ಬೆಳಗಾವಿ: "ಕ್ಯಾನ್ಸರ್ ರೋಗವು ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವುದು ಕಳವಳಕಾರಿ ಸಂಗತಿ. ಇದಕ್ಕೆ ಹಲವು ಕಾರಣಗಳಿದ್ದು, ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ಹಾಗಾಗಿ, ಸದೃಢ ಆರೋಗ್ಯ ಮತ್ತು ಸೂಕ್ತ ಚಿಕಿತ್ಸೆಯ ಬಗ್ಗೆ ಜನರಲ್ಲಿ ಪರಿಣಮಕಾರಿಯಾಗಿ ಅರಿವು ಮೂಡಿಸುವ ತುರ್ತು ಅಗತ್ಯತೆ ಇದೆ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಕೆಎಲ್ಇ ಡಾ. ಸಂಪತ್‌ಕುಮಾರ ಶಿವಣಗಿ ನೂತನ ಕ್ಯಾನ್ಸರ್ ಆಸ್ಪತ್ರೆಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, "ವಿಶ್ವದ ಜನಸಂಖ್ಯೆಯಲ್ಲಿ ಪ್ರತಿ ವರ್ಷ 2 ಕೋಟಿ ಜನ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದರಲ್ಲಿ 97 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಕೂಡ ಕ್ಯಾನ್ಸರ್ ಆಘಾತಕಾರಿಯಾಗಿ ಹರಡುತ್ತಿದೆ. ಪ್ರತಿ 1 ಲಕ್ಷ ಜನರಲ್ಲಿ 100 ಜನರಿಗೆ ಕ್ಯಾನ್ಸರ್ ಬರುತ್ತಿದೆ. 2025ರಲ್ಲಿ ಕ್ಯಾನ್ಸರ್ ರೋಗ ಹರಡುವ ದರವು ಶೇ.13ರಷ್ಟು ಹೆಚ್ಚಲಿದೆ ಎಂದು ಐಸಿಎಂಆರ್ ಸಂಶೋಧನೆಯಿಂದ ಗೊತ್ತಾಗಿದೆ" ಎಂದರು.
"ಕ್ಯಾನ್ಸರ್ ರೋಗಿಗಳ ದೈಹಿಕ ಮತ್ತು ಮಾನಸಿಕ ಅಗತ್ಯಗಳನ್ನು ಪರಿಹರಿಸುವುದು ಮತ್ತು ಸಮಗ್ರ ಆರೈಕೆ ಮಾಡುವುದು ಆರೋಗ್ಯ ವೃತ್ತಿಪರರ ಪ್ರಮುಖ ಕರ್ತವ್ಯವಾಗಿದೆ. ವೈದ್ಯರು ಹೇಳುವ ಪ್ರತಿಯೊಂದು ಸಹಾನುಭೂತಿ ಮತ್ತು ವಿಶ್ವಾಸದ ಮಾತುಗಳು ರೋಗಿಯ ಜೀವನವನ್ನು ಉತ್ತಮವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ" ಕರೆ ನೀಡಿದರು.
"ವೈದ್ಯಕೀಯ ವೃತ್ತಿಗೆ ತನ್ನದೇಯಾದ ಘನತೆ ಮತ್ತು ಜವಾಬ್ದಾರಿ ಇದೆ. ವೃತ್ತಿಪರ ವೈದ್ಯರು ನಿಮ್ಮಲ್ಲಿಗೆ ಬರುವ ರೋಗಿಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಯಾವುದೇ ರೋಗಕ್ಕೆ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿ ವೈದ್ಯರ ಮೇಲಿದೆ. ಇನ್ನು ಕೇಂದ್ರ ಸರ್ಕಾರ ಎಲ್ಲ ವರ್ಗದ ಜನರಿಗೆ ಸಮರ್ಪಕ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಆಯುಷ್ ಮಾನ್ ಸೇರಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು" ಎಂದು ಸಲಹೆ ನೀಡಿದರು.
