಾದ ಸ್ಥಿರ-ರೆಕ್ಕೆಯ ಯುದ್ಧ ಡ್ರೋನ್ ಆಗಿದೆ. ಇದನ್ನು 15 ಕಿ.ಮೀ ವ್ಯಾಪ್ತಿಯಲ್ಲಿ ಆಪರೇಟರ್ ಮೂಲಕ ನಿಯಂತ್ರಿಸಬಹುದು ಮತ್ತು ಗರಿಷ್ಠ 30 ಕಿ.ಮೀ ಹಾರಾಟ ದೂರವನ್ನು ಹೊಂದಿದೆ. ಜಿಪಿಎಸ್ ಮಾರ್ಗದರ್ಶನದಲ್ಲಿ ಪೂರ್ವಲೋಡ್ ಮಾಡಿದ ಗ್ರಿಡ್ ನಿರ್ದೇಶಾಂಕಗಳ ಆಧಾರದ ಮೇಲೆ ಡ್ರೋನ್ ನಿಗದಿತ ಗುರಿಯನ್ನು ಹೊಡೆಯಬಹುದು. ಇದು ಗುರಿಯನ್ನು ಕಂಡುಹಿಡಿಯಲು ವಿಫಲವಾದರೆ, ಇದನ್ನು ಮರಳಿ ಕರೆಸಿಕೊಂಡು ಇದರಲ್ಲಿನ ಅಂತರ್ನಿರ್ಮಿತ ಪ್ಯಾರಾಚೂಟ್ ಬಳಸಿ ಸಾಫ್ಟ್ ಲ್ಯಾಂಡಿಂಗ್ ಮಾಡಬಹುದು.
ಆದಾಗ್ಯೂ, ನಾಗಾಸ್ತ್ರ -1 ಭಾರತೀಯ ರಕ್ಷಣಾ ಪಡೆಗಳು ಹೊಂದಿರುವ ಇಂಥ ಮೊದಲ ಆತ್ಮಹತ್ಯಾ ಡ್ರೋನ್ ಅಲ್ಲ ಎಂಬುದು ಗಮನಾರ್ಹ. ಕಳೆದ ವರ್ಷ ಮೇ ತಿಂಗಳಲ್ಲಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಪಿಸಿ ಕಟೋಚ್ ಅವರು ಎಸ್ಪಿಯ ಏವಿಯೇಷನ್ನಲ್ಲಿ ಬರೆದ ಲೇಖನದ ಪ್ರಕಾರ, ಭಾರತೀಯ ವಾಯುಪಡೆಯು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ತಯಾರಿಸಿದ ಎಎಲ್ಎಸ್ -50 ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (ವಿಟಿಒಎಲ್) ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಇಸ್ರೇಲ್ ಭಾರತೀಯ ರಕ್ಷಣಾ ಪಡೆಗಳಿಗೆ ಐಎಐ ಹಾರ್ಪಿ ಮತ್ತು ಐಎಐ ಹರೋಪ್ಗಳನ್ನು ಸಹ ಪೂರೈಸಿದೆ. ಆದರೆ ನಾಗಾಸ್ತ್ರ -1 ರ ವಿಶೇಷತೆಯೆಂದರೆ ಇದು ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾದ ಮೊದಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕಮಿಕಾಜೆ ಡ್ರೋನ್ ಆಗಿದೆ.
ಇದನ್ನೂ ಓದಿ : 2,500 ವರ್ಷಗಳ ಹಿಂದೆ ಭೂಕಂಪದಿಂದ ಗಂಗಾ ನದಿ ದಿಕ್ಕು ಬದಲಾಗಿತ್ತು: ಅಧ್ಯಯನ ವರದಿ - Ganga River