ತಿರುವನಂತಪುರಂ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗಗನ್‌ಯಾನ್ ಮಿಷನ್‌ಗಾಗಿ ತರಬೇತಿ ಪಡೆಯುತ್ತಿರುವ ನಾಲ್ವರು ಪರೀಕ್ಷಾ ಪೈಲಟ್‌ಗಳ ಹೆಸರನ್ನು ಬಹಿರಂಗಪಡಿಸಲಿದ್ದಾರೆ. ಈ ಮೂಲಕ ಕೇರಳವು ಹೊಸ ಶಕೆ ಆರಂಭಿಸಲು ಸನ್ನದ್ಧವಾಗಿದೆ.
ಕೇರಳ ಮೂಲದ ಸುಖೋಯ್ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಿ. ನಾಯರ್ ಅವರು ಕಳೆದ ಕೆಲವು ವರ್ಷಗಳಿಂದ ಭಾರತದ ಬಹು ಮಹತ್ವಾಕಾಂಕ್ಷೆಯ ಹಾಗೂ ಕನಸಿನ ಮಿಷನ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಲ್ವರು ಪೈಲಟ್‌ಗಳು ಈಗಾಗಲೇ ರಷ್ಯಾದಲ್ಲಿ ತಮ್ಮ ತರಬೇತಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಈಗ ಇಸ್ರೋದ ಘಟಕದಲ್ಲಿ ಗಗನಯಾನ್ ಮಿಷನ್‌ನ ಪರೀಕ್ಷೆಗಳ ಪಾಲ್ಗೊಳ್ಳುತ್ತಿದ್ದಾರೆ. ಮಿಷನ್‌ನ ಸಂಕೀರ್ಣತೆ ಮತ್ತು ಜಟಿಲತೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಈ ಮೂಲಕ ಅವರೆಲ್ಲ ಗಗನಯಾನಕ್ಕೆ ಸರ್ವ ಸನ್ನದ್ಧರಾಗುತ್ತಿದ್ದಾರೆ.
ಪರೀಕ್ಷಾರ್ಥ ಪೈಲಟ್‌ಗಳ ತಂಡದಲ್ಲಿ ಕೇರಳದವರೂ ಇದ್ದಾರೆ ಎಂಬ ಸುದ್ದಿ ಹೊರಬಿದ್ದಾಗಿನಿಂದಲೂ ಆ ಅಧಿಕಾರಿ ಯಾರೆಂದು ಪತ್ತೆ ಹಚ್ಚುವ ಕೆಲಸ ಜೋರಾಗಿಯೇ ಸಾಗಿದೆ. ತಿರುವನಂತಪುರಂನಲ್ಲಿರುವ ವಿಎಸ್‌ಎಸ್‌ಸಿಗೆ ಪ್ರಧಾನಿ ಭೇಟಿ ನೀಡಿ ಗಗನ್‌ಯಾನ್ ಮಿಷನ್‌ನ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಮಂಗಳವಾರ ಬೆಳಗ್ಗೆ 10.45ಕ್ಕೆ ವಿಎಸ್ ಎಸ್ ಸಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಒಂದು ಗಂಟೆ ಅಲ್ಲಿಯೇ ಕಳೆಯಲಿದ್ದಾರೆ. ಈ ವೇಳೆ 1800 ಕೋಟಿ ರೂಗಳ ಮೂರು ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ಅವರು ಗಗನಯಾನದ ತಯಾರಿ, ಮುಂದಿನ ಕೆಲಸ ಏನು ಎಂಬ ಬಗ್ಗೆ ಇಸ್ರೋ ವಿಜ್ಞಾನಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ಗಗನಯಾನ ಮಿಷನ್ ಯಶಸ್ವಿಯಾಗಲಿ ಎಂದು ಅಲ್ಲಿನ ಸಿಬ್ಬಂದಿಗೆ ಹುರುಪು ಹಾಗು ಆತ್ಮವಿಶ್ವಾಸ ತುಂಬುವ ಕೆಲಸ ಮಾಡುವ ಸಾಧ್ಯತೆ ಇದೆ.