ಬೆಂಗಳೂರು: ''ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ಯಾವುದೂ ಇಲ್ಲ. ಎಲ್ಲವೂ ಸುಳ್ಳು'' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿದ ಅವರು, ''ಸಚಿವ ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆಯಾ ಎಂಬ ಪ್ರಶ್ನೆಗೆ ಯಾವುದೂ ಇಲ್ಲ. ಎಲ್ಲವೂ ಸುಳ್ಳು, ಅವೆಲ್ಲಾ ಸುಳ್ಳು. ಯಾವ ಬದಲಾವಣೆಯೂ ಇಲ್ಲ. ಯಾವುದೂ ಇಲ್ಲ'' ಎಂದು ಸ್ಪಷ್ಟಪಡಿಸಿದರು. ''ಊಟಕ್ಕೆ ಸೇರಿದರೆ ಅದನ್ನೇ ಸಭೆ ನಡೆಸಿದ್ದಾರೆ ಎಂದು ಊಹೆ ಮಾಡಿದರೆ ಏನು ಮಾಡಬೇಕು? ನಾವು ಊಟ ಮಾಡಲು ಸೇರಿದ್ದೇವೆ'' ಎಂದು ತಿಳಿಸಿದರು.
ಬಸ್ ದರ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಆರ್.ಅಶೋಕ್ ಸಮಯದಲ್ಲಿ ದರ ಹೆಚ್ಚು ಮಾಡಿದ್ದಾರಲ್ಲ ಅದಕ್ಕೆ ಏನು ಹೇಳಬೇಕು?. ಆ ಬಗ್ಗೆ ರಾಮಲಿಂಗಾ ರೆಡ್ಡಿ ಮಾತನಾಡಿದ್ದಾರೆ'' ಎಂದರು.
ಇದನ್ನೂ ಓದಿ: ಡಿನ್ನರ್ ಮೀಟಿಂಗ್ನಲ್ಲಿ ಏನೂ ಪ್ಲಾನ್ ಇಲ್ಲ, ಅಜೆಂಡಾನೂ ಇಲ್ಲ, ಸುಮ್ಮನೆ ಊಟಕ್ಕೆ ಸೇರಿದ್ದು ಅಷ್ಟೇ : ಸಚಿವ ಹೆಚ್ ಸಿ ಮಹದೇವಪ್ಪ
ಸಿಎಂ ಜೊತೆ ಊಟ ಇದೇ ಮೊದಲೇನಲ್ಲ ಎಂದ ಸತೀಶ್ ಜಾರಕಿಹೊಳಿ: ಇದೇ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ದು ಇದೇ ಮೊದಲೇನಲ್ಲ. ಕಳೆದ ಇಪ್ಪತ್ತು ತಿಂಗಳಲ್ಲಿ ಹತ್ತಾರು ಬಾರಿ ನಾವು ಸೇರಿದ್ದೇವೆ ಎಂದು ಹೇಳಿದ್ದರು.
ಕುವೆಂಪು ನಗರದ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ನಾವು ಅವರ ಮನೆಗೆ ಹೋಗುತ್ತೇವೆ. ಅವರು ನಮ್ಮ ಮನೆಗೆ ಬರುತ್ತಾರೆ. ಸಿಎಂ ಜೊತೆಗೆ ಸಚಿವರು ಮಾತನಾಡಬೇಕು ಎಂದರು. ಹಾಗಾಗಿ, ಎಲ್ಲರೂ ಸೇರಿ ಹೊಸ ವರ್ಷದ ಸಂದರ್ಭದಲ್ಲಿ ಸೇರಿದ್ದೇವೆ. ರಾಜಕೀಯ, ಸಂಘಟನೆ ಬಗ್ಗೆ ಚರ್ಚೆ ಆಗಿವೆ. ನಮಗೆ ಯಾವುದೇ ಒಪ್ಪಂದದ ಬಗ್ಗೆ ಗೊತ್ತಿಲ್ಲ. 2028ರಲ್ಲಿ ಸರ್ಕಾರ ತರುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಇನ್ನು ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ, ಬದಲಾವಣೆ ಮಾಡುವ ವ್ಯಾಪ್ತಿಯೂ ನಮ್ಮ ಬಳಿ ಬರಲ್ಲ. ಈ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ'' ಎಂದು ತಿಳಿಸಿದರು.
''ಒಬ್ಬರಿಗೆ ಒಂದೇ ಹುದ್ದೆ ಎನ್ನುವುದು ಇದೆ. ಒಬ್ಬರಿಗೆ ಎರಡು ಹುದ್ದೆ ಕೊಟ್ಟ ಉದಾಹರಣೆಗಳೂ ಇವೆ. ಸಾಮರ್ಥ್ಯ, ಅನಿವಾರ್ಯತೆ ಇದ್ದಾಗ ಕೊಟ್ಟ ಉದಾಹರಣೆಗೆ ಇದೆ. ಪಕ್ಷದ ನಿರ್ಧಾರವನ್ನು ನಾವು ಪ್ರಶ್ನೆ ಮಾಡಲು ಆಗಲ್ಲ. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಊಟದ ವೇಳೆ ಚರ್ಚೆಯೇ ಆಗಿಲ್ಲ. ಸದ್ಯ ಡಿ.ಕೆ.ಶಿವಕುಮಾರ ಅಧ್ಯಕ್ಷರಾಗಿದ್ದಾರೆ. ಹೀಗಿರುವಾಗ ನಾವು ಅಧ್ಯಕ್ಷರಾಗುತ್ತೇವೆ ಎನ್ನುವುದು ಸೂಕ್ತವಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಮಯ ಬಂದಾಗ ನೋಡೋಣ'' ಎಂದರು.
ಹೆಬ್ಬಾಳಕರ್ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ನನ್ನ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬೆಳಗಾವಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗಾಗಿ ಕಳೆದ ಆರು ತಿಂಗಳ ಹಿಂದೆಯೇ ಎಲ್ಲರೂ ಸಹಮತದಿಂದ ಒಂದೇ ಹೆಸರು ಕಳಿಸಿದ್ದೇವೆ. ಶೀಘ್ರವೇ ಬೆಳಗಾವಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗಲಿದೆ ಎಂದು ಪ್ರತಿಕ್ರಿಯಿಸಿದರು.
ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಶತಮಾನೋತ್ಸವದಲ್ಲಿ ಸಮಿತಿಗಳನ್ನು ರಚಿಸಲಾಗಿತ್ತು. ಎಲ್ಲರೂ ತಮ್ಮ ತಮ್ಮ ಕೆಲಸ ಮಾಡಿದ್ದಾರೆ. ನಮಗೆ ಜನರನ್ನು ಸೇರಿಸುವ ಜವಾಬ್ದಾರಿ ಇತ್ತು. ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಡಿ.ಕೆ. ಶಿವಕುಮಾರ ಅವರು ಶೋ ಆಗಿದ್ದಾರೆ ಅಷ್ಟೇ, ಹೀಗಾಗಿ ಅಧ್ಯಕ್ಷರು ಹೈಲೈಟ್ ಆಗುವುದು ಸ್ವಾಭಾವಿಕ. ಬೆಳಗಾವಿ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸತೀಶ ಜಾರಕಿಹೊಳಿ ಸಮಜಾಯಿಷಿ ನೀಡಿದರು.