ತಪ್ಪು ಆಹಾರ ಪದ್ಧತಿಯಿಂದ ರೋಗಗಳಿಗೆ ತುತ್ತಾಗುತ್ತಿದ್ದೇವೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, "ರಾಷ್ಟ್ರಪತಿ ದ್ರೌಪದಿ ಅವರು ಆದಿವಾಸಿಗಳು ಮತ್ತು ಹಿಂದುಳಿದವರ ಪರ ಸಾಕಷ್ಟು ಹೋರಾಡಿದ್ದಾರೆ. ಒಡಿಶಾದಲ್ಲಿ ಅತ್ಯುತ್ತಮ ಶಾಸಕಿ ಪ್ರಶಸ್ತಿ ಪಡೆದಿದ್ದರು. ಆದಿವಾಸಿ ಸಮುದಾಯದ ಪ್ರಥಮ ಮಹಿಳೆ ರಾಷ್ಟ್ರಪತಿ ಆಗಿದ್ದು ನಮ್ಮೆಲ್ಲರ ಹೆಮ್ಮೆ. ಇವತ್ತಿನ ಜೀವನಶೈಲಿ, ತಪ್ಪು ಆಹಾರ ಪದ್ಧತಿಯಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಸರ್ವಜ್ಞ ಅವರು ತಮ್ಮ ವಚನದ ಮೂಲಕ ಆಹಾರ ಪದ್ಧತಿ ಬಗ್ಗೆ ಆಗಲೇ ಎಚ್ಚರಿಸಿದ್ದರು. ಈಗ 12.8ರಷ್ಟು ಜನಸಂಖ್ಯೆ ಕ್ಯಾನ್ಸರ್ ನಿಂದ ಬಳಲುತ್ತಿದೆ. ರೋಗ ಕಂಡು ಹಿಡಿದು, ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ, ಕ್ಯಾನ್ಸರ್ ಗುಣಪಡಿಸಬಹುದು" ಎಂದರು.
"ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನ ಆರ್ಥಿಕ ರಾಜಧಾನಿಯಾಗಿ ಹೊರ ಹೊಮ್ಮುತ್ತಿದೆ. ವಿಶ್ವದ 5ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಭವಿಷ್ಯದಲ್ಲಿ 3ನೇ ದೇಶವಾಗಲಿದೆ. ಅಲ್ಲದೇ ಆರೋಗ್ಯವಂತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಕೆಎಲ್ಇ ಶಿವಣಗಿ ಕ್ಯಾನ್ಸರ್ ಆಸ್ಪತ್ರೆ ಈ ಭಾಗದಲ್ಲಿ ಬಹುದೊಡ್ಡ ಕೊಡುಗೆ ನೀಡಲಿದೆ" ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಮಾತನಾಡಿದರು. ದಾನಿಗಳಾದ ಡಾ. ಸಂಪತ್ ಕುಮಾರ ಶಿವಣಗಿ ಹಾಗೂ ಅವರ ಧರ್ಮಪತ್ನಿ ಡಾ. ಉದಯಾ ಶಿವಣಗಿ ಸೇರಿ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭಾಗವಹಿಸಿದ್ದರು. ಕೆಎಲ್ಇ ಅಧ್ಯಕ್ಷ ಮಹಾಂತೇಶ ಕೌಜಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: KLE ಕ್ಯಾನ್ಸರ್ ಆಸ್ಪತ್ರೆಗೆ 8 ಕೋಟಿ ರೂ. ದೇಣಿಗೆ: ಅಮೆರಿಕದಲ್ಲಿ ಛಾಪು ಮೂಡಿಸಿದ ಬೆಳಗಾವಿ ಹೆಮ್ಮೆಯ ಪುತ್ರನ ಸಾಧನೆ ಹೀಗಿದೆ!