ಬೆಂಗಳೂರು: ಸುಗಮ ಸಂಚಾರ ಹಾಗೂ ವಾಹನ ಸವಾರರ ಪ್ರಯಾಣದ ಸಮಯದಲ್ಲಿನ ವಿಳಂಬವನ್ನು ಕಡಿಮೆಗೊಳಿಸುವ ಉದ್ದೇಶದಿಂದ ನಗರದ 123 ಪ್ರಮುಖ ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಾಧರಿತ ಸಿಗ್ನಲ್ ಕಂಟ್ರೋಲ್ ಸಿಸ್ಟಂ ಅಳವಡಿಕೆಯನ್ನು ಪೂರ್ಣಗೊಳಿಸಲಾಗಿದೆ.
ಈ ಹಿಂದೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದ ಬೆಂಗಳೂರು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ (BATCS) ಯೋಜನೆಯ ಮುಂದುವರೆದ ಭಾಗವಾಗಿ ನಗರದ 165 ಜಂಕ್ಷನ್‌ಗಳ ಪೈಕಿ 123 ಕಡೆಗಳಲ್ಲಿ ನೂತನ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಸುಗಮ ಸಂಚಾರ ಮಾತ್ರವಲ್ಲದೆ ಪ್ರಯಾಣದ ಸಮಯವೂ ಸಹ ಕಡಿಮೆಯಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
BATCS ವ್ಯವಸ್ಥೆ ಹೇಗೆ ಭಿನ್ನ?: ರಸ್ತೆಗಳಲ್ಲಿ ಉಂಟಾಗುವ ಅನಿರೀಕ್ಷಿತ ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲಕರವಾಗುಂತೆ CDAC ಸಂಸ್ಥೆ ಅಭಿವೃದ್ಧಿಪಡಿಸಿರುವ CoSiCoSt ATCS ಅಪ್ಲಿಕೇಶನ್ ಅನ್ನು ಈ ವ್ಯವಸ್ಥೆ ಬಳಸಿಕೊಳ್ಳಲಿದೆ. ನಗರದಲ್ಲಿ ಬಳಸಲಾದ ಈ ಹಿಂದಿನ ಸಂಚಾರ ನಿರ್ವಹಣಾ ವ್ಯವಸ್ಥೆಗಿಂತ ಭಿನ್ನವಾಗಿರುವ BATCS, ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳಿಂದ ಇನ್‌ಪುಟ್ಸ್ ಗ್ರಹಿಸಿ ಯಾವ ರಸ್ತೆಯಲ್ಲಿ ಎಷ್ಟು ವಾಹನಗಳ ಸಾಂದ್ರತೆಯಿದೆ ಎಂಬುದನ್ನು ತಿಳಿದುಕೊಂಡು ತನ್ನದೇ ವಿಶ್ಲೇಷಣೆ ಮೂಲಕ ಅತ್ಯುತ್ತಮ ಎನಿಸುವ ಆಯ್ಕೆಯನ್ನು ಸಿಗ್ನಲ್‌ಗೆ ರವಾನಿಸುತ್ತದೆ.
ಇದರ ಆಧಾರದಲ್ಲಿ ಸಿಗ್ನಲ್‌ಗಳು ಕಾರ್ಯ ನಿರ್ವಹಿಸುವುದರಿಂದ ವಾಹನ ಸವಾರರು ಅನಾವಶ್ಯಕವಾಗಿ ಸಿಗ್ನಲ್‌ಗಳಲ್ಲಿ ಕಾಯುವುದು ತಪ್ಪುತ್ತದೆ. ಉದಾಹರಣೆಗೆ, ನಿಗದಿತ ಅವಧಿಗೆ ಸಿಗ್ನಲ್ ಅಳವಡಿಸಿಟ್ಟಿರುವುದರಿಂದ ಒಂದು ರಸ್ತೆಯಲ್ಲಿ ಹೆಚ್ಚು ವಾಹನಗಳಿಲ್ಲದ್ದರೂ ಸಹ ರೆಡ್ ಸಿಗ್ನಲ್ ಇರುವುದರಿಂದ ಕಾಯಬೇಕಾಗುತ್ತಿತ್ತು. ಅಥವಾ ಎದುರು ರಸ್ತೆಯಲ್ಲಿ ವಾಹನಗಳೇ ಇರದಿದ್ದರೂ ಸಹ ಅಲ್ಲಿ ಗ್ರೀನ್ ಸಿಗ್ನಲ್ ಇರುವುದರಿಂದ ಕಾಯಬೇಕಾಗುತ್ತಿತ್ತು. ಆದರೆ ನೂತನ ಎಐ ತಂತ್ರಜ್ಞಾನಾಧಾರಿತ ವ್ಯವಸ್ಥೆಯಲ್ಲಿ ವಾಹನಗಳ ಸಾಂದ್ರತೆಯ ಆಧಾರದಲ್ಲಿ ಸಿಗ್ನಲ್‌ಗಳು ಕಾರ್ಯ ನಿರ್ವಹಿಸುವುದರಿಂದ ಆ ರೀತಿ ಕಾಯಬೇಕಾದ ಅನಿವಾರ್ಯತೆ ವಾಹನ ಸವಾರರಿಗೆ ಇರುವುದಿಲ್ಲ.
