Sunita Williams Selfie:ಕಳೆದ ಏಳೆಂಟು ತಿಂಗಳಿನಿಂದ ಬಾಹ್ಯಾಕಾಶದಲ್ಲೇ ಉಳಿದಿರುವಸುನೀತಾ ವಿಲಿಯಮ್ಸ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಇದು ವೈರಲ್ ಆಗುತ್ತಿದೆ. ಈ ಸೆಲ್ಫಿ ತೆಗೆದುಕೊಂಡಿದ್ದು ಯಾವಾಗ ಎಂಬುದರ ಮಾಹಿತಿ ಇಲ್ಲಿದೆ.
ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಪೆಸಿಫಿಕ್ ಮಹಾಸಾಗರದಿಂದ 423 ಕಿ.ಮೀ ಎತ್ತರದಲ್ಲಿದ್ದಾಗ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಅವರ ಒಂಬತ್ತನೇ ಬಾಹ್ಯಾಕಾಶ ನಡುಗೆಯ ಸಮಯದಲ್ಲಿ ಈ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದರು.
ಜನವರಿ 30, 2025 ರಂದು ಸೆಲ್ಫಿಯಲ್ಲಿ ಸುನೀತಾ ಅವರ ಸ್ಪೇಸ್‌ಸೂಟ್ ಹೆಲ್ಮೆಟ್ ಮುಖವಾಡವು ಅವರ ಕೈಗಳು ಮತ್ತು ಕ್ಯಾಮೆರಾವನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲ, ಆ ಫೋಟೋದಲ್ಲಿ ಪೆಸಿಫಿಕ್ ಮಹಾಸಾಗರ ಸಹ ಗೋಚರಿಸುತ್ತದೆ. ಇದು ಬಾಹ್ಯಾಕಾಶದಿಂದ ಭೂಮಿಯ ಅಪರೂಪದ ಝಲಕ್ವೊಂದನ್ನು ತೋರಿಸಿದೆ.
ಸುನೀತಾ ವಿಲಿಯಮ್ಸ್ ಅವರಿಗೆ ಬಾಹ್ಯಾಕಾಶ ನಡಿಗೆ ಮಹತ್ವದ್ದಾಗಿತ್ತು. ಏಕೆಂದರೆ ಅವರು ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಗಂಟೆಗಳ ಕಾಲ ಕಳೆದ ಮಹಿಳಾ ಗಗನಯಾತ್ರಿ ಎಂಬ ದಾಖಲೆಯನ್ನು ಹಿಂದಿಕ್ಕಿದರು. ಈ ದಾಖಲೆ ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ಅವರ ಹೆಸರಲ್ಲಿತ್ತು. ಅವರು ಈಗ ಒಟ್ಟು 62 ಗಂಟೆ 6 ನಿಮಿಷಗಳ ಬಾಹ್ಯಾಕಾಶ ನಡಿಗೆಯೊಂದಿಗೆ ನಾಸಾದ ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಬಾಹ್ಯಾಕಾಶ ನಡಿಗೆಯ ಉದ್ದೇಶವೇನಿತ್ತು?ಈ ಬಾಹ್ಯಾಕಾಶ ನಡಿಗೆಯ ಪ್ರಾಥಮಿಕ ಉದ್ದೇಶವೆಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ರೇಡಿಯೋ ಫ್ರೀಕ್ವೆನ್ಸಿ ಗ್ರೂಪ್ ಆಂಟೆನಾ ಅಸೆಂಬ್ಲಿಯನ್ನು ತೆಗೆದುಹಾಕುವುದು. ಇದರೊಂದಿಗೆ ಸುನೀತಾ ಮತ್ತು ವಿಲ್ಮೋರ್ ಅವರಿಗೆ ಆರ್ಬಿಟಲ್ ಔಟ್ಪೋಸ್ಟ್ನಲ್ಲಿ ಸೂಕ್ಷ್ಮಜೀವಿಗಳನ್ನು ಕಂಡುಹಿಡಿಯುವ ಕಾರ್ಯವನ್ನು ಸಹ ವಹಿಸಲಾಗಿತ್ತು.
ಜನವರಿ 16 ರಂದು ಸುನೀತಾ ತಮ್ಮ ವೃತ್ತಿಜೀವನದ ಎಂಟನೇ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದರು. ಆ ಬಾಹ್ಯಾಕಾಶ ನಡಿಗೆಯ ಸಮಯದಲ್ಲಿ ಅವರು ಮತ್ತು ಅವರ ಸಹ ಗಗನಯಾತ್ರಿ ನಿಕ್ ಹೇಗ್ ISS ನಲ್ಲಿ ಕೆಲವು ಪ್ರಮುಖ ಯಂತ್ರಾಂಶಗಳನ್ನು ಬದಲಾಯಿಸಿದ್ದರು. ಇದರೊಂದಿಗೆ ನ್ಯೂಟ್ರಾನ್ ಸ್ಟಾರ್ ಇಂಟೀರಿಯರ್ ಕಾಂಪೊಸಿಷನ್ ಎಕ್ಸ್‌ಫ್ಲೋರರ್ (NICER) ಎಕ್ಸ್-ರೇ ದೂರದರ್ಶಕವನ್ನು ಸಹ ದುರಸ್ತಿ ಮಾಡಿದ್ದರು.
ಸುನೀತಾ ಮತ್ತು ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್ 6 ರಂದು ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ISS ಗೆ ತೆರಳಿದ್ದರು. ಅವರಿಬ್ಬರೂ ಸುಮಾರು ಒಂದು ವಾರದೊಳಗೆ, ಅದೇ ತಿಂಗಳ 14 ನೇ ತಾರೀಖಿನಂದು ಭೂಮಿಗೆ ಮರಳುವಂತೆ ನಾಸಾ ನಿರ್ಧರಿಸಿತ್ತು. ಆದರೆ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆಯಿಂದಾಗಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡವು. ಪರಿಣಾಮವಾಗಿ ಇಬ್ಬರೂ ಕಳೆದ ಏಳೆಂಟು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಹ್ಯಾಕಾಶದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ಸಹಾಯ ಕೇಳಿದ್ದಾರೆ ಎಂದು ಇತ್ತೀಚೆಗೆ ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಹೇಳಿದ್ದರು. ಈ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಮಸ್ಕ್ ವಿಶ್ವಾಸ ವ್ಯಕ್ತಪಡಿಸಿದ್ದರು.
ಓದಿ:ಚಂದ್ರಶಿಲೆ ತರಲು 2027ರಲ್ಲಿ ಚಂದ್ರಯಾನ -4 ಮಿಷನ್, 26ರಲ್ಲಿ ಸಮುದ್ರದಾಳಕ್ಕೆ ಪಯಣ : ಸಚಿವ ಜಿತೇಂದ್ರ ಸಿಂಗ್