ಧಾರವಾಡ:ಬೆಳಗಾವಿ ಸುವರ್ಣಸೌಧದ ಎದುರು ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರಿಂದ ಲಾಠಿ ಜಾರ್ಚ್ ವಿಚಾರಕ್ಕೆ ಸಂಬಂಧ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಈ ಬಗ್ಗೆ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಇಲಾಖೆಗೆ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದಿಂದ ನೋಟಿಸ್ ಜಾರಿಯಾಗಿದೆ.
12 ಜನರ ಮೇಲೆ ಎಫ್‌ಐಆರ್ ಆಗಿದೆ:ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ವಕೀಲರ ಪರಿಷತ್ ಸೇರಿ ನಾಲ್ವರು ಧಾರವಾಡ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಬಗ್ಗೆ ಧಾರವಾಡದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ''ಲಾಠಿ ಚಾರ್ಜ್ ಬಳಿಕ ಎಫ್‌ಐಆರ್ ಆಗಿದೆ. 12 ಜನರ ಮೇಲೆ ಎಫ್‌ಐಆರ್ ಮಾಡಿದ್ದಾರೆ. ಅದನ್ನು ರದ್ದುಪಡಿಸಬೇಕು ಎಂದು ಕೇಳಿದ್ದೆವು. ಸಿಎಂ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದೆವು. ಆದರೆ, ಯಾವುದಕ್ಕೂ ಸಿಎಂ ಸ್ಪಂದಿಸಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ'' ಎಂದು ಸ್ಪಷ್ಟಪಡಿಸಿದರು.
''ನಮ್ಮ ಪರವಾಗಿ ಪ್ರಭುಲಿಂಗ ನಾವದಗಿ, ಪೂಜಾ ಸವದತ್ತಿ ವಾದ ಮಂಡಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶ ಆಗಿದೆ. ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಹಲ್ಲೆ ಆಗಿದ್ದಕ್ಕೆ ಸಮಾಜದವರು ದೃತಿಗೆಡುವುದು ಬೇಡ. ಹಲ್ಲೆ ಆದವರಿಗೆ ಆತ್ಮಸ್ಥೈರ್ಯ ತುಂಬಲಿದ್ದೇವೆ. ಬೆಳಗಾವಿಯಲ್ಲಿ ಡಿ.23ಕ್ಕೆ ಗಾಯಗೊಂಡವರ ಮನೆ ಮನೆಗೆ ಭೇಟಿ ನೀಡುತ್ತೇವೆ'' ಎಂದರು.