ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪೆನಿಗಳು ಹಾಗೂ ಲೇವಾದೇವಿದಾರರ ಕಿರುಕುಳಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಸಿದ್ಧಪಡಿಸಿರುವ ಕರಡು ಮಸೂದೆಯನ್ನು ಇಂದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ಕರಡು ಸಿದ್ಧತೆಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳ ಜೊತೆಗೆ ಕಾನೂನು-ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಿನ್ನೆ ಸುದೀರ್ಘ ಸಭೆ ನಡೆಸಿದ್ದರು. ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರ ನೋಂದಣಿಗಾಗಿ ಹೊಸ ನೋಂದಣಿ ಪ್ರಾಧಿಕಾರ ರಚಿಸಲು ನಿರ್ಧರಿಸಿರುವ ಸರ್ಕಾರ, ಹೊಸ ಕಾನೂನು ಜಾರಿಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ.
ಸಾಲಗಾರರಿಗೆ ಹಿಂಸೆ, ಕಿರುಕುಳ ನೀಡುವ ಲೇವಾದೇವಿದಾರರು ಮತ್ತು ಮೈಕ್ರೊ ಫೈನಾನ್ಸ್ ಕಂಪನಿಗಳಿಗೆ ಕನಿಷ್ಠ 6 ತಿಂಗಳಿಂದ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಉದ್ದೇಶಿತ ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
"ಮೈಕ್ರೋ ಫೈನಾನ್ಸ್ ಕಂಪನಿಗಳು ಹಾಗೂ ಲೇವಾದೇವಿದಾರರಿಗೆ ಕಡಿವಾಣ ಹಾಕಲು ಸಿದ್ಧಪಡಿಸಿದ ಕರಡು ಮಸೂದೆಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
"ಕಿರುಸಾಲ ನೀಡುವ ಹಣಕಾಸು ಸಂಸ್ಥೆಗಳ ಆರ್ಥಿಕ ವ್ಯವಹಾರಗಳಿಗೆ ಹೊಸ ಕಾನೂನು ಕಡಿವಾಣ ಹಾಕುವುದಿಲ್ಲ. ಸಾಲ ಇಷ್ಟೇ ಕೊಡಬೇಕು ಎಂಬ ನಿರ್ಬಂಧವನ್ನೂ ಹೇರುವುದಿಲ್ಲ. ನಿಯಮ ಬಾಹಿರ, ಬಲವಂತದ ಸಾಲ ವಸೂಲಾತಿಗೆ ತಡೆ ಹಾಕಲಾಗುವುದು. ಅಧಿವೇಶನದವರೆಗೂ ಕಾಯದೆ ತಕ್ಷಣ ಅಧ್ಯಾದೇಶ ಹೊರಡಿಸಲಾಗುತ್ತಿದೆ" ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಮಸೂದೆಯ ಪ್ರಮುಖ ಅಂಶಗಳು:
- ರಾಜ್ಯದೊಳಗೆ ಸಾಲದ ವಹಿವಾಟು ನಡೆಸುವ ಎಲ್ಲಾ ಮೈಕ್ರೊ ಫೈನಾನ್ಸ್ ಕಂಪೆನಿಗಳ ನೋಂದಣಿ ಕಡ್ಡಾಯ. ಅದಕ್ಕಾಗಿ ನೋಂದಣಿ ಪ್ರಾಧಿಕಾರ ರಚನೆ.
- ನೋಂದಣಿ ಮಾಡದೇ ವಹಿವಾಟು ನಡೆಸಿದರೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ.
- ನೋಂದಣಿ ಸಂದರ್ಭದಲ್ಲಿ ಸಾಲಕ್ಕೆ ವಿಧಿಸುವ ಬಡ್ಡಿ ಹಾಗೂ ಸಾಲ ವಸೂಲಿ ಪದ್ಧತಿ ಸೇರಿ ಸಮಗ್ರ ವಿವರ ಒದಗಿಸಬೇಕು.
- ಯಾವುದೇ ದೂರು ಬಂದಲ್ಲಿ ನೋಟಿಸ್ ನೀಡದೆ ಸಂಬಂಧಪಟ್ಟ ಸಂಸ್ಥೆಯ ನೋಂದಣಿಯನ್ನು ರದ್ದುಪಡಿಸಲು ಪ್ರಾಧಿಕಾರಕ್ಕೆ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
- ನೋಂದಾಯಿತ ಸಂಸ್ಥೆ, ಲೇವಾದೇವಿದಾರ ಮಾಸಿಕ ವ್ಯವಹಾರದ ವಿವರಗಳನ್ನು ಪ್ರತಿ ತಿಂಗಳ 10ರೊಳಗೆ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
- ಸಾಲಗಾರರು ಮತ್ತು ಸಾಲದಾತರ ನಡುವಿನ ವಿವಾದ ಇತ್ಯರ್ಥಪಡಿಸಲು ಹೈಕೋರ್ಟ್ ಜೊತೆ ಸಮಾಲೋಚನೆ ಸಡೆಸಿ ಪ್ರತಿ ಜಿಲ್ಲೆಯಲ್ಲೂ ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ನಿಂದ ಮನೆಗೆ ಬೀಗ: ಬಾಣಂತಿ ಮನೆಗೆ ವಾಪಸ್ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಾಯಕ್ಕೆ ಕುಟುಂಬದಿಂದ ಧನ್ಯವಾದ
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ನೊಂದ ಮಹಿಳೆಯರಿಂದ ಅಭಿಯಾನ!
ಇದನ್ನೂ ಓದಿ: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಊರು ತೊರೆದ ಜನ: ಕಣ್ಣೀರಿಟ್ಟ ಬಾಲಕ