ಹಾವೇರಿ : ರಾಜ್ಯ ಸರ್ಕಾರ ರಾಜ್ಯದ ವಿವಿಧೆಡೆ 50 ಅಕ್ಕ ಕೆಫೆ ನಿರ್ಮಿಸಿದೆ. ಜಿಲ್ಲೆಯ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಿರ್ಮಾಣಗೊಂಡಿರುವ ಅಕ್ಕ ಕೆಫೆಯನ್ನು ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡಲಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ನೇತೃತ್ವದಲ್ಲಿ ನಡೆಯುವ ಅಕ್ಕ ಕೆಫೆ ನಾಳೆಯಿಂದ ಪ್ರಾರಂಭವಾಗಲಿದೆ.
ಹಾವೇರಿಯ ಜಿಲ್ಲಾ ಪಂಚಾಯತ್ ಆವರಣದಲ್ಲಿ ಸುಮಾರು 15 ಲಕ್ಷ ರೂಪಾಯಿ ಅನುದಾನದಲ್ಲಿ ಅಕ್ಕ ಕೆಫೆಯನ್ನ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಪ್ರಥಮ ಭಾರಿಗೆ ಲಿಂಗತ್ವ ಅಲ್ಪಸಂಖ್ಯಾತರು ಇದರ ನಿರ್ವಹಣೆ ಮಾಡುತ್ತಾರೆ. ಈ ಕೆಫೆಯಲ್ಲಿ ಅಡುಗೆ ಮಾಡುವುದು, ಸರ್ವ್ ಮಾಡೋದು ಸೇರಿದಂತೆ ಎಲ್ಲವೂ ಸಹ ಅಕ್ಕ ಕೆಫೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರೇ ಮಾಡುತ್ತಾರೆ.
ಅಕ್ಕ ಕೆಫೆಯಲ್ಲಿ 15 ಜನರು ಲಿಂಗತ್ವ ಅಲ್ಪಸಂಖ್ಯಾತರು ಕೆಲಸ ಮಾಡಲಿದ್ದಾರೆ. ಉತ್ತರ ಕರ್ನಾಟದ ಶೈಲಿಯ ಊಟವನ್ನ ಮಾಡಲಾಗುತ್ತಿದೆ. ಸಾವಯವ ಊಟಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಜಿಲ್ಲಾಡಳಿತ ಲಿಂಗತ್ವ ಅಲ್ಪಸಂಖ್ಯಾತರನ್ನ ಗುರುತಿಸಿ ಈ ಕಾರ್ಯದ ಜವಾಬ್ದಾರಿ ನೀಡಿದೆ.
ಭಿಕ್ಷಾಟನೆ ಮತ್ತು ವೇಶ್ಯಾವಾಟಿಕೆಯಿಂದ ಬದುಕು ಕಟ್ಟಿಕೊಳ್ಳುವಂತವರು ಎಂದು ತಿರಸ್ಕರಿಸುತ್ತಿದ್ದವರನ್ನು ಸಮಾಜಮುಖಿಗಳನ್ನಾಗಿ ಮಾಡಬೇಕು ಅನ್ನೋ ಉದ್ದೇಶದಿಂದ ಅಕ್ಕ ಕೆಫೆ ನಿರ್ವಹಣೆ ಅವರಿಗೆ ನೀಡಲಾಗಿದೆ. ಅಕ್ಕ ಕೆಫೆ ನಾಳೆಯಿಂದ ಉದ್ಘಾಟನೆಯಾಗಲಿದೆ. ಹಾವೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ತಮಗೆ ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಓ ಅಕ್ಷಯ ಶ್ರೀಧರ ಅವರು ಮಾತನಾಡಿ, ''ಅಕ್ಕ ಕೆಫೆಯಲ್ಲಿ ಕೆಲಸ ಮಾಡುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಆರ್ಸಿಟಿ ಎಂಬ ಸಂಸ್ಥೆ ವತಿಯಿಂದ ಬೇಸಿಕ್ ಅಡುಗೆ ಹಾಗೂ ಕ್ಯಾಟರಿಂಗ್ ಟ್ರೈನಿಂಗ್ ನೀಡಿದ್ದೇವೆ. ಈಗಾಗಲೇ ಇಲ್ಲಿಗೆ ಬಂದಿರುವ ಸದಸ್ಯರು ಹೋಟೆಲ್ಗಳಲ್ಲಿ ಕೆಲಸ ಮಾಡಿದವರು. ಆದರೂ ನಾವು ಅವರಿಗೆ ಕೆಫೆಯಲ್ಲಿ ಏನು ಮಾಡಬೇಕು, ಹೇಗೆ ಮಾಡಬೇಕು ಎಂಬುದರ ಟ್ರೈನಿಂಗ್ ಕೊಟ್ಟಿದ್ದೇವೆ. ರಾಜ್ಯ ನೋಡಲ್ ಅಧಿಕಾರಿಗಳನ್ನ ಕರೆಸಿ ಅವರಿಂದಲೂ ಟ್ರೈನಿಂಗ್ ಕೊಡಲು ವ್ಯವಸ್ಥೆ ಮಾಡಿದ್ದೇವೆ. ಸರ್ಕಾರದಿಂದ ಅವರಿಗೆ ಸಾಫ್ಟ್ ಸ್ಕಿಲ್ ಟ್ರೈನಿಂಗ್ ಕೊಟ್ಟಿದ್ದೇವೆ. ಈ ಕೆಫೆ ನಿರ್ಮಾಣಕ್ಕೆ ಸರ್ಕಾರದಿಂದ 15 ಲಕ್ಷ ಬಂದಿದೆ'' ಎಂದರು.
ಇದನ್ನೂ ಓದಿ : ಹಾವೇರಿ ಜಿಪಂನಿಂದ ವಿನೂತನ ಪ್ರಯತ್ನ; ಲಿಂಗತ್ವ ಅಲ್ಪಸಂಖ್ಯಾತರಿಂದ ಅಕ್ಕ ಕೆಫೆ ನಿರ್ವಹಣೆ - AKKA CAFE