ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹೊರಬರಲಾಗದೆ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಕಾರ್ಪೇಂಟರ್ ಹಾಗೂ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಉದಯ್ ಹಾಗೂ ರೋಷನ್ ಮೃತರು. ಸೀಗೆಹಳ್ಳಿಯ ಶಿವಾನಿ ಗ್ರೀನ್ಸ್ ಬಡಾವಣೆಯಲ್ಲಿ ಮಂಡ್ಯ ಮೂಲದ ಸತೀಶ್ ಎಂಬವರು ಮೂರು ಅಂತಸ್ತಿನ ಕಟ್ಟಡ ಕಟ್ಟುತ್ತಿದ್ದರು.
ಬಹುತೇಕ ಪೂರ್ಣಗೊಂಡಿದ್ದ ಕಟ್ಟಡದಲ್ಲಿ ಪೇಂಟಿಂಗ್ ಹಾಗೂ ವುಡ್ ವರ್ಕ್ ಬಾಕಿ ಉಳಿದಿದ್ದವು. ಎಂದಿನಂತೆ ಸುಮಾರು 6 ಮಂದಿ ಕಾರ್ಮಿಕರು ಇಂದು ಬೆಳಗ್ಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ದಿಢೀರನೇ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಧಗಧಗನೇ ಬೆಂಕಿ ಹೊತ್ತಿ ಉರಿದಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಕಟ್ಟಡದಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಬಳಿಕ ಒಳಗೆ ತೆರಳಿ ನೋಡಿದಾಗ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟವಾಗಿಲ್ಲ : ಬೆಂಕಿ ನಂದಿಸಿದ ಬಳಿಕ ಮಾತನಾಡಿದ ಅಗ್ನಿಶಾಮಕ ಇಲಾಖೆ ಹಿರಿಯ ಅಧಿಕಾರಿ ಕಿಶೋರ್, ''ಇಂದು ಬೆಳಗ್ಗೆ 11.10 ಸುಮಾರಿಗೆ ಅಗ್ನಿ ದುರಂತದ ಬಗ್ಗೆ ಸುಂಕದಕಟ್ಟೆ ಅಗ್ನಿಶಾಮಕ ಠಾಣೆಗೆ ಮಾಹಿತಿ ಬಂದಿತ್ತು. ರಾಜಾಜಿನಗರ ಹಾಗೂ ಪೀಣ್ಯ ಅಗ್ನಿಶಾಮಕ ಠಾಣೆಗಳಿಂದ ಹೆಚ್ಚುವರಿ ತಲಾ ಒಂದೊಂದು ವಾಹನಗಳನ್ನ ತರಿಸಿಕೊಂಡು ಸಂಪೂರ್ಣವಾಗಿ ಬೆಂಕಿ ನಂದಿಸಲಾಗಿದೆ. ಕಾರ್ಯಾಚರಣೆ ವೇಳೆ ಕಟ್ಟಡದಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದೆ. ಒಳಗೆ ಹೋಗಿ ನೋಡಿದಾಗ ಎರಡನೇ ಹಾಗೂ ಮೂರನೇ ಮಹಡಿಯ ಕೊಠಡಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ'' ಎಂದು ತಿಳಿಸಿದರು.
''ಕಾರ್ಮಿಕರು ಸ್ಥಳದಲ್ಲಿ ಅಡುಗೆ ಮಾಡುತ್ತಿದ್ದು, ಸ್ಥಳದಲ್ಲಿದ್ದ ಸಣ್ಣ ಪ್ರಮಾಣದ ಸಿಲಿಂಡರ್ ದೊರೆತಿದೆ. ಆದರೆ ಇದು ಸ್ಫೋಟಗೊಂಡಿಲ್ಲ. ಈ ಬಗ್ಗೆ ತನಿಖೆ ಮುಂದುವರೆದಿದೆ'' ಎಂದು ಕಿಶೋರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಮನಗರ: ಚಲಿಸುತ್ತಿದ್ದ ಕಾರಿಗೆ ಬೆಂಕಿ, ಕಾರಲ್ಲಿದ್ದ 10 ಜನ ಪ್ರಾಣಾಪಾಯದಿಂದ ಪಾರು