2024ರ ಮೇ ತಿಂಗಳಿನಲ್ಲಿ ಆರಂಭಿಸಲಾದ BATCS ಯೋಜನೆಯಡಿ ನಗರದಲ್ಲಿರುವ 123 ಜಂಕ್ಷನ್‌ಗಳಲ್ಲಿ ಈ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಆದಷ್ಟು ಗ್ರೀನ್ ಸಿಗ್ನಲ್‌ಗಳನ್ನು ನೀಡಲು ಅನುಕೂಲವಾಗುತ್ತಿದ್ದು ಸವಾರರ ಪ್ರಯಾಣದ ಸಮಯ ಕಡಿಮೆಯಾಗುವುದಲ್ಲದೆ, ವಾಹನಗಳ ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ. ಜೊತೆಗೆ, ತುರ್ತು ವಾಹನಗಳಿಗೆ ಆದ್ಯತೆಗನುಗುಣವಾಗಿ ಸಂಚಾರ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುತ್ತಿದೆ.
ಈ ಕುರಿತು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್ ಅನುಚೇತ್ ಮಾತನಾಡಿ, "ಸುಗುಮ ಸಂಚಾರ, ಪ್ರಯಾಣಿಕರ ಸಂಚಾರದ ಸಮಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ. ಜನವರಿ ಅಂತ್ಯದ ವೇಳೆಗೆ 165 ಸಿಗ್ನಲ್‌ಗಳನ್ನು BATCS ತಂತ್ರಜ್ಞಾನಾಧರಿತ ಉನ್ನತ ದರ್ಜೆಗೇರಿಸುವ ಗುರಿ ಹೊಂದಲಾಗಿತ್ತು. ಆ ಪೈಕಿ ಇದುವರೆಗೂ 123 ಕಡೆಗಳಲ್ಲಿ ಹೊಸ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ" ಎಂದರು.
ಮುಂದುವರೆದು, "ಈಗಾಗಲೇ ಈ ಸಿಗ್ನಲ್‌ಗಳನ್ನು ಅಳವಡಿಸಿರುವ ಕಡೆಗಳಲ್ಲಿ ಉತ್ತಮ ಫಲಿತಾಂಶವನ್ನು ವಾಹನ ಸವಾರರು ಪಡೆಯುತ್ತಿದ್ದಾರೆ. ಹೊಸ ಸಿಗ್ನಲ್‌ಗಳನ್ನು ಅಳವಡಿಸಲಾಗಿರುವ ಕಡೆಗಳಲ್ಲಿ 20%ರಷ್ಟು ವಾಹನ ಸವಾರರ ಪ್ರಯಾಣದ ಅವಧಿ ಕಡಿಮೆಯಾಗಿದೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಭಾರತದ 30ಕ್ಕೂ ಹೆಚ್ಚು ನಗರಗಳಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಒಟ್ಟಾರೆ 15%ಕ್ಕಿಂತ ಹೆಚ್ಚು ಸಂಚಾರ ದಟ್ಟಣೆಯನ್ನು ತಗ್ಗಿಸಿದೆ" ಎಂದು ತಿಳಿಸಿದರು.
"ಪ್ರಮುಖವಾಗಿ, BATCS ತಂತ್ರಜ್ಞಾನಾಧರಿತ ಸಿಗ್ನಲ್‌ಗಳು, ಕ್ಯಾಮೆರಾ ಫೀಡ್ ಸೇರಿದಂತೆ ಪ್ರತಿ ಕಾರ್ಯ ವಿಧಾನವನ್ನೂ ಸಹ ಸಂಚಾರ ನಿಯಂತ್ರಣ ಕೇಂದ್ರದಿಂದಲೇ ಗಮನಿಸಲು ಹಾಗೂ ನಿಯಂತ್ರಿಸಲು ಸಾಧ್ಯವಿದೆ. ಆದ್ದರಿಂದ ಬದಲಾಗುತ್ತಿರುವ ಸಂಚಾರ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಿಗ್ನಲ್‌ಗಳನ್ನು ಹೊಂದಾಣಿಕೆ ಮಾಡುವ ಆಯ್ಕೆಯೂ ಸಂಚಾರ ಪೊಲೀಸ್ ಇಲಾಖೆಗೆ ಇರಲಿದೆ" ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ನತ್ತ ರಾಜ್ಯ ಸರ್ಕಾರದ ಚಿತ್ತ: ಬೆಂಗಳೂರು ಅಭಿವೃದ್ಧಿ ಸೇರಿ ಯಾವೆಲ್ಲಾ ಪ್ರಮುಖ ಯೋಜನೆಗಳಿಗೆ ಅನುದಾನದ ಬೇಡಿಕೆ?